ಕೆ.ಆರ್.ಪೇಟೆ- ಸಾಗುವಳಿ ಭೂಮಿ ನೀಡದೇ ಒಡಹುಟ್ಟಿದ ಕಿರಿಯ ಸಹೋದರನಿಗೆ ಅನ್ಯಾಯ ಮಾಡಿದ ಹಿರಿಯ ಸಹೋದರರು-ಭೂಮಿ ಕೊಡಿಸಿ ಇಲ್ಲವೇ ದಯಾಮರಣ ಕೊಡಿ ಎಂದು ನೊಂದ ಕುಟುಂಬ ರಾಷ್ಟ್ರಪತಿಗಳಿಗೆ ಪತ್ರ



ಕೆ.ಆರ್.ಪೇಟೆ: ಒಡ ಹುಟ್ಟಿದ ಕಿರಿಯ ಸಹೋದರನಿಗೆ, ಹಿರಿಯ ಸಹೋದರರು ಒಂದುಗುಂಟೆಯನ್ನೂ ಭೂಮಿ ನೀಡದೇ ಅನ್ಯಾಯ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದ ಲೇಟ್ ಅಮ್ಮಣ್ಣಮ್ಮ ಹಾಗೂ ಲೇಟ್ ದಾಸಾಚಾರಿ ದಂಪತಿಗಳ ಮಕ್ಕಳಾದ ಸೋಮಾಚಾರಿ, ಜಯರಾಮಚಾರಿ ಹಾಗೂ ಕೃಷ್ಣಚಾರಿ ಎಂಬ ಮೂರು ಜನ ಗಂಡು ಮಕ್ಕಳಿದ್ದಾರೆ. ಅಮ್ಮಣ್ಣಮ್ಮ ಮತ್ತು ದಾಸಾಚಾರಿ ಅವರು ಜೀವಿತಾವಧಿಯಲ್ಲಿ ಚಿಕ್ಕಳಲೆ ಜಮಾಬಂಧಿಗೆ ಸರ್ವೆ ನಂ.107ರಲ್ಲಿ ಸುಮಾರು ಎರಡೂವರೆ ಎಕರೆ ಜಮೀನನ್ನು ಸಾಗುವಳಿ ಮಾಡುತ್ತಿದ್ದರು. 1998ರಲ್ಲಿ ಅಕ್ರಮ-ಸಕ್ರಮದಡಿ ಭೂಮಿ ಮಂಜೂರಾತಿಗಾಗಿ ಫಾರಂ.ನಂ.53 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ದಾಸಾಚಾರಿ 2000ರಲ್ಲಿ ಮತ್ತು ಅಮ್ಮಣ್ಣಮ್ಮ 2001ರಲ್ಲಿ ನಿಧನ ಹೊಂದಿದರು.

ಅನಂತರ ಹಿರಿಯ ಸೋಮಚಾರಿ 33ಗುಂಟೆ, ಎರಡನೇ ಸಹೋದರ ಜಯರಾಮಾಚಾರಿ 33ಗುಂಟೆ, ಕಿರಿಯ ಸಹೋದರ ಕೃಷ್ಣಾಚಾರಿ 33ಗುಂಟೆ ಹಂಚಿಕೊಂಡು ಬೇಸಾಯ ಮಾಡಿಕೊಂಡು ಹೋಗುತ್ತಿದ್ದರು. ಅನಂತರ 2002ರಲ್ಲಿ ಅಕ್ರಮ-ಸಕ್ರಮದಡಿಯಲ್ಲಿ ಸರ್ಕಾರವು ಎರಡೂವರೆ ಎಕರೆ ಜಮೀನಿನನ್ನು ದಾಸಾಚಾರಿಯವರ ಫಾರಂ.ನಂ.53 ಅರ್ಜಿಯ ಮೇರೆಗೆ ಹಿರಿಯ ಸಹೋದರ ಸೋಮಚಾರಿಗೆ 1ಎಕರೆ 10ಗುಂಟೆ, ಮತ್ತು ಅಮ್ಮಣ್ಣಮ್ಮ ಅವರ ಫಾರಂ.ನಂ.53ಅರ್ಜಿಯ ಮೇರೆಗೆ ಎರಡನೇ ಸಹೋದರ ಜಯರಾಮಾಚಾರಿ ಅವರಿಗೆ 1ಎಕರೆ 10ಗುಂಟೆ ಮಂಜೂರು ಮಾಡಿಕೊಟ್ಟು, ಕಿರಿಯ ಸಹೋದರ ಕೃಷ್ಣಾಚಾರಿ ಅವರೂ ಸೇರಿದಂತೆ ಮೂವರೂ ಸಮಪಾಲು ಹಂಚಿಕೆ ಮಾಡಿಕೊಂಡು ಹೋಗುವಂತೆ ಅಧಿಕಾರಿಗಳು ಮೌಖಿಕ ಸಲಹೆ ನೀಡಿ ಸಾಗುವಳಿ ಚೀಟಿ ಮಂಜೂರು ಮಾಡಿದರು.

