ಕೊರಟಗೆರೆ:– ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಮಠದಲ್ಲಿ ನಡೆಯುವ ಶಿಬಿರಗಳು ಶಕ್ತಿ ಕೇಂದ್ರಗಳಾಗಿವೆ , ಸಂಸ್ಕಾರ ಶಿಬಿರ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಎಲೆರಾಂಪುರ ಕುಂಚಿಟಿಗ ಒಕ್ಕಲಿಗ ಮಹಾ ಸಂಸ್ಥಾನ ಮಠದಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಗಳ ಸಂಸ್ಕಾರ ಶಿಬಿರ ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಭಿರಗಳು ಭವಿಷ್ಯ ರೂಪಿಸಲಿವೆ ಎಂದರು.

ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರಗಳು:- ಸಂಸ್ಕೃತಿ ಮತ್ತು ಸಂಸ್ಕಾರಗಳಿಂದಲೇ ವ್ಯಕ್ತಿತ್ವದ ಆಧಾರಶಿಲೆ ನಿರ್ಮಾಣವಾಗುತ್ತದೆ, ಇಂದಿನ ತಲೆಮಾರಿಗೆ ನಾಳೆಯ ನಾಯಕರನ್ನಾಗಿ ರೂಪಿಸುವ ಶಕ್ತಿ ಇಂತಹ ಶಿಬಿರಗಳಲ್ಲಿ ಅಡಗಿದೆ, ಇವು ಕೇವಲ ಶಿಬಿರಗಳು ಅಲ್ಲ, ಸಮಾಜ ಪರಿವರ್ತನೆಗೆ ಉತ್ಸಾಹಭರಿತ ವೇದಿಕೆಗಳಾಗಿವೆ ,ವೈಜ್ಞಾನಿಕ ಪ್ರಗತಿಯಲ್ಲಿ ಮುನ್ನುಗ್ಗುತ್ತಿದ್ದರೂ, ನಾವು ನಮ್ಮ ಜಡಮೂಲಗಳನ್ನು ಮರೆಯಬಾರದು, ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸದೆ, ಶಿಕ್ಷಣವೂ ಅಪೂರ್ಣವಾಗುತ್ತದೆ. ಈ ಶಿಬಿರಗಳು ನವೋದಯದ ನಾನಾ ಮುಖಗಳನ್ನು ಆವಿಷ್ಕರಿಸುತ್ತಿದ್ದು ಸಂಸ್ಕೃತಿಯೊಂದಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶಿಬಿರ ಆಯೋಜಿಸಿ ಕುಂಚಿಟಿಗ ಶ್ರೀಗಳು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಶ್ರೀಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಮ್ಮ ಉದ್ದೇಶಪೂರ್ಣ ಉಪನ್ಯಾಸದಲ್ಲಿ “ಶ್ರದ್ಧೆ, ಶಿಸ್ತು ಮತ್ತು ಸೇವಾ ಮನೋಭಾವನೆ ನಮ್ಮ ಜೀವನದ ಮಾರ್ಗದರ್ಶಕರು. ಇಂತಹ ಶಿಬಿರಗಳ ಮೂಲಕ ಯುವ ಜನತೆಯ ಮನಸ್ಸಿನಲ್ಲಿ ಧಾರ್ಮಿಕತೆ ಮತ್ತು ಜವಾಬ್ದಾರಿ ಉಳ್ಳ ವ್ಯಕ್ತಿತ್ವ ಬೆಳೆಸುವ ಅವಕಾಶ ಸಿಗುತ್ತದೆ. ಮಠವು ಇಂತಹ ಶಿಬಿರಗಳಿಗೆ ಸದಾ ಪ್ರೋತ್ಸಾಹ ನೀಡುತ್ತದೆ, ನಾವು ಭವಿಷ್ಯವನ್ನು ರೂಪಿಸುತ್ತಿಲ್ಲ; ಭವಿಷ್ಯದ ರೂಪುಳಾಗುತ್ತಿರುವ ಮಕ್ಕಳಿಗೆ ನೈತಿಕ ದಿಕ್ಕು ತೋರಿಸುತ್ತಿದ್ದೇವೆ, ಗೃಹ ಸಚಿವ ಪರಮೇಶ್ವರ್ ಮಠಕ್ಕೆ ಆದಾರ ಸ್ತಂಭದ ರೀತಿ ಪ್ರೋತ್ಸಾಹ ನೀಡುತ್ತಿದ್ದು ನಮ್ಮೆಲ್ಲ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಅವರ ಪ್ರೋತ್ಸಾಹ ಹೆಚ್ಚಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಪ್ರದರ್ಶನಗಳು, ಭಜನೆ, ಧಾರ್ಮಿಕ ಉಪನ್ಯಾಸಗಳು ಮತ್ತು ಶಿಸ್ತುಪೂರಿತ ಶಿಬಿರದ ಕಾರ್ಯಕ್ರಮಗಳು ಹಾಜರಿದ್ದ ಎಲ್ಲರ ಮೆಚ್ಚುಗೆ ಗಳಿಸಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಅಪೂರ್ವ , ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಗೌಡ,ಗ್ರಾಮಾಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆ ಶಂಕರ್, ಮುಖಂಡರಾದ ಶ್ರೀನಿವಾಸ ಮೂರ್ತಿ, ಸೇರಿದಂತೆ ಹಲವು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್