ಚಿಕ್ಕಮಗಳೂರು:– ಬಟ್ಟೆ ತೊಳೆಯುವ ಕಾಯಕದಲ್ಲಿ ಸುಮಾರು ನಾಲ್ಕೂವರೆ ದಶಕಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿರುವ ನಗರದ ಶೆಟ್ಟರಬೀದಿಯ ಲಾಂಡ್ರಿ ಅಂಗಡಿ ಮಾಲೀಕ ಆನಂದ್ ಎಂಬುವವರಿಗೆ ಕಾಯಕ ದಿನಾಚರಣೆ ಪ್ರಯುಕ್ತ ಗುರುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಸಾಪ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ, ಆರ್ಥಿಕ ಸಂಕಷ್ಟ ಹಾಗೂ ಕುಟುಂಬದ ನಿರ್ವಹಣೆಯ ನಡುವೆಯೂ ಪ್ರಾಮಾಣಿಕತೆ ಹಾಗೂ ರಿಯಾಯಿದರದಲ್ಲಿ ಬಟ್ಟೆ ತೊಳೆಯುವ ಕಾಯಕದಲ್ಲಿ ನಿರತರಾಗಿರುವ ಆನಂದ್ ದುರಾಸೆಗೆ ಒಳಗಾಗದೇ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ ಎಂದರು.

ವಿಶ್ವಜ್ಞಾನಿ ಬಸವಣ್ಣರ ಕಾಯಕ, ವಚನಗಾರರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡ ಆನಂದ್ ಅವರಿಗೆ ತಮ್ಮ ವೃತ್ತಿ ಸ್ಪೂರ್ತಿ ನೀಡಿರುವುದು ಉತ್ತಮ ಸಂಗತಿ. ಆ ನಿಟ್ಟಿನಲ್ಲಿ ವೃತ್ತಿಜೀವನವನ್ನು ಗುರುತಿಸಿ ಪ್ರಗತಿಪರ ಮುಖಂಡರ ನೇತೃತ್ವದಲ್ಲಿ ವಿಶೇಷವಾಗಿ ಗೌರವಿಸಿ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ಸಾಹಿತಿ ಬೆಳವಾಡಿ ಮಂಜುನಾಥ್ ಅಭಿನಂದಿಸಿ ಮಾತನಾಡಿ, ವೃತ್ತಿಯಲ್ಲಿ ಮೇಲು-ಕೀಳೆಂಬುದು ಇರು ವುದಿಲ್ಲ. ಆಯಾಯ ವೃತ್ತಿಗೆ ಗೌರವ, ಆತ್ಮಾಭಿಮಾನ ಹೆಚ್ಚಿದೆ. ಆ ಸಾಲಿನಲ್ಲಿ ಆನಂದ್ ಕೊಳಕು ಬಟ್ಟೆಗಳನ್ನು ಶುದ್ಧೀಕರಿಸಿ, ಗ್ರಾಹಕರಿಗೂ ಆರ್ಥಿಕ ಹೊರೆಯಾಗದೇ ಜಗಜಗಿಸುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್, ಬಿಜೆಪಿ ರೈತ ಮೋರ್ಚಾ ರಾಜ್ಯ ಕರ್ಯ ದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಿಕೆರೆ ದಯಾನಂದ್, ಜಿಲ್ಲಾ ಶಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥಸ್ವಾಮಿ, ತಾಲ್ಲೂಕು ಅಧ್ಯಕ್ಷ ಲೋಕೇಶ್, ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಕಸಾಪ ಅಂಬಳೆ ಅಧ್ಯಕ್ಷ ಮಾಸ್ತೇಗೌಡ, ಅಜ್ಜಂಪುರ ಜಿ.ಸೂರಿ ಪ್ರತಿಷ್ಟಾನದ ಅಧ್ಯಕ್ಷ ಪ್ರಭುಸೂರಿ, ಮುಖಂ ಡರುಗಳಾದ ಗಂಗಾಧರ್, ಸಂತೋಷ್ ಲಕ್ಯಾ, ಭೀಮಯ್ಯ ಮತ್ತಿತರರಿದ್ದರು.
– ಸುರೇಶ್ ಎನ್.