ಕೆ.ಆರ್.ಪೇಟೆ : ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಹೋರಾಟ ಕುರಿತು ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗೆ ಏ. 28ರ ಸೋಮವಾರ ಮತ್ತು ಏ. 29ರ ಮಂಗಳವಾರ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಎರಡು ದಿನಗಳ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಾಲೂಕಿನ ಸಮಾನ ಮನಸ್ಕರ ವೇದಿಕೆಯ ಸಂಚಾಲಕ ರೈತ ಹೋರಾಟಗಾರ ಮುದುಗೆರೆ ರಾಜೇಗೌಡ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಮ್ಮ ತಾಲೂಕಿನ ಕಾಲೇಜು ಮಕ್ಕಳಿಗೆ ಆಯೋಜಿಸಿರುವ ವಸತಿ ಸಹಿತ ವಿಚಾರ ಸಂಕಿರಣದಲ್ಲಿ ಪ್ರಗತಿ ಪರ ಚಿಂತಕರು, ರೈತ ಮುಖಂಡರು, ಶೋಷಿತರು ಹಾಗೂ ತುಳಿತಕ್ಕೊಳಗಾದ ಜನರು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ರೈತನಾಯಕ ರಾಜೇಗೌಡ ಮನವಿ ಮಾಡಿದರು.

ಪ್ರಗತಿಪರ ಚಿಂತಕ ಹಾಗೂ ವಿಚಾರವಾದಿ ಕತ್ತರಘಟ್ಟ ವಾಸು ಮಾತನಾಡಿ ಅಂಬೇಡ್ಕರ್ ಅವರೇ ತಿಳಿಸಿರುವಂತೆ ನನ್ನ ಹೆಸರನ್ನು ಜೈಕಾರ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ ಎಂಬ ಸಂದೇಶದಂತೆ ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗೆ ನಾಡಿನ ವಿವಿದೆಡೆಯಿಂದ ಸಾಹಿತಿಗಳು, ಚಿಂತಕರು ಹಾಗೂ ಬುದ್ಧಿ ಜೀವಿಗಳನ್ನು ಕರೆಸಿ ವಿಚಾರ ಸಂಕಿರಣವನ್ನು ಆಯೋಜಿಸಿ ಯುವಜನರಿಗೆ ಅರಿವಿನ ಜಾಗೃತಿ ಮೂಡಿಸಿ ಸಂವಿಧಾನದ ಆಶಯಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರರಣದಲ್ಲಿ ಭಾಗವಹಿಸಿ ಅನ್ಯಾಯ, ಅಕ್ರಮ ಹಾಗೂ ಅಸಮಾನತೆಯ ವಿರುದ್ದ ಹೊರಡುವ ಕಿಚ್ಚನ್ನು ಬೆಳೆಸಿಕೊಂಡು ಬದಲಾವಣೆಯ ದಿಕ್ಕಿನಲ್ಲಿ ಸಾಗಬೇಕು ಎಂದು ವಾಸು ಮನವಿ ಮಾಡಿದರು.

ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹಾಗೂ ದಲಿತ ಹೋರಾಟಗಾರರಾದ ಡಾ.ಬಸ್ತಿರಂಗಪ್ಪ ಮಾತನಾಡಿ ತುಳಿತಕ್ಕೊಳಗಾದವರು ಹಾಗೂ ಶೋಷಿತ ವರ್ಗಗಳ ಜನರು ನೆಮ್ಮದಿಯ ಜೀವನ ನಡೆಸಲು ವಿಶ್ವಮಾನ್ಯವಾದ ಸಂವಿಧಾನ ರಚಿಸಿಕೊಟ್ಟ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗಾಗಿ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ವಿಚಾರ ಧಾರೆಗಳ ಬಗ್ಗೆ ಜಾಗೃತಿ ಮೂಡಿಸಲು ಎರಡು ದಿನಗಳ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಅಸಕ್ತರು, ವಿದ್ಯಾರ್ಥಿಗಳು, ಯುವಜನರು ಹಾಗೂ ವಿಚಾರವಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜ್ಞಾನವಂತರಾಗಿ ಹೋರಾಟದ ಮನೋಭಾವಣೆಯನ್ನು ಬೆಳೆಸಿಕೊಂಡು ಹೆಜ್ಜೆ ಹಾಕಬೇಕು ಎಂದು ಬಸ್ತಿ ರಂಗಪ್ಪ ಮನವಿ ಮಾಡಿದರು.

ಈ ವೇಳೆ ರೈತ ಮುಖಂಡ ಕೆ.ಆರ್. ಜಯರಾಮ್, ತಾಲ್ಲೂಕು ಎಸ್.ಸಿ ಎಸ್.ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್, ಶೀಳನೆರೆ ಶಿವಕುಮಾರ್, ಶಿರಬಿಲ್ಲೇನಹಳ್ಳಿ ಪಾಂಡು, ಬಂಡಿಹೊಳೆ ಪ್ರಮೋದ್, ಕೃಷ್ಣಮೂರ್ತಿ, ಗಾಯಕ ರವಿಶಿವಕುಮಾರ್, ನಟರಾಜ್, ಚಾಶಿ ಜಯಕುಮಾರ್ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ವರದಿ: ಶ್ರೀನಿವಾಸ್. ಆರ್.