ಕೊರಟಗೆರೆ:– ಉದ್ಭವ ದೇವರುಗಳ ಪುಣ್ಯ ಭೂಮಿ, 800ವರ್ಷ ಇತಿಹಾಸವುಳ್ಳ ಶ್ರೀಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ನೂತನ ದೇವಾಲಯ ಮತ್ತು ಮೂಲ ದೇವರ ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮದೇವತೆ ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮನವರ ಧಾರ್ಮಿಕ ಕಾರ್ಯಕ್ರಮವು ಕಟ್ಟಡ ಸಮಿತಿಯ ಸಂಪೂರ್ಣ ಸಿದ್ಧತೆಯಿಂದ ಏ.29ರಿಂದ ಮೇ.2 ರವರೆಗೆ ನಡೆದ ಗ್ರಾಮದೇವತೆಗಳ ಪುನರ್ ಪ್ರತಿಷ್ಠಾಪನೆಯಿಂದ ಕೊರಟಗೆರೆ ನಗರ ಸೇರಿದಂತೆ ಸುತ್ತಮುತ್ತಲಿನ 19 ಗ್ರಾಮಗಳಲ್ಲಿ ಮೂರು ದಿನ ಹಬ್ಬದ ವಾತಾವರಣ ಸೃಷ್ಠಿಸಿತ್ತು.

*ನಡೆದ ಧಾರ್ಮಿಕ ಪೂಜೆಗಳು:*
3 ಕೋಟಿ ವೆಚ್ಚದಲ್ಲಿ ಗ್ರಾಮದೇವತೆಯ ಸಂಕಲ್ಪದಂತೆ ನೂತನ ದೇವಾಲಯ ನಿರ್ಮಾಣಗೊಂಡಿದೆ. ಮೂಲ ದೇವತೆಯ ಪುನರ್ ಪ್ರತಿಷ್ಠಾಪನೆಯಲ್ಲಿ ಗಂಗಾ ಪೂಜೆ, ಯಾಗಾಸಾಲ ಪ್ರವೇಶ, ಗಣಪತಿ ಪೂಜೆ, ಪುಣ್ಯ, ದೇವರುಗಳ ಪ್ರಧಾನ ಕಳಸ ಹೋಮ ಮತ್ತು ಪೂಜೆ, ನವಗ್ರಹ ಕಳಸಾ ಆರಾಧನೆ ಹೋಮ, ಮತ್ತು ಬ್ರಾಹ್ಮಿ ಮುಹೂರ್ತದಲ್ಲಿ ಮೂಲ ದೇವರ ಪುನರ್ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಗೋಪುರ ಕಳಸ ಸ್ಥಾಪನೆ, ಮಹಾ ಪೂರ್ಣಾಹುತಿ ಹೋಮ, ಚಂಡಿ ಹೋಮ, ಕುಂಭಾಭಿಷೇಕ, ದೇವಿಗೆ ವಿಶೇಷ ಅಲಂಕಾರ, ಅಷ್ಟ ಬಂಧನ ಪೂಜೆ, ಮಹಾಮಂಗಳಾರತಿ ಪೂಜಾ ಕಾರ್ಯಕ್ರಮವು ನೆರವೇರಿದ್ದು, ದೇವಿಗೆ 48ದಿನಗಳ ಕಾಲ ದಿನನಿತ್ಯ ಪೂಜೆ ನಡೆಯಲಿದೆ ಎನ್ನಲಾಗಿದೆ.

*3 ದಿನಗಳ ಸತತ ದಾಸೋಹ*
ಗ್ರಾಮ ದೇವತೆ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರ ದಮ್ಮ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಮೂರು ದಿನಗಳ ಕಾಲ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಜರುಗುತ್ತಿದ್ದು, ಸಾವಿರಾರು ಜನ ಭಕ್ತಾದಿಗಳಿಗೆ ಸತತವಾಗಿ ಅನ್ನ ಸಂತರ್ಪಣೆಯನ್ನ ಶ್ರೀಮತಿ ಪೂರ್ಣಿಮಾ ಹಾಗೂ ಜನಾರ್ಧನ್ ಜೆ ಪಿ (ತ್ರಿಧಾತ್ರಿ) ರವರ ಕುಟುಂಬದಿಂದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ದಾಸೋಹ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಕಲ್ಪಿಸಲಾಯಿತು .

