ಕೆ.ಆರ್.ಪೇಟೆ-ಮಕ್ಕಳ ಸಂಸ್ಕಾರ ಜ್ಞಾನ ಶಿಬಿರದಲ್ಲಿ ಅಗ್ನಿ ಅವಘಡಗಳ ತಡೆ ಕುರಿತು ಪ್ರಾತಕ್ಷತೆ- ಅಗ್ನಿಶಾಮಕ ವಾಹನ ಸುರಿಸಿದ ಕೃತಕ ಮಳೆಯಲ್ಲಿ ಮಿಂದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ಮಕ್ಕಳು

ಕೆ.ಆರ್.ಪೇಟೆ- ಪ್ರಕೃತಿಯ ಸಮತೋಲನ ಹಾಗೂ ಮಾನವನ ನೆಮ್ಮದಿಯ ಜೀವನಕ್ಕಾಗಿ ಪಂಚ ಭೂತಗಳ ಸಂರಕ್ಷಣೆಯು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಕೆ. ಆರ್.ಪೇಟೆ ಅಗ್ನಿಶಾಮಕ ಠಾಣೆಯ ಅಧಿಕಾರಿ ಚಂದ್ರಶೇಖರ್ ಹೇಳಿದರು.

ಅವರು ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದಲ್ಲಿ ನಡೆಯುತ್ತಿರುವ ಸಂಸ್ಕಾರ ಜ್ಞಾನ ಶಿಬಿರದಲ್ಲಿ ಭಾಗವಹಿಸಿ ಅಗ್ನಿ ಅವಘಡಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಬೆಂಕಿಯನ್ನು ನಂದಿಸುವ ಮಾರ್ಗೋಪಾಯ ಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಅಡುಗೆ ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಗಳು ಸ್ಫೋಟವಾಗುತ್ತಿರುವ ಬಗ್ಗೆ ನಾವು ಪ್ರತಿದಿನವೂ ಮಾಧ್ಯಮಗಳು ಹಾಗೂ ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೇವೆ. ಗ್ಯಾಸ್ ಸಿಲಿಂಡರ್ ಗೆ ಬಳಸುವ ರೆಗ್ಯುಲೇಟರ್ ಮತ್ತು ಪೈಪಿನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದೆಯೇ ಎಂಬ ಬಗ್ಗೆ ತಾಯಂದಿರು ಎಚ್ಚರವಾಗಿರಬೇಕು. ಅಡುಗೆ ಕೆಲಸ ಮುಗಿದ ನಂತರ ರೆಗ್ಯುಲೇಟರ್ ಅನ್ನು ಆರಿಸುವುದನ್ನು ಮರೆಯಬಾರದು. ಅಡುಗೆ ಮನೆಗೆ ಚೆನ್ನಾಗಿ ಗಾಳಿ ಬೆಳಕು ಬರುವಂತೆ ನೋಡಿಕೊಂಡು ಗ್ಯಾಸ್ ಸೋರಿಕೆ ಆಗುತ್ತಿರುವ ಬಗ್ಗೆ ಸುಳಿವು ಸಿಕ್ಕಕೂಡಲೇ ಕಿಟಕಿ ಬಾಗಿಲುಗಳನ್ನು ತೆರೆದು ಗ್ಯಾಸ್ ಹೊರಗೆ ಹೋಗುವಂತೆ ಮಾಡಿದ ನಂತರವೇ ಅಡುಗೆ ಕೆಲಸವನ್ನು ಆರಂಭಿಸುವಂತೆ ತಾಯಂದಿರಿಗೆ ಅರಿವು ಮೂಡಿಸಬೇಕು.

ಅಗ್ನಿ ಅವಘಡವು ಅತ್ಯಂತ ಅಪಾಯಕಾರಿ ಯಾಗಿರುವುದರಿಂದ ಬೆಂಕಿ ಹತ್ತಿಕೊಂಡರೆ ಕ್ಷಣ ಮಾತ್ರದಲ್ಲಿ ನಾವು ಕಷ್ಟ ಪಟ್ಟು ಗಳಿಸಿರುವ ಎಲ್ಲಾ ವಸ್ತುಗಳು ಸುಟ್ಟು ಬೂದಿಯಾಗುವುದರರಿಂದ ಅಗ್ನಿ ಅನಾಹುತಗಳ ಬಗ್ಗೆ ಶ್ರೀ ಸಾಮಾನ್ಯರು ಸದಾ ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.


ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸಲು ಬಳಸುವ ವಸ್ತುಗಳಿಂದ ನೀರನ್ನು ಸಿಡಿಸಿದಾಗ ಮಕ್ಕಳು ರೋಮಾಂಚನಗೊಂಡರು. ಕೃತಕ ಮಳೆಯಲ್ಲಿ ಮಿಂದು ಪುಳಕಿತರಾದ ಮಕ್ಕಳು ಅಗ್ನಿ ಅನಾಹುತಗಳನ್ನು ತಡೆಯುವ ಜೊತೆಗೆ ಸದಾ ಜಾಗೃತರಾಗಿರುವುದಾಗಿ ಘೋಷಿಸಿದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಡದಹಳ್ಳಿ ಮಠದ ಪೂಜ್ಯ ಸ್ವಾಮೀಜಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿಗಳು ಆಶೀರ್ವಚನ ನೀಡಿ ಪಂಚೇಂದ್ರಿಯಗಳಲ್ಲಿ ಅಗ್ನಿಯ ತೀವ್ರತೆಯು ಹೆಚ್ಚಾಗಿದೆಯಲ್ಲದೇ ಅಪಾಯಕಾರಿಯಾಗಿದೆ. ಆದ್ದರಿಂದ ಅಗ್ನಿ ಅವಘಡಗಳ ಬಗ್ಗೆ ಮಕ್ಕಳು ಹಾಗೂ ಯುವಜನರು ಸದಾ ಕಾಲವೂ ಜಾಗರೂಕರಾಗಿರಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ಮಕ್ಕಳ ಪೋಷಕರು ಹಾಗೂ ಬೆಡದಹಳ್ಳಿಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?