ಕೆ.ಆರ್.ಪೇಟೆ – ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಜೀವಗಳನ್ನು ಉಳಿಸಲು ಬೇಕಾದ ಸಂಜೀವಿನಿಯಾದ ರಕ್ತದ ದಾನವು, ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಮಾ ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಯುವಜನರು ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಎಂದು ಹೇಳಿದರು.
ಇಂದಿನ ದಿನಮಾನದಲ್ಲಿ ಜೀವದ ಸಂಜೀವಿನಿಯಾಗಿರುವ ರಕ್ತಕ್ಕೆ ಅಪಾರವಾದ ಬೇಡಿಕೆಯಿದೆ. ರಕ್ತವು ಅಂಗಡಿ ಸೇರಿದಂತೆ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ವಸ್ತುವಲ್ಲ ಆದ್ದರಿಂದ ಆರೋಗ್ಯವಂತರಾದ ಯುವಕ ಯುವತಿಯರು ದಾನಿಗಳಾಗಿ ಕನಿಷ್ಠ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಿ ಅಮೂಲ್ಯವಾದ ಜೀವಗಳನ್ನು ಉಳಿಸುವ ಸಂಕಲ್ಪ ಮಾಡಬೇಕು ಎಂದು ಪ್ರತಿಮಾ ಕರೆ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಹೆಣ್ಣುಮಕ್ಕಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದಾನ ಮಾಡುತ್ತಿರುವುದು ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ. ಯಾವುದೇ ಭಯವಿಲ್ಲದೆ ಹೆಣ್ಣುಮಕ್ಕಳು ರಕ್ತದಾನ ಮಾಡುತ್ತಿರುವುದನ್ನು ನೋಡಿದರೆ ಸಮಾಜದಲ್ಲಿ ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳು ಇನ್ನೂ ಜೀವಂತವಾಗಿವೆ ಎಂದು ಸಂತೋಷವಾಗುತ್ತಿದೆ ಎಂದು ಡಾ.ಅಜಿತ್ ಹೇಳಿದರು.

ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಸತೀಶ್, ಎನ್.ಎಸ್.ಎಸ್ ಅಧಿಕಾರಿ ಚೇತನ್ ಕುಮಾರ್, ಮಧು, ಯುವ ರೆಡ್ ಕ್ರಾಸ್ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.