ಈ ಜಮೀನನ್ನು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ 2004-05ರಲ್ಲಿ ಪಾಲು-ಪಟ್ಟಿ ಮಾಡಿಕೊಂಡು ಅದರಂತೆ ಖಾತೆ ಮಾಡಿಸಿಕೊಂಡು 2008ರವರೆವಿಗೂ ಬೇಸಾಯ ಮಾಡುತ್ತಿದ್ದೆವು. ಆದರೆ ನಂತರದ ದಿನಗಳಲ್ಲಿ ಹಿರಿಯ ಸಹೋದರರಾದ ಸೋಮಾಚಾರಿ ಹಾಗೂ ಜಯರಾಮಚಾರಿ ಅವರು ಕಿರಿಯ ಸಹೋದರನಿಗೆ ಮೋಸ ಮಾಡಬೇಕು ಎಂಬ ದುರುದ್ದೇಶದಿಂದ ನಮಗೆ ಸಾಗುವಳಿ ಮಂಜೂರಾತಿ ನೆಪ ಇಟ್ಟುಕೊಂಡು ಸರ್ಕಾರದಿಂದ ಮಂಜೂರಾದ ಎರಡೂವರೆ ಎಕರೆ ಜಮೀನು ಒಟ್ಟು ಕುಟುಂಬದ ಆಸ್ತಿಯಾಗಿದ್ದರೂ ಸಹ ಸದರಿ ಜಮೀನಿನಲ್ಲಿ ಒಂದು ಗುಂಟೆಯನ್ನೂ ನೀಡದೇ ಕಿರಿಯ ಸಹೋದರ ಕೃಷ್ಣಾಚಾರಿಗೆ ನೀಡದೇ ಹಿರಿಯ ಸಹೋದರ ಸೋಮಾಚಾರಿ ಹಾಗೂ ಎರಡನೇ ಜಯರಾಮಚಾರಿ ಅವರು ಮೋಸ ಮಾಡಿರುತ್ತಾರೆ.

ಪಾಲುಪಟ್ಟಿ ಪ್ರಕಾರ ಹಂಚಿಕೆಯಾಗಿದ್ದ ಜಮೀನನ್ನೂ ಸಹ ಕಿತ್ತುಕೊಂಡು ಭೂಮಿಯ ಸ್ವಾಧೀನ ಬಿಡಿಸಿಕೊಂಡು ಸ್ವಲ್ಪ ಸ್ವಲ್ಪ ಮಾರಾಟ ಮಾಡಿಕೊಂಡು ಕಳೆದ 20 ವರ್ಷಗಳಿಂದಲೂ ಭೂಮಿ ಇಲ್ಲದಂತೆ ಮಾಡಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸಬೇಕಾದ ದುಸ್ಥಿತಿಗೆ ತಳ್ಳಿದ್ದಾರೆ. ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ರವರು, ಗಮನ ಹರಿಸಿ ದರಖಾಸ್ತು ಭೂಮಿಯ ಹಂಚಿಕೆಯಲ್ಲಿ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಟ್ಟು ನ್ಯಾಯ ದೊರಕಿಸಿಕೊಡಬೇಕು.

ಇಲ್ಲವೇ ಬದುಕಲು ಯಾವುದೇ ದಾರಿ ಇಲ್ಲದ ಕಾರಣ ದಯಾಮರಣ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ಕೃಷ್ಣಾಚಾರಿ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?