ಕೊಟ್ಟಿಗೆಹಾರ- ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕರ ಜೊತೆ ಜನಸಂಪರ್ಕ ಸಭೆ

ಕೊಟ್ಟಿಗೆಹಾರ :ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಪಟ್ಟಣದ ತರುವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬಣಕಲ್ ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕರ ಜೊತೆ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ರಾಜಶೇಖರ್ ಅವರು ಮಾತನಾಡಿ, “ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಯಾವುದೇ ಸಮಸ್ಯೆ ಎದುರಾದರೆ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು,” ಎಂದರು. ಜೊತೆಗೆ, ಹೊಸದಾಗಿ ಜಾರಿಗೆ ಬಂದಿರುವ ಬಿಎನ್ಎಸ್ (ಭದ್ರತಾ ಕ್ರಮ) ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಪರಾಧ ತಡೆಯಲು ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.

ಬಣಕಲ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಅವರು ಮಾತನಾಡಿ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಸುತ್ತಮುತ್ತಲ ಶಾಲಾ ಕಟ್ಟಡಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಶಾಲಾ ಕ್ಷೇಮಾಭಿವೃದ್ಧಿ ಸಮಿತಿಗೆ ಸೂಚನೆ ನೀಡಿದರು.

ಸಾಮಾಜಿಕ ಜಾಲತಾಣಗಳ ದುರುಪಯೋಗ ಕುರಿತು ಎಚ್ಚರಿಕೆ ನೀಡುತ್ತಾ, “ಸಮಾಜಿಕ ಏಕತೆಯನ್ನು ಹಾಳುಮಾಡುವ ಸಂದೇಶಗಳನ್ನು ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದರು. ಮಕ್ಕಳ ರಕ್ಷಣೆ ಸಂಬಂಧಿತ ಪೋಕ್ಸೋ ಕಾಯ್ದೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

 “ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ನಿಖರ ಮಾಹಿತಿ ಇಟ್ಟುಕೊಳ್ಳಬೇಕು” ಎಂದು ತೋಟದ ಮಾಲೀಕರಿಗೆ ಸಲಹೆ ನೀಡಿದರು.

 “ಚಿಕ್ಕಮಗಳೂರು-ಮೂಡಿಗೆರೆ ಭಾಗ ಪ್ರವಾಸಿಗರ ನಾಡಾಗಿದ್ದು, ಹೆಚ್ಚಿನ ಪ್ರವಾಸಿಗರು ಕೊಟ್ಟಿಗೆಹಾರಕ್ಕೆ ಬಂದು ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ಗಳನ್ನು ತಿನ್ನುತ್ತಾರೆ, ಹೀಗಾಗಿ ಆಹಾರದ ಗುಣಮಟ್ಟ ಕಾಪಾಡಿ, ಅಂಗಡಿ–ಹೋಟೆಲ್‌ಗಳ ಮುಂದೆ ಸ್ವಚ್ಛತೆ ಕಾಪಾಡಿ, ಕಸ ಹಾಕದಂತೆ ಜಾಗರೂಕರಾಗಿ ವರ್ತಿಸಬೇಕು ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲ, ಸದಸ್ಯರುಗಳಾದ ಸತೀಶ್ ಗೌಡ, ಸ್ಮಿತಾ, ವರ್ತಕರ ಸಂಘದ ಅಧ್ಯಕ್ಷ ಟಿ.ಎಮ್. ಗಜೇಂದ್ರ ಗೌಡ, ಸಮಾಜ ಸೇವಕ ಸಂಜಯ್ ಗೌಡ, ಆಟೋ ಸಂಘದ ಅಧ್ಯಕ್ಷ ರಮೇಶ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರು ಮತ್ತು ಆಟೋ ಮಾಲೀಕರು ಹಾಗೂ ಚಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?