ಎಚ್.ಡಿ.ಕೋಟೆ-ಜನಸಂಪರ್ಕ ಸಭೆ-ಜಿಲ್ಲಾಧಿಕಾರಿಗಳ ಮುಂದೆ ಸಾಲು ಸಾಲು ಸಮಸ್ಯೆಗಳು-ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ಹಲವಕ್ಕೆ ಅಧಿಕಾರಿಗಳಿಗೆ ಸೂಚನೆ

ಎಚ್.ಡಿ.ಕೋಟೆ:ತಾಲೂಕಿನಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಗೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಮಿಕ ಇಲಾಖೆಯಡಿ ಕಟ್ಟಡ ನಿರ್ಮಾಣ ಕಾರ್ಮಿಕ ನೌಕರರಿಗೆ ಬೇಕಾದ ಪರಿಕರಗಳನ್ನು ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ವೇದಿಕೆಯ ಮೇಲೆ ವಿತರಿಸಲಾಯಿತು.

ನಂತರದಲ್ಲಿ ವಸತಿ ಯೋಜನೆ ಯಲ್ಲಿ 2023-24 ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಾದ ಕೊಲ್ಲೇಗೌಡ ನಹಳ್ಳಿ ಗ್ರಾಮದ ಶೋಭಾ, ರತ್ನಮ್ಮ, ಅಂಶವೇಣಿ ಹಾಗೂ ಉಮಾಮಣಿ ಅವರಿಗೆ ವಸತಿ ನಿರ್ಮಾಣದ ಮಂಜೂರಾತಿ ಪತ್ರ ನೀಡಿದರು.

ಜನ ಸಂಪರ್ಕ ಸಭೆಗೆ ಮೊದಲ ದೂರರ್ಜಿ ಸಲ್ಲಿಸಿದ್ದ ನಾಗನಹಳ್ಳಿ ಗ್ರಾಮದ ಮರಿಯಪ್ಪ ನಾಗನಹಳ್ಳಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ರಾಜ ಕಾಲುವೆ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಮಿ ಒತ್ತುವರಿಯಾಗಿದೆ.ನಮ್ಮೂರಿನ ಪ್ರಭಾವಿಗಳು ಆಕ್ರಮಿತ ಜಾಗದಲ್ಲಿ ಅಕ್ರಮವಾಗಿ ತಂತಿ ಬೇಲೆ ಕಟ್ಟಿ ಸಾರ್ವಜನಿಕರ ತಿರುಗಾಡುವ ರಸ್ತೆಗೆ ತೊಂದರೆ ನೀಡುತ್ತಿದ್ದಾರೆ.ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ 40ಕ್ಕೂ ಹೆಚ್ಚಿನ ದೂರರ್ಜಿ ನೀಡಲಾಗಿದೆ.ರಸ್ತೆ ಒತ್ತುವರಿಯಿಂದ ರೈತರ ಬೆಳೆಗಳನ್ನು ಸಾಗಿಸಲು ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದೂರಿದ್ದರು.ರಾಜಕಾಲುವೆ ಒತ್ತುವರಿ ಆಗಿ ರೈತರಿಗೆ ತೊಂದರೆ ಯಾಗುತ್ತಿದೆ ಈ ಬಗ್ಗೆ 40 ಕ್ಕೂ ಹೆಚ್ಚು ಅರ್ಜಿ ನೀಡಲಾಗಿದೆ.ರೈತರ ಬೆಳೆಗೆ ಸಾಕಷ್ಟು ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತಿದ್ದಂತಯೇ ಮಧ್ಯ ಪ್ರವೇಶಿಸಿದ ತಾಲೂಕು ಭೂ ಮಾಪನಾ ಅಧಿಕಾರಿಗಳು ನಾಗನಹಳ್ಳಿ ಗ್ರಾಮದಲ್ಲಿ ಸುಮಾರು ಒಂದು ಮುಕ್ಕಾಲು‌ ಕಿ.ಮೀ ಗೂ ಹೆಚ್ಚಿನ ರಸ್ತೆ ಒತ್ತುವರಿಯಾಗಿದೆ.ಈ ಬಗ್ಗೆ ಅಳತೆಗೆ ಸರ್ವೇಯರ್ ಗಳ ಕೊರತೆಯಿದೆ.ಹಾಗಾಗಿ ತಡವಾಗಿದೆ ಎಂದು ಸಮಜಾಯಿಸಿ ನೀಡಿದಾಗ,ಈ ಸಮಸ್ಯೆ ಕಳೆದ ವರ್ಷಗಳಿಂದ ಇದೆ ಇದರ ಬಗ್ಗೆ ಶೀಘ್ರ ಕ್ರಮವಹಿಸಿ ಎಂದು ತಿಳಿಸಿದಾಗ. ಜಿಲ್ಲಾಧಿಕಾರಿ ಉತ್ತರಿಸಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಬೇಕು ಭದ್ರತೆಗೆ ಹೆಚ್ಚಿನ ಪೊಲೀಸರ ನಿಯೋಜಿಸಿ ತ್ವರಿತಗತಿಯಲ್ಲಿ ಕೆಲಸ ಮುಗಿಸಿ ಎಂದು ಎಡಿಎಲ್ಆರ್ ಅವರಿಗೆ ಸೂಚಿಸಿದರು.