*ಶ್ರೀಗಳಿಂದ ಗೋಪುರ ಕಳಸ ಸ್ಥಾಪನೆ:*
ಗ್ರಾಮದೇವತೆಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗುರುವಾರ ಸಿದ್ದರಬೆಟ್ಟದ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರ ಶ್ರೀಮಠದ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅಮೃತ ಹಸ್ತಾದಿಂದ ಗೋಪುರ ಕಳಸ ಸ್ಥಾಪಿಸಿದ್ದು, ಸಹಕಾರ ಸಚಿವ ಕೆ.ಎನ್ ರಾಜಣ್ಣ ಮತ್ತು ಮಾಜಿ ಶಾಸಕ ಪಿ.ಆರ್ ಸುಧಾಕರ್‌ಲಾಲ್, ಬಿಜೆಪಿ ಮುಖಂಡ ಅನಿಲ್‌ಕುಮಾರ್ ಭಾಗಿಯಾಗಿ ಪೂಜೆ ಸಲ್ಲಿಸಿದರು.
*ಭಕ್ತರಿಗೆ ಲಾಡು ಮತ್ತು ಅನ್ನ ದಾಸೋಹ ವ್ಯವಸ್ಥೆ:*
ದೇವಾಲಯ ಕಟ್ಟಡ ಸಮಿತಿ ಅಧ್ಯಕ್ಷ ಎ.ಡಿ ಬಲರಾಮಯ್ಯ ಮತ್ತು ರಮಾಮಣಿ ಕುಟುಂಬದಿಂದ ಭಕ್ತರಿಗೆ ಲಾಡು ವಿತರಣೆ ಮತ್ತು ಸಮಾಜ ಸೇವಕ ಜನಾರ್ಧನ್ ಮತ್ತು ಕುಟುಂಬದಿಂದ ಮೂರು ದಿನದ ನಿರಂತರ ದಾಸೋಹ ಕಾರ್ಯಕ್ರಮ ನಡೆಯಿತು. ಸಾವಿರಾರು ಸಂಖೈಯಲ್ಲಿ ಭಕ್ತರು ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ಬೇಡಿಕೊಂಡು ಪ್ರಸಾದ ಸ್ವೀಕರಿಸಿದರು.

ಬಾಳೆಹೊನ್ನೂರು ಖಾಸಾಶಾಖಾ ಮಠ, ಸಿದ್ದರಬೆಟ್ಟ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪುನಃ ನವೀಕರಣಗೊಂಡ ದೇವಾಲಯಗಳು ನಮ್ಮ ಸಂಸ್ಕೃತಿಯ ಸಂಜೀವಿನಿಯಂತೆ ಭಕ್ತರಲ್ಲಿ ನಂಬಿಕೆಯನ್ನು ತುಂಬುತ್ತವೆ. ಭಕ್ತರ ಸಹಕಾರದಿಂದ ಬಹುತೇಕ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ. ಪುರಾತನ ಕಾಲದ ಶ್ರೀಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯ ಮಾತ್ರ ಜೀಣೋದ್ಧಾರಗೊಂಡಿಲ್ಲ, ದೇವಾಲಯದ ಜೀಣೋದ್ಧಾರ ಕಾರ್ಯವನ್ನು ಮಾರಮ್ಮ ದೇವಾಲಯ ಕಟ್ಟಡ ಸಮಿತಿಯೇ ಮುನ್ನಡೆಸಬೇಕು. ಇಂತಹ ಪವಿತ್ರ ಕಾರ್ಯಗಳಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕು. ಎಂದರು.
ಶ್ರೀನರಸಿಂಹಗಿರಿ ಸುಕ್ಷೇತ್ರ. ಎಲೆರಾಂಪುರ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ದೇವಾಲಯಗಳು ಇತಿಹಾಸ ಪುಟಗಳಲ್ಲಿ ಸ್ಥಾನ ಪಡೆದ ಪವಿತ್ರ ಸ್ಥಳ. ಕಲ್ಲಿನಿಂದ ಸಂಪೂರ್ಣ ನಿರ್ಮಿತವಾಗಿರುವುದರಿಂದ ಶಾಶ್ವತತೆಯ ಸಂಕೇತವಾಗಿದೆ. ಪಾಪಕರ್ಮಗಳಿಂದ ಮುಕ್ತಿಯಾಗಲು ಪುಣ್ಯಕ್ಷೇತ್ರಗಳ ದರ್ಶನ ಮತ್ತು ಧಾರ್ಮಿಕ ಸೇವೆ ಅತಿಯಾದ ಅಗತ್ಯ.

ಸಹಕಾರ ಸಚಿವರು ಕೆ.ಎನ್ ರಾಜಣ್ಣ ಮಾತನಾಡಿ, ಕೊರಟಗೆರೆ ಕೋಟೆ ಮಾರಮ್ಮ ಮತ್ತು ಕೊಲ್ಲಾಪುರದಮ್ಮನವರು ಶಕ್ತಿದೇವತೆ. ಚಾಮುಂಡೇಶ್ವರಿಯ ಮತ್ತೊಂದು ರೂಪ ಕೋಟೆ ಮಾರಮ್ಮ. ದೇಶದಲ್ಲಿ ಹಿಂದೂ ಧರ್ಮವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಜೀವನದಲ್ಲಿ ಒಂದಿಷ್ಟು ನೆಮ್ಮದಿ ಪಡೆಯಲು ಸಾಧ್ಯ. ನಾಡಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿ ರೈತರನ್ನು ಮತ್ತು ತನ್ನ ಮಕ್ಕಳನ್ನು ಗ್ರಾಮದೇವತೆ ಕಾಪಾಡಬೇಕು. ಪೂರ್ವಿಕರ ಆಚರಣೆಯನ್ನು ಇಂದಿನ ಯುವಪೀಳಿಗೆ ಮುಂದುವರಿಸುವ ಅಗತ್ಯತೆ ಹೆಚ್ಚಾಗಿದೆ ಎಂದರು.
- ಶ್ರೀನಿವಾಸ್