ಎಚ್.ಡಿ.ಕೋಟೆ: ಪೂರ್ವ ಮುಂಗಾರು ಈ ಬಾರಿ ಅವಧಿಗೂ ಮುನ್ನ ರಾಜ್ಯ ಪ್ರವೇಶಿಸಿದ್ದರಿಂದ ಏಪ್ರಿಲ್ ಮಾಹೆಯಲ್ಲಿ ನಿರಂತರ ಸುರಿದ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದ್ದವು. ಕೆಲವೆಡೆ ಬಿತ್ತನೆ ಕಾರ್ಯದ ನಂತರ ಮಳೆ ಕೈಕೊಟ್ಟಿದ್ದರಿಂದ ಕೆಲ ರೈತರು ಆತಂಕಕ್ಕೊಳಗಾಗಿದ್ದರು. ಮಂಗಳವಾರ ರಾತ್ರಿ ಸುರಿದ ಮಳೆಗೆ ರೈತರು ಹರ್ಷ ಚಿತ್ತರಾಗಿದ್ದಾರೆ.
ಕೆಲ ದಿನಗಳಿಂದ ರೈತರು ತಮ್ಮ ಜಮೀನುಗಳನ್ನು ಹದಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಹಣಿ ಮಾಡಿ ಕೊಂಡಿದ್ದರು. ಎಚ್.ಡಿ.ಕೋಟೆ, ಸರಗೂರು, ಹೊಮ್ಮರಗಳ್ಳಿ, ಬೀಚನಹಳ್ಳಿ, ಬಿ.ಮಟಕೆರೆ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡುವ ಉದ್ದು, ಹೆಸರು, ಅಲಸಂದೆ ಬಿತ್ತನೆ ಬೀಜಗಳು ರಿಯಾಯಿತಿ ದರದಲ್ಲಿ ಜೋಳ ಈಗಾಗಲೆ ಅತಿ ಹೆಚ್ಚು ಮಾರಾಟವಾಗಿವೆ.
ತಾಲೂಕಿನ ಹಲವು ಗ್ರಾಮಗಳಲ್ಲಿ ಏಪ್ರಿಲ್ ನ ಮಧ್ಯ ಭಾಗದಲ್ಲಿ ಹತ್ತಿ ಹಾಗೂ ಜೋಳದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಅಶ್ವಿನಿ ಮಳೆ ಕೈಕೊಟ್ಟಿದ್ದು, ಬಿತ್ತನೆ ನಂತರ ಬೆಳೆಗಳಿಗೆ ನೀರಿನ ಅಭಾವ ಸೃಷ್ಠಿಯಾಗಿ ಆಕಾಶದತ್ತ ಮುಖ ಮಾಡಿ ಮಳೆಗಾಗಿ ಎದುರು ನೋಡುತ್ತಿದ್ದ ರೈತರಿಗೆ ರಾತ್ರಿ ಸುರಿದ ಮಳೆ ಬೆಳೆಗಳಿಗೆ ನೀರಿನ ಅಭಾವ ನೀಗಿಸಿದೆ.

ತಾಲೂಕಿನ 49 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಶೇ.20 ಬಿತ್ತನೆ ಕಾರ್ಯ ನಡೆದಿದ್ದು, ಭರಣಿ ಹಾಗೂ ಕೃತಿಕಾ ಮಳೆಗೆ ಶೇ.100 ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ.
ತಾಲೂಕಿನಲ್ಲಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ, ಕ್ರಿಮಿನಾಶಕಗಳ ಅಂಗಡಿಗಳಲ್ಲಿ ರೈತರಿಗೆ ಅಗತ್ಯವಿರುವ ದಾಸ್ತಾನು ಸಂಗ್ರಹಿಸಲಾಗಿದೆ. ಮಾರಾಟಗಾರರು ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರದಲ್ಲಿ ರೈತರಿಗೆ ಕೃತಕವಾಗಿ ಅಭಾವ ಸೃಷ್ಠಿಸುವ, ನಿಗದಿತ ಬೆಲೆಗಿಂತ ಹೆಚ್ಚಿಗೆ ಪಡೆದರೆ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜಯರಾಮ್ ಎಚ್ಚರಿಸಿದ್ದಾರೆ.

ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ:- ಪೂರ್ವ ಮುಂಗಾರಿನಲ್ಲಿ ವ್ಯತ್ಯಾಸವಾದರೂ ಈ ಸಲದ ಮುಂಗಾರಿನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿಗೆ ಮಳೆಯಾಗಲಿದೆ. ಜೂನ್ ನಲ್ಲಿ ಉತ್ತಮ ಮಳೆಯಾಗಲಿದ್ದು, ಇದರ ಪ್ರಮಾಣ ಜುಲೈನಲ್ಲಿ ಕಡಿಮೆಯಾಗಿ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೈತರಿಗೆ ಅಭಯ ನೀಡಿದೆ.
ತಂಬಾಕು ಬೆಳೆಗೆ ಆರು ಸಾವಿರ ಹೆಕ್ಟೇರ್ ಮೀಸಲು:-
ಪ್ರಸ್ತುತ 1.7 ಹೆಕ್ಟೇರ್ ಜಮೀನಿನಲ್ಲಿ ತಂಬಾಕು ನಾಟಿ ಮಾಡಲಾಗಿದ್ದು, ಏ.15ರಿಂದ ಇಲ್ಲಿಯವರೆಗೆ ತಂಬಾಕು ನಾಟಿ ಕಾರ್ಯ ಶೇ. 60 ಮುಗಿಯಬೇಕಿತ್ತಾದರೂ ಮಳೆಯ ಕೊರತೆ, ಅಗತ್ಯ ರಸಗೊಬ್ಬರ ಪೂರೈಕೆಯಲ್ಲಿ ತಡವಾಗಿದ್ದರಿಂದ ನಾಟಿ ಕಾರ್ಯ ಪ್ರಾರಂಭಿಸುವಲ್ಲಿ ವಿಳಂಬ ಮಾಡಿದ್ದಾರೆ. ತಾಲೂಕಿನ ತಂಬಾಕು ಬೆಳೆಗಾರರಿಗೆ ಡಿಎಪಿ 462, ಅಮೋನಿಯಂ ಸಲ್ಫೇಟ್ 884, SOP 1.230, ಕ್ಯಾಲ್ಷಿಯಂ ನೈಟ್ರೇಟ್ 250 ಮೆಟ್ರಿಕ್ ಟನ್ ಅಗತ್ಯವಿದೆ. ಏ.29ರ ವೇಳೆಗೆ ಡಿಎಪಿ 60, ಅಮೋನಿಯಂ ಸಲ್ಫೇಟ್ 85, SOP 350, ಕ್ಯಾಲ್ಷಿಯಂ ನೈಟ್ರೇಟ್ 80 ಮೆಟ್ರಿಕ್ ಟನ್ ಗೊಬ್ಬರವನ್ನು ಶಾಂತಿಪುರ ಟಬಾಕೋ ಬೋರ್ಡ್ ಗೆ ವಿತರಿಸಲಾಗಿದೆ. ಉಳಿಕೆ ರಸಗೊಬ್ಬರ ಮುಂದಿನ ವಾರದಲ್ಲಿ ಸರಬರಾಜಾಗುವ ಸಾಧ್ಯತೆಯಿದೆ. ತಂಬಾಕು ಬೆಲೆಯಲ್ಲಿ ವ್ಯತ್ಯಾಸವಾಗಿರುವುದು ಸೇರಿದಂತೆ ಇತರೆ ಕಾರಣಗಳಿಂದ ತಂಬಾಕು ನಾಟಿಯಲ್ಲಿ ಕುಸಿತವಾಗಿ ಆರು ಸಾವಿರ ಎಕ್ಟೇರ್ ನಲ್ಲಿ ತಂಬಾಕು ಬೆಳೆಯುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕಿನ್ನ ಸಾವಿರ ಎಕ್ಟೇರ್ ತಂಬಾಕು ಬೆಳೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಗ್ರೋಮೋರ್ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಮಾರಾಟಗಾರ ಸಿದ್ದರಾಜು ಮಾಹಿತಿ ನೀಡಿದ್ದು, ಬಾರಿ ಹತ್ತಿಗಿನ್ನ ಮುಸುಕಿನ ಜೋಳ ಅತಿ ಹೆಚ್ಚು ಮಾರಾಟವಾಗಿದೆ. ಅಂಗಡಿಗಳಲ್ಲಿ ಅಗತ್ಯ ದಾಸ್ತಾನು ಸಂಗ್ರಹವಾಗಿದೆ. ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
-ಶಿವಕುಮಾರ ಕೋಟೆ