ಕೊರಟಗೆರೆ-ಎಲೆರಾಂಪುರ ಕುಂಚಿಟಿಗ ಮಠದಲ್ಲಿ ಭವಿಷ್ಯದ ಭಾರತ ನಿರ್ಮಾಣಕ್ಕೆ ಉಚಿತ ಸಂಸ್ಕಾರ ಶಿಬಿರ- ಉತ್ತಮ ಸಮಾಜದ ಅಣೆಕಟ್ಟಾಗುವ ಪ್ರಯತ್ನ- ಡಾ. ಹನುಮಂತ ನಾಥ ಸ್ವಾಮೀಜಿ

ಕೊರಟಗೆರೆ:- ಭವಿಷ್ಯದ ಭಾರತದ ನಿರ್ಮಾಣಕ್ಕಾಗಿ ಮಕ್ಕಳಿಗೆ ಉಚಿತವಾಗಿ ಸಂಸ್ಕಾರ ಶಿಬಿರವನ್ನು ಆಯೋಜಿಸಿ, ಉತ್ತಮ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಅಣಿ ಹಾಕಿದ್ದೇವೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಮಠದ ಸಮುದಾಯ ಭವನದಲ್ಲಿ ಜರುಗಿದ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ “ಇಂದು ಸಮಾಜದಲ್ಲಿ ನಡೆದು ಬಂದಿರುವ ಕಲುಷಿತತೆಯನ್ನು ಶುದ್ಧೀಕರಿಸಿ ಸದ್ಭಾವಿತ ಸಮುದಾಯ ನಿರ್ಮಿಸಲು ನಾವು ಶ್ರಮಿಸುತ್ತಿದ್ದೇವೆ. 14ಕ್ಕೂ ಅಧಿಕ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳನ್ನು ಪೋಷಕರು ವಿಶ್ವಾಸಪೂರ್ವಕವಾಗಿ ನಮ್ಮ ಬಳಿ ಒಪ್ಪಿಸಿದ್ದರು. ಅವರಿಗೆ ನಾವು ಸಂಸ್ಕಾರ, ಶಿಷ್ಟಾಚಾರ, ಸಾಂಸ್ಕೃತಿಕ ಮೌಲ್ಯಗಳನ್ನು ಬೋಧಿಸಿ, ಉತ್ತಮ ನಾಗರಿಕರಾಗಿ ರೂಪಿಸುತ್ತಿದ್ದೇವೆ” ಎಂದು ಹೇಳಿದರು.

