ಕೆ.ಆರ್.ಪೇಟೆ : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಕ್ಕಳ ಬೇಸಿಗೆ ಶಿಬಿರಗಳು ವರದಾನವಾಗಿವೆ ಎಂದು ಸಮಾಜ ಸೇವಕರು ಹಾಗೂ ಆರ್.ಟಿ.ಓ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಹೇಳಿದರು.
ಅವರು ತಾಲ್ಲೂಕಿನ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಶಾಖೆಯ ಸಂಸ್ಥೆಯ ಆವರಣದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ 15 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭೈರವೈಕ್ಯ ಚುಂಚಶ್ರೀಗಳಿಗೆ ಪುಷ್ಪನಮನ ಸಲ್ಲಿಸಿ, ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಮಕ್ಕಳಿಗೆ ರಜಾ ದಿನಗಳಲ್ಲಿ ವಿಶೇಷ ಮಕ್ಕಳ ಬೇಸಿಗೆ ಶಿಬಿರವನ್ನು ರೂಪಿಸಿ ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟ, ಕರಾಟೆ, ಯೋಗ, ಧ್ಯಾನ, ಚಿತ್ರಕಲೆ, ಕ್ರಾಫ್ಟ್, ಭಾಷಣ ಸ್ಪರ್ಧೆ, ಭರತನಾಟ್ಯ, ಜಾನಪದ ಗೀತ ಗಾಯನ, ಕಥೆ ಹೇಳುವುದು, ದೇವಾಲಯಗಳ ವೀಕ್ಷಣೆ, ವಿಜ್ಞಾನ ಆವಿಷ್ಕಾರ, ಓರಿಗಾಮಿ ಸೇರಿದಂತೆ ಗ್ರಾಮೀಣ ಸೊಗಡಿನ ಕ್ರೀಡೆಗಳ ಬಗ್ಗೆ ವಿಶೇಷ ತರಭೇತಿ ನೀಡುತ್ತಿರುವುದರಿಂದ ಮಕ್ಕಳ ವ್ಯಕ್ತಿತ್ವವು ಸಮಗ್ರವಾಗಿ ಅಭಿವೃದ್ಧಿಯಾಗುತ್ತದೆ ಆದ್ದರಿಂದ ಬಿಜಿಎಸ್ ಶಾಲೆಯ ಆಡಳಿತ ಮಂಡಳಿಗೆ ಹಾಗೂ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್.ನೀಲಕಂಠ ಮಾತನಾಡಿ ನಾಲ್ಕು ಗೋಡೆಗಳ ನಡುವೆ ಬಂದಿಗಳಾಗಿ ಸದಾ ಕಾಲವೂ ಪುಸ್ತಕ, ಓದು ಎಂಬ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಮುಕ್ತವಾಗಿ ಕಲಿಕೆಗೆ ಮುಂದಾಗಲು ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಿವೆ.

ಮಕ್ಕಳು ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಚೆಲ್ಲಲು ಶಿಬಿರವು ಸಹಕಾರಿಯಾಗಿರುವ ಕಾರಣ ಮಕ್ಕಳು ಮುಕ್ತವಾಗಿ ಅಮ್ಮ ಸಾಮರ್ಥ್ಯವನ್ನು ಹೊರಚೆಲ್ಲಲು ಶಿಬಿರ ನೆರವಾಗುತ್ತದೆ. ಪೋಷಕರು ಬೇಸಿಗೆ ಶಿಬಿರದಲ್ಲಿ ತಮ್ಮ ಮಕ್ಕಳು ಕಲಿತ ಪಠ್ಯೇತರ ಚಟುವಟಿಕೆಗಳನ್ನು ಮನೆಯಲ್ಲಿ ಪುನರ್ ಮನನ ಮಾಡಿಸಿದರೆ ಮಕ್ಕಳಲ್ಲಿ ವ್ಯಕ್ತಿತ್ವ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಕಿಕ್ಕೇರಿ ವಿಭಾಗದ ಗೃಹರಕ್ಷಣ ದಳ ಘಟಕಾಧಿಕಾರಿ ಜಿ.ಪಿ.ರಾಜು, ಆರ್.ಟಿ.ಓ.ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್, ರಂಗನಾಥ್, ಸಯ್ಯದ್ ಖಲೀಲ್, ಬಿಜೆಪಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆನಂದ್ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಲ್.ಜೆ.ಜಿ, ಯುಕೆಜಿ ಮಕ್ಕಳಿಗೆ ಗ್ರಾಜುಯೇಷನ್ ಪದವಿ ಪ್ರಧಾನ ಮಾಡಲಾಯಿತು.
– ಶ್ರೀನಿವಾಸ್ ಆರ್.