ತುಮಕೂರು-ಡಾ.ರಾಜ್ ಈ ನೆಲದ ಸಾಂಸ್ಕೃತಿಕ ನಾಯಕ-ಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು: ವರನಟ ಡಾ.ರಾಜ್‌ಕುಮಾರ್ ಅವರು ಈ ನಾಡಿನ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕ.ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡುವ ದಿನವಾಗಿ ಅವರ ಜನ್ಮ ದಿನವನ್ನು ಕನ್ನಡಿಗರು ಆಚರಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಹೊರಪೇಟೆರಸ್ತೆಯ ಡಾ.ರಾಜ್‌ಕುಮಾರ್ ಹೋಟೆಲ್ ಎಂದೇ ಹೆಸರಾದ ಹರಳೂರು ಶಿವಕುಮಾರ್ ಇಡ್ಲಿ ಹೋಟೆಲ್ ಬಳಗದಿಂದ ನಡೆದ ಡಾ.ರಾಜ್‌ಕುಮಾರ್‌ ಅವರ 97ನೇ ಹುಟ್ಟುಹಬ್ಬದ ಅಂಗವಾಗಿ ಡಾ.ರಾಜ್ ಅವರ ಬೆಳ್ಳಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಹರಳೂರು ಶಿವಕುಮಾರ್ ಅವರು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅವರು ನಿಧನರಾದ ನಂತರ ಶಿವಕುಮಾರ್ ಅವರ ಪುತ್ರ ಮನು ಅವರು ಆ ಪರಂಪರೆಯನ್ನು ಮುಂದುವರೆಸಿಕೊAಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.

ಡಾ.ರಾಜ್‌ಕುಮಾರ್ ಕೇವಲ ಕಲಾವಿದ ಮಾತ್ರಆಗದೆ ಈ ನಾಡಿನ ಶ್ರೇಷ್ಠ ಆದರ್ಶ ವ್ಯಕ್ತಿಯಾಗಿ ಮಾದರಿಯಾಗಿದ್ದಾರೆ.ಅವರ ಸಿನಿಮಾಗಳೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಸಾಮಾಜಿಕ ಪರಿವರ್ತನೆಗೂ ಕಾರಣವಾಗಿವೆ.ಗೋಕಾಕ್ ಚಳವಳಿಯ ಮುಂಚೂಣಿ ನಾಯಕರಾಗಿ ಡಾ.ರಾಜ್‌ಕುಮಾರ್ ಭಾಗವಹಿಸಿ ನಾಡಿನ ರಕ್ಷಣೆಗೆ ಮುಂದಾಗಿದ್ದರು.ಅವರು ತಮ್ಮ ನಟನಾ ವೃತ್ತಿಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ದೊಡ್ಡ ಕೊಡುಗೆ ನೀಡಿದ್ದರು ಎಂದು ಹೇಳಿದರು.


ಮುಖಂಡ ಬಂಬೂ ಮೋಹನ್‌ ಮಾತನಾಡಿ, ಡಾ.ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರ ಕೇವಲ ಸಾಂಕೇತಿಕವಾಗಿ ಆಚರಿಸದೆ, ನಾಡಿನಲ್ಲಿ ಸಾಂಸ್ಕೃತಿಕ ಹಬ್ಬವಾಗಿ ಆಚರಣೆ ಮಾಡಬೇಕು ಎಂದರು.

ಮನುಹರಳೂರು ಮಾತನಾಡಿ, ನಮ್ಮ ಕುಟುಂಬದ ಎಲ್ಲರೂ ಡಾ.ರಾಜ್‌ಕುಮಾರ್ ಅಭಿಮಾನಿಗಳೇ ಇಂದು ಹೋಟೆಲ್‌ಗೆ ರಜೆ ಮಾಡಿ ಡಾ.ರಾಜ್ ಜನ್ಮದಿನ ಆಚರಿಸುತ್ತಿದ್ದೇವೆ, ಇದರ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ ಹಮ್ಮಿಕೊಂಡಿರುವುದಾಗಿ ಹೇಳಿದರು.

ಮುಖಂಡರಾದ ದಯಾನಂದ್, ಧನುಷ್, ಎನ್.ಮಂಜುನಾಥ್, ರಾಜಣ್ಣ, ಲಕ್ಷ್ಮೀನಾರಾಯಣ, ಪ್ರತಾಪ್, ರವಿಮಲ್ಲಣ್ಣ, ಡಿ.ರಾಜ್‌ಕುಮಾರ್, ಆಟೋಯಡಿಯೂರಪ್ಪ, ಸಾಗರ್ ಮೊದಲಾದವರು ಭಾಗವಹಿಸಿದ್ದರು.

- ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?