ಕೆ.ಆರ್.ಪೇಟೆ- ಮೇ.05ರಿಂದ ಆರಂಭವಾಗುವ ಪರಿಶಿಷ್ಟರ ಜಾತಿ ಗಣತಿಯಲ್ಲಿ ಮಾದಿಗ ಸಮುದಾಯದ ಬಂಧುಗಳು ಕಡ್ಡಾಯವಾಗಿ ಜಾತಿ ಕಾಲಂ ನಲ್ಲಿ “ಮಾದಿಗ” ಎಂದು ನಮೂದಿಸಬೇಕು. ಇದರಿಂದ ನಮಗೆ ನಮ್ಮ ಮಕ್ಕಳಿಗೆ ಉದ್ಯೋಗ, ಶಿಕ್ಷಣ, ರಾಜಕೀಯ, ಆರ್ಥಿಕ, ಸಾಮಾಜಿಕ ಒಳ ಮೀಸಲಾತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಗಣತಿಯನ್ನು ಉದಾಸೀನ ಮಾಡಿ ಈ ಅವಕಾಶ ಕಳೆದುಕೊಂಡರೆ ಮಾದಿಗ ಸಮುದಾಯಕ್ಕೆ ಮತ್ತೆ ಇಂತಹ ಸುವರ್ಣಾವಕಾಶ ಸಿಗುವುದಿಲ್ಲ ಎಂದು ಮಂಡ್ಯ ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ವಕೀಲ ಎನ್.ಆರ್.ಚಂದ್ರಶೇಖರ್ ಸಮುದಾಯ ಬಂಧುಗಳಲ್ಲಿ ಮನವಿ ಮಾಡಿದರು.
ಅವರು ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಪ್ರಜ್ಞಾವಂತ ಮಾದಿಗರ ಒಕ್ಕೂಟ, ಮಾದಿಗರ ಮೀಸಲಾತಿ ಜಾಗೃತಿ ಸಮಿತಿ ಹಾಗೂ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಶಿಬಿರದಲ್ಲಿ ಅರಿವಿನ ಕಡೆ-ನಮ್ಮ ನಡೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇದೇ ಮೇ.05ರಿಂದ ರಾಜ್ಯಾದ್ಯಂತ ಶಿಕ್ಷಕರು ತಮ್ಮ ಮನೆ ಬಾಗಿಲಿಗೆ ಬಂದು ಜಾತಿ ಗಣತಿ ಮಾಡಲಿದ್ದಾರೆ. ಆಗ ಜಾತಿ ಕಾಲಂ ನಲ್ಲಿ ಮಾದಿಗ ಎಂದು ಬರೆಸುವ ಮೂಲಕ ನಿಖರ ಜಾತಿ ಗಣತಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಈ ಮೂಲಕ ರಾಜ್ಯ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಒಳಮೀಸಲಾತಿಯನ್ನು ನಮಗೆ ನೀಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟ ಜಾತಿಯಲ್ಲಿ 101ಜಾತಿಗಳಿದ್ದು, ನಮ್ಮ ಮಾದಿಗ ಜಾತಿಯು ಸ್ವಾತಂತ್ರ್ಯ ನಂತರ ಮೀಸಲಾತಿಯ ಪ್ರಯೋಜನ ಬೆರಳೆಣಿಯಷ್ಟು ಮಾತ್ರ ಸಿಕ್ಕಿದೆ. ಇತರೆ ಜಾತಿಗಳು ಹೆಚ್ಚು ಪ್ರಯೋಜನ ಪಡೆದಿದ್ದು ಅಭಿವೃದ್ದಿ ಸಾಧಿಸಿವೆ. ಅಸ್ಪೃಷ್ಯ ಜಾತಿಯಲ್ಲಿ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುವಲ್ಲಿ ಮಾದಿಗ ಮತ್ತು ಮಾದಿಗ ಸಮಾನಾಂತರ ಜಾತಿಗಳು ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ 2005ರಲ್ಲಿ ಅಂದಿನ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚನೆ ಮಾಡಿತ್ತು. ಸುಮಾರು ಏಳೆಂಟು ವರ್ಷಗಳ ಕಾಲ ಎ.ಜೆ.ಸದಾಶಿವ ಆಯೋಗವು ರಾಜ್ಯಾದ್ಯಂತ ಸಂಚರಿಸಿ, ಅಧ್ಯಯನ ಮಾಡಿ, 2012ರಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳನ್ನು 4 ಭಾಗಗಳನ್ನಾಗಿ ಮಾಡಿ ಮಾದಿಗ ಸಮುದಾಯಕ್ಕೆ ಸೇರಿದ ಉಪ ಜಾತಿಗಳಿಗೆ ಪರಿಶಿಷ್ಟ ಜಾತಿಯ ಮೀಸಲಾತಿಯ ಶೇ. 15%ರ ಪೈಕಿ ಶೇ. 6% ನಿಗದಿ ಪಡಿಸಿರುವುದು ಮತ್ತು ಬಿಜೆಪಿ ಸರ್ಕಾರ, 2023ರಲ್ಲಿ, ಕಾಂಗ್ರೆಸ್ ಸರ್ಕಾರ 2024ರಲ್ಲಿ, ಒಳಮಿಸಲಾತಿ ವರ್ಗೀಕರಣ ಒಪ್ಪಿಗೆ ನೀಡಿ. ಕೆಂದ್ರ ಸರ್ಕಾರ ಸಾಂವಿಧಾನ ಆರ್ಟಿಕಲ್ 341 ತಿದ್ದುಪಡಿ ಮಾಡಿ ಒಳಮೀಸಲಾತಿ ಜಾರಿ ಮಾಡಲು ಕೆಂದ್ರ ಸರ್ಕಾರ ಕ್ಕೆ ಶಿಫಾರಸ್ಸು ಮಾಡಿರುವುದು ಸ್ಮರಿಸಬಹುದು.

ಜೊತೆಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:01-08-2024 ರಂದು ತೀರ್ಪು ನೀಡಿ, ಪರಿಶಿಷ್ಟ ಜಾತಿಯವರಿಗೆ ನೀಡುವ ಒಳಮೀಸಲಾತಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ ಹಾಗೂ ಭಾರತೀಯ ಸಂವಿಧಾನದ ಆರ್ಟಿಕಲ್ 341 ರ ಉಲ್ಲಂಘನೆ ಆಗುವುದಿಲ್ಲ ಎಂದು ತೀರ್ಪು ನೀಡಿರುತ್ತದೆ ಹಾಗಾಗಿ ಒಳಮೀಸಲಾತಿ ಸಂವಿಧಾನ ಬದ್ಧವಾಗಿ, ವೈಜ್ಞಾನಿಕವಾಗಿ ನೀಡಬಹುದಾಗಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ಮಾದಿಗ ಸಮುದಾಯಕ್ಕೆ ಶೈಕ್ಷಣಿಕವಾಗಿ ಹಿಂದುಳಿದಿದ್ದು ನ್ಯಾಯಾಲಯ ತೀರ್ಪಿನ ಪ್ರಕಾರ ಮಾದಿಗ ಸಮುದಾಯಕ್ಕೆ ಶೇ. 6% ರಷ್ಟು ನೀಡಲು ರಾಜ್ಯ ಸರ್ಕಾರವು ಜಾತಿ ಗಣತಿ ಮಾಡಲು ಮುಂದಾಗಿರುವುದು ಮಾದಿಗ ಸಮುದಾಯದ ಪೂರ್ವ ಜನ್ಮದ ಪುಣ್ಯವಾಗಿದೆ. ಹಾಗಾಗಿ ಇದೇ ಮೇ.05ರಿಂದ ಆರಂಭವಾಗುವ ಪರಿಶಿಷ್ಟರ ಜಾತಿ ಗಣತಿಯಲ್ಲಿ ಮಾದಿಗ ಸಮುದಾಯದವರು ತಾವು ಯಾವುದೇ ಅಂಜಿಕೆ ಸ್ವಾಭಾವ ಇಟ್ಟುಕೊಳ್ಳದೇ ಗಣತಿದಾರರು ಮನೆ ಬಳಿ ಬಂದಾಗ ಮಾದಿಗ ಎಂದು ಬರೆಸುವ ಮೂಲಕ ನಿಖರ ಜಾತಿ ಗಣತಿ ಮಾಡಲು ಅವಕಾಶ ನೀಡಬೇಕು ಎಂದು ಎನ್.ಆರ್.ಚಂದ್ರಶೇಖರ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ಕಾರ್ಯದರ್ಶಿ ಬಿ.ಬಿ.ಕಾವಲು ಕಾಂತರಾಜು, ವಾಣಿಜ್ಯ ತೆರಿಗೆ ಅಧಿಕಾರಿ ಜಿ.ವಿ.ರಾಮು, ಉದ್ಯಮಿ ಹೊಸಹೊಳು ನಂಜುಂಡಸ್ವಾಮಿ, ಉಪನ್ಯಾಸಕರಾದ ವೆಂಕಟರಾಮು, ಮಂಜುನಾಥ್, ಸಿ.ರಮೇಶ್, ಸಿಪಿಐ ಕುಶಾಲನಗರ ಪ್ರಕಾಶ್, ಮುಖಂಡರಾದ ಸಿ.ಕೆ.ಪಾಪಯ್ಯ, ಬಿ.ಕೃಷ್ಣ, ಜಿ.ಪಂ.ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ರಾಯಸಮುದ್ರ ಸುಧಾಕರ್, ಆರ್.ಟಿ.ಉಮೇಶ್, ಯಾಲಕ್ಕಯ್ಯ, ತಾ.ಪಂ.ಮಾಜಿ ಉಪಾಧ್ಯಕ್ಷ ಗೋಪಾಲಯ್ಯ, ರಂಗನಾಥಪುರ ನಾಗರಾಜು, ಶಿವಕುಮಾರ್, ನಿವೃತ್ತ ಶಿಕ್ಷಕ ಶಿವಣ್ಣ, ಬಸವರಾಜು, ಆಲೇನಹಳ್ಳಿ ರಾಜು, ರವಿಶಿವಕುಮಾರ್, ರಘುನಾಥ್, ಸೇರಿದಂತೆ ನೂರಾರು ಸಮುದಾಯದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
–