ಕಾಡಂಚಿನ ಗ್ರಾಮಕ್ಕೆ ಬಸ್ ಗಳ ಕೊರತೆ:

ಹೆಚ್.ಡಿ.ಕೋಟೆ ತಾಲೂಕಿನಿಂದ ಸರಗೂರು ಭಾಗಕ್ಕೆ ಬಸ್ ಗಳ ಸಮಸ್ಯೆ ಸಾಕಷ್ಟಿದೆ.ಸರಗೂರು ತಾಲೂಕಿನ ಹಲವು ಹಳ್ಳಿಗಳು ಕಾಡಂಚಿನಲ್ಲಿರುವುದರಿಂದ ಸಮಯಕ್ಕೆ ಸರಿಯಾಗಿ ಬಸ್ ಗಳ ವ್ಯವಸ್ಥೆ ಮಾಡಿಕೊಡಬೇಕು. ಬಸ್ ಗಳ ಸಮಸ್ಯೆಯಿಂದ ವಿದ್ಯಾರ್ಥಿಗಳು,ನೌಕರರು, ಆಸ್ಪತ್ರೆಗೆ ತೆರಳುವವರು ಸೇರಿದಂತೆ ಅನೇಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿದರೆ ಕರೆಗೆ ಉತ್ತರಿಸುವುದಿಲ್ಲ‌ ಇದು ದಿನ ನಿತ್ಯದ ಗೋಳಾಗಿದೆ ಎಂದು ಸರಗೂರಿನ ಮಣಿಕಂಠ ದೂರಿದರು.ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ಕೆ ಎಸ್ ಆರ್ ಟಿ ಸಿ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಹದಗೆಟ್ಟ ರಸ್ತೆ ಸರಿಪಡಿಸಿ:

ಸರಗೂರು ತಾಲೂಕಿನ ಸಾಗರೆ ಗ್ರಾಮಸ್ಥರು, ನಮ್ಮೂರಿನಿಂದ ಆಗತ್ತೂರು ಮಾರ್ಗ ಬಿದರಹಳ್ಳಿ ಸರ್ಕಲ್ ವರೆಗಿನ ರಸ್ತೆ ತೀರಾ ಹದಗೆಟ್ಟಿದೆ ಅದನ್ನು ಸರಿಪಡಿಸಿಕೊಡುವಂತೆ ಕೇಳಿಕೊಂಡರು.ಇದಕ್ಕುತ್ತರಿಸಿದ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯಿತಿ ವತಿಯಿಂದ ರಸ್ತೆ ಸರಪಡಿಸಿಕೊಡಲಾಗುವುದು ಎಂದು ತಿಳಿಸಿದರಲ್ಲದೇ ಲೋಕೋಪಯೋಗಿ ಇಲಾಖೆಯ ಎಇಇ ಬೋರಲಿಂಗಯ್ಯ ಅವರನ್ನು ಕ್ರಮವಹಿಸುವಂತೆ ತಿಳಿಸಿದರು.

