ತುಮಕೂರು-ಸರ್ಕಾರಿ ನೌಕರರು ಸೇವಾ ಬದ್ಧತೆ ರೂಢಿಸಿಕೊಳ್ಳಿ- ಜಿಲ್ಲಾಧ್ಯಕ್ಷ ನರಸಿಂಹರಾಜು ಸಲಹೆ

ತುಮಕೂರು: ಸಾರ್ವಜನಿಕ ಸೇವಕರಾದ ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಯಲ್ಲಿ ಪ್ರಾಮಾಣಿಕತೆ, ದಕ್ಷತೆ ಹಾಗೂ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಸಲಹೆ ಮಾಡಿದರು.

ನಗರದ ಸಂಘದ ಕಚೇರಿಯಲ್ಲಿ ನಡೆದ ಸರ್ಕಾರಿ ನೌಕರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ಕರ್ತವ್ಯಗಳ ಬಗ್ಗೆ ಚಿಂತಿಸುವ ಹಾಗೂ ಉತ್ತಮ ನಾಗರೀಕ ಸೇವಕರಿಗೆ ವಂದಿಸುವ ದಿನ ಇದಾಗಿದೆ.ನೌಕರರು ಸಾರ್ವಜನಿಕ ಸೇವೆ ಸಲ್ಲಿಸುವ ಬಾಧ್ಯತೆಯನ್ನು ಉತ್ತಮಪಡಿಸಿಕೊಂಡು ಆಡಳಿತದ ಶ್ರೇಷ್ಠತೆಯನ್ನು ಗೌರವಿಸಬೇಕು ಎಂದರು.

ಸರ್ಕಾರದ ವಿವಿಧ ಇಲಾಖೆಗಳಿಗೆ ಪ್ರತ್ಯೇಕ ದಿನಾಚರಣೆಗಳಿರುತ್ತವೆ. ಎಲ್ಲಾ ಇಲಾಖೆಗಳೂ ಒಟ್ಟುಗೂಡಿ ಆಚರಿಸುವ ಸರ್ಕಾರಿ ನೌಕರರ ದಿನಾಚರಣೆ ವಿಶೇಷವಾದದ್ದು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರು ತಮ್ಮ ಕರ್ತವ್ಯ, ಸೇವೆಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಂಡು ಲೋಪಗಳನ್ನು ಸರಿಪಡಿಸಿಕೊಳ್ಳುವ ಸಂದರ್ಭ ಇದು.ಸಾರ್ವಜನಿಕ ಸೇವೆಯಲ್ಲಿ ಉತ್ತಮ ಸೇವೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದು ಹಾಗೂ ಆ ಮೂಲಕ ಇತರ ನೌಕರರಿಗೆ ಪ್ರೇರಣೆ ನೀಡಲು ಸರ್ವೋತ್ತಮ ಪ್ರಶಸ್ತಿ ನೀಡಲಾಗುತ್ತಿದೆ.ಇದರೊಂದಿಗೆ ಉತ್ತಮ ಸೇವೆಯ ಸಾರ್ವಜನಿಕ ಸೇವಕರಿಗೆ ಗೌರವ ಸಮರ್ಪಿಸಲಾಗುತ್ತದೆ ಎಂದು ಹೇಳಿದರು.

ಸಾರ್ವಜನಿಕ ಸೇವಕರು ಬೇರೆಡೆ ತಿಳಿದ, ಅನುಭವವಾದ ಅನುಭವಗಳನ್ನು ತಮ್ಮ ಸೇವಾ ವೃತ್ತಿಯಲ್ಲಿ ಅಳವಡಿಸಿಕೊಂಡು ಸೇವೆಯನ್ನು ಉತ್ತಮಪಡಿಸಿಕೊಳ್ಳಬೇಕು.ಸರ್ಕಾರದ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ, ತಳಮಟ್ಟದ ಜನರ ಅಗತ್ಯತೆಗಳನ್ನು ಗುರುತಿಸಿ ಪೂರೈಸುವುದು.ವಿಪತ್ತು ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ಮುಂಚೂಣಿಯ ಪ್ರತಿಸ್ಪಂದನೆ ನೀಡಬೇಕು. ನಿಸ್ಪಕ್ಷಪಾತ, ಸಮಗ್ರತೆ, ಗೌರವ ಬದ್ಧತೆಯಿಂದ ಕೆಲಸ ಮಾಡಿರಾಷ್ಟçದಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಬೇಕು ಎಂದು ಎನ್.ನರಸಿಂಹರಾಜು ಹೇಳಿದರು.

ಈ ವೇಳೆ ಸಂಘದ ಜಿಲ್ಲಾ ಗೌರವಾಧ್ಯಕ್ಷ ರೇಣುಕಾರಾಧ್ಯ, ಉಪಾಧ್ಯಕ್ಷರಾದ ಜಿ.ಎನ್.ರಾಧಾಕೃಷ್ಣ, ಡಿ.ಪದ್ಮರಾಜು, ಕೆ.ಎಲ್.ನರಸಿಂಹಮೂರ್ತಿ, ಮಂಜುಳಾ, ಪ್ರಧಾನ ಕಾರ್ಯದರ್ಶಿ ಆರ್.ಪರಮೇಶ್, ಖಜಾಂಚಿ ಹರೀಶ್‌ಕುಮಾರ್, ರಾಜ್ಯ ಪರಿಷತ್ ಸದಸ್ಯ ಗಟ್ಟಿಗಂಗಾಧರ್, ಸೇರಿದಂತೆ ಸಂಘದ ನಿರ್ದೇಶಕರು, ವಿವಿಧ ಘಟಕಗಳ ಪದಾಧಿಕಾರಿಗಳು, ಅಧಿಕಾರಿ, ನೌಕರರು ಸಮಾರಂಭದಲ್ಲಿ ಭಾಗವಹಿಸಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?