ಚಿಕ್ಕಮಗಳೂರು- ಮಾದಕ ದ್ರವ್ಯಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಗಾಂಜಾ, ಅಫೀಮುಗಳ ಉತ್ಪಾದನೆ, ಸಂಗ್ರಹ ಅಥವಾ ಮಾರಾಟಗಳು ಕಂಡುಬಂದಲ್ಲಿ ಶೀಘ್ರವೇ ಪೋಲೀಸರನ್ನು ಸಂಪರ್ಕಿಸಿ ಎಂದು ಸೈಬರ್ ಆರ್ಥಿಕ ಮಾದಕ ವಸ್ತು ಅಪರಾಧ ವಿಭಾಗದ ಡಿವೈಎಸ್ಪಿ ತಿಪ್ಪೇಸ್ವಾಮಿ ಹೇಳಿದರು.
ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ಧ ಮಾದಕ ದ್ರವ್ಯಗಳ ನಿಯಂತ್ರಣ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾದಕ ವಸ್ತುಗಳಿಗೆ ದಾಸರಾಗದೇ ಸಂಯಮ, ಆತ್ಮಶಕ್ತಿ ಹಾಗೂ ಸ್ವಬಲವನ್ನು ಅಳವಡಿಸಿಕೊಳ್ಳಬೇಕು ಎಂದರು.
ಭವಿಷ್ಯದ ಪ್ರಜೆಗಳನ್ನು ನೆಲೆಸಮಗೊಳಿಸುವ ನಿಟ್ಟಿನಲ್ಲಿ ಕೆಲವು ಕಿಡಿಕೇಡಿಗಳು ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ ಚಟುವಟಿಕೆಗಳನ್ನು ಶಾಲಾ-ಕಾಲೇಜು ಅಥವಾ ಇನ್ನಿತರ ಪ್ರದೇಶಗಳಲ್ಲಿ ತೊಡಗಿವೆ. ಹೀಗಾಗಿ ವಿದ್ಯಾರ್ಥಿಗಳು ಬದುಕು ಹಾಳಾಗಿಸುವ ದುಶ್ಚಟಗಳಿಗೆ ಬಲಿಯಾಗದೇ ಗಟ್ಟಿತನದಿಂದ ಕೂಡಿರಬೇಕು ಎಂದು ಹೇಳಿದರು.
ನಶೆ ಪದಾರ್ಥಗಳು ಯುವಪೀಳಿಗೆಯನ್ನು ಹೆಚ್ಚಾಗಿ ಆವರಿಸುತ್ತಿದೆ. ಕ್ಷಿಣಿಕ ಸುಖಕ್ಕಾಗಿ ವರ್ಷಗಟ್ಟಲೇ ವಿದ್ಯಾಭ್ಯಾಸ, ಅನಾರೋಗ್ಯದ ಸಂಕಷ್ಟ ಹಾಗೂ ಅಂಗಾಂಗಳ ವೈಫಲ್ಯತೆಗಳಿಗೆ ಕಾರಣವಾಗಲಿದೆ. ಸ್ವಬುದ್ಧಿ ಯಿಂದ ಯುವಕರು ಮುಂದಾದರೆ ಕೆಟ್ಟ ಅಭ್ಯಾಸಗಳಿಂದ ದೂರವಿರಬಹುದು. ಜೊತೆಗೆ ಈ ಚಟುವಟಿಕೆಗಳ ಮಾಹಿತಿ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದಂತೆ ಎಂದು ಹೇಳಿದರು.

ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಮಾತನಾಡಿ, ಓದಿನ ವಯಸ್ಸಿನಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಮಹತ್ವ ವಿದ್ಯಾಭ್ಯಾಸಕ್ಕೆ ಮುಡಿಪಿಡಬೇಕು. ಉತ್ತಮ ಗೆಳೆಯರ ಸಹವಾಸದಿಂದ ಸಜ್ಜನ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಹಾಗಾಗಿ ಸಮಾಜದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಯಾವುದೇ ಅನಗತ್ಯ ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.
ಎಐಟಿ ಕಾಲೇಜು ಮೆಕ್ಯಾನಿಕಲ್ ಇಂಜನಿಯರ್ ವಿಭಾಗದ ಸಂಯೋಜಕ ಜಿ.ಎಂ.ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಮುಂದೆ ಯಾವುದೇ ಚಟಗಳಿಗೆ ಬಲಿಯಾಗಬಾರದೆಂಬ ದೃಷ್ಟಿಯಿಂದ ವಿಶೇ ಷ ಪರಿಣಿತರು, ಅಧಿಕಾರಿಗಳನ್ನು ಕರೆಸಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಸಮರ್ಪಕವಾಗಿ ಬಳಸಿಕೊಂಡು ನಾಡಿನ ಸತ್ಪçಜೆಗಳಾಗಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಅಶ್ವಥ್‌ಬಾಬು, ಆರೋಗ್ಯ ಮತ್ತು ಕುಟುಂಬದ ಮನೋವೈದ್ಯ ಡಾ|| ವಿನಯ್ ಹಾಗೂ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಸುರೇಶ್ ಎನ್.