ಅಭಿವೃದ್ಧಿಯಲ್ಲಿ ತಾಲೂಕು ಹಿಂದೆ ಉಳಿಯಲು ಅಧಿಕಾರಿಗಳೇ ಕಾರಣ

ಜಕ್ಕಹಳ್ಳಿ ಗ್ರಾಮದ ಸ.ನ 117ರಲ್ಲಿರುವ 3.37 ಗುಂಟೆ ಜಮೀನಿಗೆ ನಮ್ಮ ಪೂರ್ವಜರ ಕಾಲದಿಂದಲೂ ಕೃಷಿ ಚಟುವಟಿಕೆಗೆ ತೆರಳಲು ರಸ್ತೆ ಮಾರ್ಗವಿತ್ತು.ಇದೇ ಮಾರ್ಗದಲ್ಲಿ ನಾವು ವ್ಯವಸಾಯ ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೆವು. ಆದರೆ, ಕೆಲ ವರ್ಷಗಳ ನಂತರ ನಮ್ಮ ಅಕ್ಕ-ಪಕ್ಕದ ಜಮೀನಿನವರಾದ ಮಾಧರಾಜು ಹಾಗೂ ಶಿವಮಣಿ ಎಂಬುವವರು ರಸ್ತೆಯನ್ನು ಮುಚ್ಚಿ ನಮ್ಮ ಕೃಷಿ ಚಟುವಟಿಕೆಗೆ ತೊಂದರೆ ನೀಡುತ್ತಿದ್ದಾರೆ.ಈ ಬಗ್ಗೆ ನಮ್ಮ ಗ್ರಾಮದಲ್ಲಿ ಪಂಚಾಯಿತಿಗೆ ದೂರು ನೀಡಲಾಗಿದ್ದು ಮಾಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಅಲ್ಲದೇ ನಮ್ಮ ಕೃಷಿ ಚಟುವಟಿಕೆಗೆ ಸಂಪೂರ್ಣ ತೊಡಕಾಗಿದ್ದು ಇದರಿಂದ ಮಾಡಿದ ಸಾಲ ತೀರಿಸಲಾಗದೇ ನರಳಾಡುತ್ತಿದ್ದೇವೆ.ನಮ್ಮ ಜಮೀನಿಗೆ ರಸ್ತೆ ಬಿಡಿಸಿ ಕೊಡುವಂತೆ ತಹಸಿಲ್ದಾರರಿಗೆ ಕಳೆದ ಒಂದು ವರ್ಷದ ಹಿಂದೆ ನಾನು ಖುದ್ದು ಭೇಟಿ ಮಾಡಿ ಲಿಖಿತ ದೂರು ನೀಡಿದ್ದೇನೆ.ಇಲ್ಲಿಯವರೆಗೆ ನನ್ನ ದೂರಿಗೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಲಭ್ಯವಿಲ್ಲ.ಕಳೆದ ಒಂದು ವರ್ಷದಿಂದ ತಾಲೂಕು ಕಚೇರಿಗೆ ಬಂದು ಯಾವುದೇ ಉತ್ತರವಿಲ್ಲದೇ ಹಿಂದುರುಗುತ್ತಿದ್ದೇನೆ ನನ್ನ ಚಪ್ಪಲಿ ಸವೆಯಿತೇ ಹೊರತು ಅಧಿಕಾರಿಗಳು ಸಮಸ್ಯೆಗೆ ಪರಿಮಾರ್ಗ ತೋರಿಸಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ನಮ್ಮ ಕರೆಗೆ ಉತ್ತರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿ,ತಾಲೂಕಿಗೆ ಸರ್ಕಾರದ ವಿವಿಧ ಯೋಜನೆಗಳ,ವಿವಿಧ ಇಲಾಖೆಗಳ ಅನುದಾನಗಳನ್ನು ಅಧಿಕಾರಿಗಳು ಸದ್ಭಳಕೆ ಮಾಡುತ್ತಿಲ್ಲ. ತಾಲೂಕಿನಲ್ಲಿ ಬಡ ಜನತೆಯೇ ಹೆಚ್ಚಾಗಿ ವಾಸಿಸುತ್ತಿದ್ದು, ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುತ್ತಿಲ್ಲ.ತಾಲೂಕು ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲು ಅಧಿಕಾರಿಗಳೇ ಕಾರಣ ಎಂದು ಗಂಭೀರ ಆರೋಪ ಮಾಡಿದಾಗ ಅಧಿಕಾರಿಗಳು ಮರು ಮಾತನಾಡದೇ ಒಂದು ಕ್ಷಣ ಮೌನಕ್ಕೆ ಜಾರಿದರು. ಜಕ್ಕಹಳ್ಳಿ ಗ್ರಾಮದ ಸುರೇಶನ ಮಾತಿಗೆ ನೆರೆದಿದ್ದ ಜನತೆ ಚಪ್ಪಾಳೆ, ಕೇಕೆ, ಶಿಳ್ಳೆ ಒಡೆದು ಪ್ರಶಂಸಿಸಿದರು.ತಿರುಗಾಡುವ ರಸ್ತೆ ಮುಚ್ಚಿರುವ ಬಗ್ಗೆ ಮುಂದಿನ ಒಂದು ವಾರದೊಳಗೆ ತಹಸೀಲ್ದಾರ್ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಶೀಘ್ರ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವಾರಸುದಾರರಿಲ್ಲದ ಜಮೀನಿನ ಬಗ್ಗೆ ತನಿಖೆ ನಡೆಸಿ:

