ಕೊರಟಗೆರೆ- ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ತಲುಪಿಸುವುದು ಕಾರ್ಯದರ್ಶಿಗಳ ಜವಾಬ್ದಾರಿ-ತುಮುಲ್ ನ ಕೊರಟಗೆರೆ ನಿರ್ದೇಶಕ ಸಿದ್ದಗಂಗಯ್ಯ

ಕೊರಟಗೆರೆ – ಸರ್ಕಾರದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಜವಾಬ್ದಾರಿ ಕಾರ್ಯದರ್ಶಿಗಳದ್ದು ಎಂದು ತುಮುಲ್ ನ ಕೊರಟಗೆರೆ ನಿರ್ದೇಶಕ ಸಿದ್ದಗಂಗಯ್ಯ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಪಕ್ಕದಲ್ಲಿರುವ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಮತ್ತು ತುಮಕೂರು ಜಿಲ್ಲಾ ಯೂನಿಯನ್ ಹಾಗೂ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ತುಮಕೂರು ಜಿಲ್ಲಾ ಸಹಕಾರ ಇಲಾಖೆಯ ವತಿಯಿಂದ ಆಯೋಜಿಸಿದ್ದ, ಕೊರಟಗೆರೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2025-26 ನೇ ಸಾಲಿನಲ್ಲಿ ಸಹಕಾರ ಸಂಘಗಳ ಸಹಯೋಗದೊಂದಿಗೆ ಈ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು ನಮ್ಮ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಕ್ರಮ ಅತಿ ಮುಖ್ಯವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಬದಲಾಗುವ ಕಾನೂನು ತಿದ್ದುಪಡಿ ಕಾಯ್ದೆಗಳನ್ನು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವುಗಳನ್ನ ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ತರಬೇತಿ ಕಾರ್ಯಕ್ರಮಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳು ಇದರ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದ ಅವರು, ನಮ್ಮ ತಾಲೂಕಿನಲ್ಲಿಯೂ ಸಹ ಕ್ಷೀರ ಭವನ ನಿರ್ಮಾಣವಾಗಬೇಕು ಅದಕ್ಕಾಗಿ ನಿಮ್ಮಗಳ ಸಹಕಾರ ಮತ್ತು ಪ್ರೋತ್ಸಾಹ ಬೇಕಾಗಿದೆ.  ಪ್ರತಿಯೊಬ್ಬ ರೈತರಿಗೂ ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿ ಮತ್ತು ಅದರಿಂದ ಆಗುವ ಉಪಯೋಗಗಳ ಬಗ್ಗೆ ಸಹಕಾರ ಸಂಘಗಳ ಎಲ್ಲಾ ರೈತರಿಗೆ ಮಾಹಿತಿ ನೀಡುವುದು ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಸಹಕಾರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸಹಕಾರ ಸಂಘಗಳ ಸಹಯೋಗದಲ್ಲಿ ಕೊರಟಗೆರೆ ತಾಲ್ಲೂಕಿನ ಹಾಲು ಉತ್ಪಾದಕ ಸಾಗರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬದಲಾಗುವ ಕಾನೂನು ತಿದ್ದುಪಡಿಗಳನ್ನು ಅರಿತು ಕೊಂಡಾಗ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗಿ ಮುನ್ನುಗಲು ಸಾಧ್ಯ, ಡೈರಿ ಕಾರ್ಯದರ್ಶಿಗಳಿಗೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನೀಡಬೇಕೆಂದು ಸನ್ಮಾನ್ಯ ಸಹಕಾರ ಸಚಿವ ಕೆಎನ್ ರಾಜಣ್ಣನವರು ಒತ್ತು ನೀಡಿದ್ದಾರೆ. ಈ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.

ಬೆಂಗಳೂರಿನ ಸರ್ಕಾರ ಸಂಘಗಳ ಅಪರ ನಿರ್ದೇಶಕ ನಾಗರಾಜಯ್ಯ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನಡೆಯುವ ಚುನಾವಣೆಯ ಪ್ರಕ್ರಿಯೆ ಯಾವ ರೀತಿ ಮಾಡಬೇಕು, ಮತ್ತು ಇತ್ತೀಚಿನ ದಿನಗಳಲ್ಲಿ ಬದಲಾಗಿರುವ ಕಾನೂನು ತಿದ್ದುಪಡಿಯ ಕಾಯ್ದೆಗಳನ್ನ ತಿಳಿದುಕೊಳ್ಳುವ ಸಲುವಾಗಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹೈನುಗಾರಿಕೆ ಕ್ಷೇತ್ರದಲ್ಲೇ ಭಾರತದಲ್ಲಿ ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಮ್ಮ ನಾಡಿನ ರೈತರು ಅತಿ ಹೆಚ್ಚಾಗಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಲು ಉತ್ಪಾದಕ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ. ಸಹಕಾರ ಸಂಘಗಳ ರೈತರ ಆರ್ಥಿಕ ಸುಧಾರಣೆ ಮಾಡಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಭಾರಿಗಳಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷ ಕಾಂತರಾಜು, ಕೊರಟಗೆರೆ ಪಿಎಲ್‌ಡಿ ಬ್ಯಾಂಕ್ ನ ಅಧ್ಯಕ್ಷ ಚಿಕ್ಕ ರಂಗಯ್ಯ, ಶಿವಾನಂದ್, ವಿಸ್ತೀರ್ಣ ಅಧಿಕಾರಿ ಬಶೀರ್, ವಿಸ್ತೀರ್ಣ ಸಮಾಲೋಚಕ ಜಯಕುಮಾರ್, ಮುಖ್ಯಸ್ಥರಾದ ಗುರುರಾಜ್, ಟಿ ಆರ್ ಪುಷ್ಪಲತಾ ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಂಘಗಳ ಕಾರ್ಯದರ್ಶಿಗಳು ಹಾಜರಿದ್ದರು.

  • ಶ್ರೀನಿವಾಸ್‌ , ಕೊರಟಗೆರೆ

Leave a Reply

Your email address will not be published. Required fields are marked *

× How can I help you?