“ಪೋಷಕರು ತಮ್ಮ ಮಕ್ಕಳಿಗೆ ಅಂಕಗಳು ಮುಖ್ಯ ಎನ್ನುವ ಬದಲು, ಸಂಸ್ಕಾರ ಮುಖ್ಯ ಎಂಬ ಅರಿವು ಬೆಳೆಸಬೇಕಾಗಿದೆ. ಇಂದು ಪೋಷಣೆಯಲ್ಲಿನ ಈ ಕೊರತೆಯೇ ವೃದ್ಧಾಶ್ರಮಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ, ಇದು ವಿಷಾದನೀಯ” ಎಂದು ತೀಕ್ಷ್ಣವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಠದ ಧಾನಿ ಡಿ. ನರಸಿಂಹಮೂರ್ತಿ “ಸಂಸ್ಕಾರ ಕಲಿತ ನಮ್ಮ ಪೀಳಿಗೆ ಇಂದು ಅದನ್ನು ಮರೆತುಬಿಟ್ಟಿದೆ. ಪೀಳಿಗೆಯಿಂದ ಪೀಳಿಗೆಗೆ ಪರಂಪರೆಯಾಗಿ ಸಾಗಬೇಕಿದ್ದ ಮೌಲ್ಯಗಳನ್ನು ಮರೆಯದಂತೆ ಮಕ್ಕಳಿಗೆ ಕಲಿಸಲು ಪ್ರತಿಯೊಬ್ಬ ಪೋಷಕರೂ ಮುಂದಾಗಬೇಕು” ಎಂದು ಸಮಾರಂಭದಲ್ಲಿ ಹುರಿದುಂಬಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಶಾಸ್ತ್ರ ಚೂಡಾಮಣಿ ಪ್ರೊ. ಮಲ್ಲೇಶ್ವರಂ ಜಿ. ವೆಂಕಟೇಶ್ ಸಮಾರೋಪ ಭಾಷಣ ನೀಡಿ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಸಂಸ್ಕಾರದ ಪಾತ್ರ ಅಮೂಲ್ಯವಾಗಿದೆ. ಇದನ್ನು ಮಕ್ಕಳಿಗೆ ಸಮರ್ಪಕವಾಗಿ ಪಾಠಮಾಡಿದಾಗಲೇ ಸಮಾಜದ ಮೂಲಭೂತ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಜಿ. ಪ್ರಭು ವಿತರಿಸಿ ಮಾತನಾಡಿ “ಪೋಷಕರು ಮಕ್ಕಳನ್ನು ಸದುದ್ದೇಶದಿಂದ ತರಾಟೆಗೆ ತೆಗೆದುಕೊಳ್ಳುತ್ತಾರೆ. ಮಕ್ಕಳೂ ಇದನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು. ದೇವರಿನಂತೆ ಪೋಷಕರಿಗೂ ಗೌರವ ನೀಡುವ ಬುದ್ಧಿಯನ್ನು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಆಶೋಕ್ ಮಕ್ಕಳಿಗೆ ಬಹುಮಾನ ವಿತರಿಸಿ, “ಈ ಬಾರಿ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಮುಂದಿನ ಶಿಬಿರದಲ್ಲಿ ಇನ್ನಷ್ಟು ವೈಯಕ್ತಿಕ ವಿಕಾಸದೊಂದಿಗೆ ಹಾಜರಾಗಬೇಕು” ಸಂಸ್ಕಾರವಂತ ಮಕ್ಕಳು ಸಮಾಜದ ಆಸ್ತಿ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ್  ಚಾಂಪಿಯನ್ ಶಿಪ್ ವಿತರಿಸಿ ಮಾತನಾಡಿ, “ಪೋಷಕರು ಮಕ್ಕಳಿಗೆ ಸಂಸ್ಕಾರ ಮತ್ತು ಶಿಕ್ಷಣ ಎರಡರ ಮೇಲೂ ಸಮಾನ ಆದ್ಯತೆ ನೀಡಬೇಕು. ಹೀಗೆ ಮಾಡಿದರೆ ಮಾತ್ರ ಮಕ್ಕಳಿಗೆ ಉತ್ತಮ ಸಮಾಜದ ಪರಿಚಯವಾಗಿ, ಭವಿಷ್ಯದ ಪ್ರಜ್ಞಾವಂತ ನಾಗರಿಕರು ರೂಪಾಗುತ್ತಾರೆ” ಎಂದು ಹೇಳಿದರು.

ಶಿಬಿರದಲ್ಲಿ ನಾನಾ ರೀತಿಯ  ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಕ್ಕಳ ಶಿಭಿರದ ಕಲಿಕೆಗಳನ್ನು ಪ್ರದರ್ಶಿಸಲಾಯಿತು. 

ವೇಧಿಕೆಯಲ್ಲಿ ಚೇತನ ಶಾಲೆಯ ಕಾರ್ಯದರ್ಶಿ ದೊಡ್ಡರಂಗೇಗೌಡ, ಯಶಸ್ ವಿದ್ಯಾಸಂಸ್ಥೆಯ ಕೃಷ್ಣಪ್ಪ, ವಿದ್ವಾನ್ ಡಾ.ನಂಜುಂಡಯ್ಯ , ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯ್ಕಕ್ಷೆ ಜಯಮ್ಮ ಸೇರಿದಂತೆ ಇತರರು ಇದ್ದರು. 

ಸಂಸ್ಕಾರ ಶಿಭಿರದ ಪ್ರಾಧ್ಯಾಪಕ ಡಾ. ರವಿಚಂದ್ರ, ಮಠದ ವ್ಯವಸ್ಥಾಪಕ ಗೋವಿಂದರಾಜು, ವಿದ್ವಾನ್ ಶೇಷರಾವ್, ಪ್ರಾಧ್ಯಾಪಕ ಡಾ. ಎಂ.ಪಿ ಕುಮಾರ್, ಶಿಕ್ಷಕರಾದ ಭ್ರಮರಾಂಭಿಕ, ಕುಮಾರಸ್ವಾಮಿ, ಪರಿಮಳ, ಕಲ್ಪನಾ, ಜಗದಾಂಭಾ, ಹೇಮಾವತಿ, ರಂಗಾನಾಥ್, ಮಹಾಲಿಂಗಪ್ಪ, ಗಿರೀಶ್, ಮಂಜುನಾಥ್ ಇತರರನ್ನು ಗೌರವಿಸಲಾಯಿತು.

– ಶ್ರೀನಿವಾಸ್‌, ಕೊರಟಗೆರೆ

Leave a Reply

Your email address will not be published. Required fields are marked *