ರೈತ ಮುಖಂಡ ಕುಮಾರಸ್ವಾಮಿ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯ ಸ.ನಂ.82ರಲ್ಲಿ 40 ಎಕರೆ ಜಮೀನಿದ್ದು, ಮೂಲ ಮಾಲೀಕರು ದುಬೈ ಮೂಲದವರಾಗಿದ್ದು ಮರಣವನ್ನಿಪ್ಪಿದ್ದಾರೆ.ಆ ಜಮೀನಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳು ನಕಲಿ ದಾಖಲೆ ಸೃಷ್ಟಿಸಿ ಆ ಜಮೀನನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ‌.ಇದಲ್ಲದೇ ಮೂಲ ವಾರಸುದಾರರಿಲ್ಲದ ಜಮೀನಿಗೆ ತಾಲೂಕಿನ ಪ್ರಭಾವಿ ಮುಖಂಡರ ಹೆಸರಿಗೆ ಅಧಿಕಾರಿಗಳು ಜಂಟಿ ಖಾತೆ ಮಾಡಿಕೊಟ್ಟಿದ್ದಾರೆ. ಈ ಜಮೀನಿನ ಬಗ್ಗೆ ಮಾಜಿ ಶಾಸಕರು ಅಧಿಕಾರಿಗಳಿಗೆ ಮೂಲ ಜಮೀನಿಲ್ಲದ ವಾರಸುದಾರರ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಂಡು, ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಸಹ ಅಂದಿನಿಂದ ಇಂದಿನವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ನಕಲಿ ದಾಖಲೆ ಸೃಷ್ಟಿಯ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿಕೊಂಡರು ಇದಕ್ಕುತ್ತರಿಸಿದ ಜಿಲ್ಲಾಧಿಕಾರಿ ಈ ಪ್ರಕರಣದ ಬಗ್ಗೆ ಉಪವಿಭಾಗಾಧಿಕಾರಿಯವರಿಂದ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟ ಪಡಿಸಿದರು.

ಮುಗಿಯದ ಸರತಿ ಸಾಲು

ಜನಸಂಪರ್ಕ ಸಭೆಗೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಆಗಮನದ ಮಾಹಿತಿ ಅರಿತ ತಾಲೂಕಿನ ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಂಬೇಡ್ಕರ್ ಭವನದ ಮುಂಭಾಗಕ್ಕೆ ಆಗಮಿಸು ತ್ತಿದ್ದಂತೆಯೇ ವಿವಿಧ ಇಲಾಖೆಗಳ ಕೌಂಟರ್ ತೆರೆದು,ಸಾರ್ವಜನಿಕರು ತಮ್ಮ ಹೆಸರಿನೊಂದಿಗೆ ಇಲಾಖಾವಾರು ಅರ್ಜಿ ನೊಂದಾಯಿಸಿ ಕ್ರಮವಾಗಿ ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೆ ತರಲು ವ್ಯವಸ್ಥೆ ಮಾಡಲಾಗಿತ್ತು.ನೊಂದಾಯಿತ ದೂರುಗಳ ಬಗ್ಗೆ ಡಾ.ಬಿ‌.ಆರ್. ಅಂಬೇಡ್ಕರ್ ಭವನದ ಒಳಗೆ ಅತ್ತ ಅಧಿಕಾರಿಗಳು ಹಾಗೂ ಶಾಸಕರು ಜನರ ದೂರು,ದುಮ್ಮಾನಗಳನ್ನು ಆಲಿಸುತ್ತಿದ್ದರೆ.ಇತ್ತ ದೂರು ನೀಡಿಕೆಯ ನೋಂದಣಿಗಾಗಿ ಭವನದ ಮುಂಭಾಗದ ಎರಡೂ ಬದಿಗಳಲ್ಲಿ ಸಾರ್ವಜನಿಕರು ಅರ್ಜಿ‌ ಹಿಡಿದು ಮಧ್ಯಾಹ್ನ 3 ಗಂಟೆಯ ನಂತರವೂ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹೆಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿನ ಸಾರ್ವಜನಿಕರು ಭಾಗವಹಿಸಿದ್ದರು.

——————-ಶಿವು ಕೋಟೆ

Leave a Reply

Your email address will not be published. Required fields are marked *

× How can I help you?