
ತುಮಕೂರು:ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಎಂಪೇರಿಕಲ್ ಡಾಟಾ ಸಂಗ್ರಹಕ್ಕೆ ಮೇ.05 ರಿಂದ 30 ರವರಗೆ ಮೂರು ಹಂತದ ಸಮೀಕ್ಷೆ ಕೈಗೊಳ್ಳಲಿದ್ದು,ಸಮೀಕ್ಷೆ ನಡೆಸುವವರು ಮನೆಯ ಬಳಿ ಬಂದಾಗ ಛಲವಾದಿ, ಹೊಲೆಯ ಸಂಬಂಧಿತ ಜಾತಿಗಳ ಜನರು ತಮ್ಮ ಉಪಜಾತಿ ಕಲಂನಲ್ಲಿ ಛಲವಾದಿ ಎಂದು ನಮೂದಿಸುವಂತೆ ಜಿಲ್ಲಾದಲಿತ ಛಲವಾದಿ ಮಹಾಸಭಾ ಅಧ್ಯಕ್ಷರಾದ ಡಾ.ಪಿ.ಚಂದ್ರಪ್ಪ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು 1881,1891,1901 ಹಾಗೂ 1911,1921 ರವರೆಗೆ ನಡೆದ ಜನಗಣತಿ ಶೋಷಿತ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿಯ ಹೊಲೆ ಮತ್ತು ಮಾದಿಗ ಸಮುದಾಯಗಳ ತಮ್ಮ ಉಪಜಾತಿಗಳ ಕಲಂನಲ್ಲಿ ಹೊಲೆಯ, ಮಾದಿಗ ಎಂದೇ ನಮೂದಿಸಿದ್ದರು.ಆದರೆ 1931ರ ಜನಗಣತಿ ವೇಳೆ ಹೊಲೆಯ, ಮಾದಿಗ ಎಂಬುದು ಅಸಂವಿಧಾನಿಕ ಎಂದು, ಹೊಲೆಯ ಮತ್ತು ಮಾದಿಗ ಬದಲು ಎ.ಕೆ., ಎ.ಡಿ,ಎ.ಎ, ನಮೂದೆನೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ.ಈ ಸಮಸ್ಯೆ ನಿವಾರಣೆಗೆ ಸರಕಾರ ಒಂದು ಸುವರ್ಣ ಅವಕಾಶ ಕಲ್ಪಿಸಿದ್ದು, ಮೇ.05 ರಿಂದ ನಡೆಯುವ ಸಮೀಕ್ಷೆ ವೇಳೆ ಹೊಲೆಯ ಸಮುದಾಯದ ವ್ಯಕ್ತಿಗಳು ತಮ್ಮ ಜಾತಿಯ ಉಪ ಕಲಂನಲ್ಲಿ ಹೊಲೆಯ ಅಥವಾ ಛಲವಾದಿ ಎಂದು ನಮೂದಿಸುವ ಮೂಲಕ ಸರಕಾರಕ್ಕೆ ಸ್ಪಷ್ಟ ಅಂಕಿ ಅಂಶ ದೊರೆಯುವಂತೆ ಮಾಡಬೇಕಾಗಿದೆ ಎಂದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಸಿ.ಭಾನುಪ್ರಕಾಶ್ ಮಾತನಾಡಿ,ಸರಕಾರದ ಸೌಲಭ್ಯಗಳು ಆಯಾಯ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.ಆದರೆ ಮೈಸೂರು ರಾಜ್ಯದಲ್ಲಿ ಎ.ಕೆ, ಎ.ಡಿ, ಎ.ಎ, ಗೊಂದಲಗಳಿಂದ ಸಾಕಷ್ಟು ತಪ್ಪು ಅಭಿಪ್ರಾಯಗಳು ಮೂಡಿವೆ.ಇದನ್ನು ಹೋಗಲಾಡಿಸಲು ಸರಕಾರ ಒಂದು ಅವಕಾಶ ಕಲ್ಪಿಸಿದೆ.ಹಾಗಾಗಿ ತುಮಕೂರು ಜಿಲ್ಲೆಯ ಎಲ್ಲಾ ಆದಿ ದ್ರಾವಿಡ ಸಮುದಾಯದ ಜನರು ತಮ್ಮ ಜಾತಿ ಉಪಕಲಂ ನಲ್ಲಿ ಛಲವಾದಿ ಎಂದು ಬರೆಯಿಸುವ ಮೂಲಕ ಜನಸಂಖ್ಯೆಯ ನಿಖರ ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂದರು.

ಸರಕಾರದ ಮೂರು ಹಂತದ ಸಮೀಕ್ಷೆಯಲ್ಲಿ ಸಮೀಕ್ಷೆದಾರರು ಮನೆ ಮನೆಗೆ ಭೇಟಿ ನೀಡುವ ವೇಳೆ ಬಾಡಿಗೆ ಮನೆಯಲ್ಲಿರುವ ವ್ಯಕ್ತಿಗಳು ತಮ್ಮ ಜಾತಿ ಬರೆಯಲು ಹಿಂಜರಿಕೆಯಾದರೆ, ಎರಡನೇ ಹಂತದಲ್ಲಿ ಚುನಾವಣಾ ಬೂತ್ ವಹಿ ನಡೆಯುವ ಸಮೀಕ್ಷೆಯ ವೇಳೆ ಖುದ್ದು ಬೂತ್ಗಳಿಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲವೆ ಮೂರನೇ ಹಂತದಲ್ಲಿ ಅನ್ಲೈನ್ ಮೂಲಕ ಸ್ವಯಂ ಘೋಷಿಸಿಕೊಳ್ಳಲು ಅವಕಾಶವಿದ್ದು, ಎಲ್ಲಾ ದಾಖಲಾತಿಗಳೊಂದಿಗೆ ಅನ್ಲೈನ್ನಲ್ಲಿಯೂ ಘೋಷಣೆ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಸಮೀಕ್ಷೆಯಿಂದ ತಪ್ಪಿಸಿಕೊಳ್ಳಬಾರದು.ಒಂದು ವೇಳೆ ಸಮೀಕ್ಷೆಯಿಂದ ಹೊರಗೆ ಉಳಿದರೆ ಸರಕಾರದ ಎಲ್ಲಾ ಸವಲತ್ತುಗಳಿಂದಲೂ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆಎಂದು ಸಿ.ಭಾನುಪ್ರಕಾಶ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ಮುಖಂಡರಾದ ರಂಗಪ್ಪ, ಅಪ್ಪಾಜಯ್ಯ, ತಾ.ಪಂ.ಮಾಜಿಅಧ್ಯಕ್ಷ ಗಂಗಾಂಜನೇಯ, ಗಿರೀಶ್, ಹೆಗ್ಗೆರೆಕೃಷ್ಣಪ್ಪ, ಛಲವಾದಿ ಶೇಖರ್, ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.