ಕೊಟ್ಟಿಗೆಹಾರ-ಮೂಡಿಗೆರೆ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಮಲೆನಾಡಿನಲ್ಲಿ ನಿರಂತರ ಗಾಳಿ-ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತೀಚೆಗಷ್ಟೇ ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ತ್ರಿಪುರ ಗ್ರಾಮದ ಕುಸುಮ ಎಂಬುವರಿಗೆ ಸೇರಿದ ಮನೆಯ ಮೇಲ್ಛಾವಣಿ ಭಾರೀ ಗಾಳಿಗೆ ತೀವ್ರ ಹಾನಿಗೊಳಗಾಗಿದ್ದು, ಸಿಮೆಂಟ್ ಶೀಟ್‌ಗಳು ಸಂಪೂರ್ಣವಾಗಿ ಹಾರಿ ಹೋಗಿವೆ. ಶೀಟ್‌ಗಳು ಹಾರಿ ಮನೆಯೊಳಗೆ ಬಿದ್ದ ಪರಿಣಾಮ, ಮನೆಯಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಈ ಘಟನೆಯಿಂದಾಗಿ ಮನೆ ಶೀಟ್ ಗಳು ಸಂಪೂರ್ಣವಾಗಿ ಹೋಗಿದ್ದು, ಮಳೆ ಬಂದರೆ ಇಡೀ ರಾತ್ರಿ ನೆನೆದು ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದವರ ಅಭಿಪ್ರಾಯದಂತೆ, ಕಳೆದ 4–5 ದಿನಗಳಿಂದ ಮುಂದುವರೆದ ಗಾಳಿ-ಮಳೆ ಜನರ ದೈನಂದಿನ ಜೀವನಕ್ಕೆ ಅಡ್ಡಿಯಾಗಿದ್ದು, ಮನೆಮನೆಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.