ಚಿಕ್ಕಮಗಳೂರು:- ಜಾತಿತಾರತಮ್ಯ, ಅಸ್ಪೃಶ್ಯತೆ ಹಾಗೂ ಶೋಷಿತರ ನೋವಿನ ಬದುಕನ್ನು ಹೋಗಲಾಡಿಸಲು ನಿರಂತರವಾಗಿ ಸದ್ವಿಚಾರಗಳಿಂದ ಹೋರಾಡಿದ ಶ್ರೇಷ್ಟ ವಚನಕಾರ ಬಸವಣ್ಣನವರು ಎಂದು ಬಿಜೆಪಿ ಮುಖಂಡ ದೀಪಕ್ದೊಡ್ಯಯ್ಯ ಹೇಳಿದರು.
ತಾಲ್ಲೂಕಿನ ವಸ್ತಾರೆ ಹೋಬಳಿಯ ಗಡಬನಹಳ್ಳಿ ಗ್ರಾಮದ ಕಿಶನ್ ಮನೆಯಂಗಳದಿ ಆಯೋಜಿಸಿದ್ಧ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣನವರ ವಚನ, ವಿಚಾರಧಾರೆಗಳು ಸಾರ್ವಕಾಲಿಕವಾಗಿವೆ. ಮಾನವನ ಸಂತಾನದ ಕೊನೆಯ ವರೆಗೂ ವಚನಗಳು ಜೀವಂತಿಕೆ ಪಡೆದುಕೊಳ್ಳುತ್ತವೆ. ಸಮಾಜದ ಎಲ್ಲಾ ಜನಾಂಗ, ವಿಚಾರಗಳನ್ನು ಕುರಿತು ರಚಿಸಿರುವಂಥ ವಚನಗಳು ಸರ್ವ ವ್ಯಾಪ್ತಿಯಾಗಿವೆ ಎಂದರು.
12ನೇ ಶತಮಾನದಲ್ಲೇ ಬಸವಣ್ಣವರು ಅನುಭವ ಮಂಟಪವನ್ನು ನಿರ್ಮಿಸುವ ಮೂಲಕ ಸರ್ವ ಜನಾಂಗದವರು, ನಾಯಕರು ಹಾಗೂ ದಾರ್ಶನಿಕರುನ್ನು ಒಟ್ಟಾಗಿಸಿ ಸಮಾಜದ ಅಭಿವೃದ್ದಿಗೆ ಚರ್ಚಿಸಿರುವುದು ಬಹಳ ವಿಶೇಷತನ ಎಂದ ಅವರು ಇಡೀ ವಿಶ್ವಕ್ಕೆ ಮೊದಲ ಪಾರ್ಲಿಮೆಂಟ್ನಂತೆ ಸ್ಥಾಪಿತಗೊಂಡು ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.

ರಾಷ್ಟ್ರದಲ್ಲಿನ ಅಸಮಾನತೆ ತೊಲಗಿಸಲು, ಸಮಸಮಾಜ ನಿರ್ಮಾಣ ಹಾಗೂ ಜಾತಿ ವ್ಯವಸ್ಥೆ ಕಿತ್ತೊಗೆಯಲು ಬಹುದೊಡ್ಡ ಆಲೋಚನೆ, ಚಿಂತನೆಗಳು ಬಸವಣ್ಣವರಲ್ಲಿ ಅಡಕವಾಗಿತ್ತು. 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹಕ್ಕೆ ಪ್ರಯತ್ನಿಸಿ, ಸಫಲತೆ ಕಂಡು ಸಮಾಜಕ್ಕೆ ಸ್ಪೂರ್ತಿಯಾದವರು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ದಾರ್ಶನಿಕರನ್ನು ಆಯಾಯ ಸಮಾಜಕ್ಕೆ ಸೀಮಿತಗೊಳಿಸುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ಮಹಾನೀಯರು ಸಂದೇಶಗಳು ಸಮಾಜದ ಏಳಿಗೆ, ಸುಧಾರಣೆ, ಮನುಷ್ಯತ್ವ ಪ್ರತಿಬಿಂಬಿಸುವ ಜೊತೆಗೆ ಸರ್ವವ್ಯಾಪಿಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಕಿಶನ್, ಬಸವಣ್ಣನವರ ಬದುಕು ಸರ್ವರಿಗೂ ಪ್ರೇರಣೆ ನೀಡಲಿವೆ. ಶರಣರ ವಚನಗಳು ಕೇವಲ ಜಯಂತಿಗಳಲ್ಲಿ ಸೀಮಿತಗೊಳಿಸದೇ ದೈನಂದಿನ ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಪರಸ್ಪರ ಪಸರಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಸ್ತಾರೆ ಸಹಕಾರ ಸಂಘದ ಅಧ್ಯಕ್ಷ ಜಯಚಂದ್ರ, ಮುಖಂಡರಾದ ರಮ್ಯ, ಮೈಲಿಮನೆ ಪೂರ್ಣೇಶ್, ಸುಧಾ ಕಿಶನ್ ಉಪಸ್ಥಿತರಿದ್ದರು.
–ಸುರೇಶ್ ಎನ್.