ಕೊರಟಗೆರೆ:– ಮುಂಗಾರು ಹಂಗಾಮು ಪ್ರಾರಂಭದ ಮೊದಲು ಜಮೀನನ್ನು ಉಳುಮೆ ಮಾಡಬೇಕು. ಮಾಗಿ ಉಳುಮೆ ಮಾಡುವುದರಿಂದ ಹೊಲದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಹೆಚ್ಚಳವಾಗಲು ಸಹಕಾರಿಯಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ ಎಂ.ಆರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಖುಷ್ಕಿ ಭೂಮಿಯಲ್ಲಿ ಅತ್ಯಂತ ಸಹಜವಾಗಿ ನೀರು ಹಿಂಗಿಸುವ ವಿಧಾನವೆಂದರೆ ಮಾಗಿ ಉಳುಮೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಉಳಿಸಬಹುದು. ಹದವಾಗಿ ಉಳುಮೆ ಮಾಡುವುದರಿಂದ ಹೆಂಟೆಗಳು ಒಡೆಯತ್ತವೆ. ಮಣ್ಣಿನ ಕಣಗಳ ರಚನೆಯು ಸುಧಾರಿಸುತ್ತದೆ. ಈ ವಿಧಾನದಿಂದ ಮಣ್ಣು ಸಡಿಲವಾಗುವ ಕಾರಣ ಬಿದ್ದ ಮಳೆ ನೀರು ಭೂಮಿಯ ಹೊರ ಪದರದಲ್ಲಿ ಹರಿದು ಹೋಗದೆ ಒಳಗೆ ಇಳಿಯುತ್ತದೆ.ಇದರಿಂದ ಜಮೀನು ತೇವಾಂಶದಿಂದ ಕೂಡಿರುತ್ತದೆ.

ಮಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಕೆಳ ಪದರದಲ್ಲಿರುವ ರೋಗಾಣುಗಳ ಶಿಲೀಂದ್ರಗಳು, ಕೀಟಗಳು ಮತ್ತು ಅವುಗಳ ಮೊಟ್ಟೆಗಳು, ಕೋಶಗಳು ಬಿಸಿಲಿಗೆ ವಸ್ತುಗಳಾದ ಬೇರು, ಕಾಂಡ, ಇತರ ಸಸ್ಯದ ಭಾಗಗಳು ಭೂಮಿಯ ಒಳಗಡೆ ಸೇರಿ ಕೊಳೆಯುವಿಕೆಗೆ ಸಹಕಾರಿಯಾಗುತ್ತದೆ. ಮುಂಗಾರು ಹಂಗಾಮು ಪ್ರಾರಂಭದ ಮೊದಲು ಜಮೀನನ್ನು ಉಳುಮೆ ಮಾಡಿದರೆ ಈ ಮೇಲಿನ ಎಲ್ಲಾ ಪ್ರಯೋಜನಗಳನ್ನು ಪಡೆದು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಒಂದೆಡೆ ಜಮೀನುಗಳು ವಿಂಗಡಣೆಯಾಗಿ ಅತಿ ಚಿಕ್ಕ ಚಿಕ್ಕ ಜಮೀನುಗಳಲ್ಲಿರುವ ಬದುಗಳು ಕಾಣೆಯಾಗಿ ಮಣ್ಣು ಸವಳಿಕೆಯಿಂದ ನಲುಗಿದರೆ, ಇನ್ನೊಂದೆಡೆ ಟ್ರಾಕ್ಟರ್ ಮತ್ತು ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದ ಮಣ್ಣು ತನ್ನ ಜೀವಂತಿಕೆ ಕಳೆದುಕೊಳ್ಳುತ್ತಿದೆ. ಅಲ್ಲದೆ ಮಣ್ಣು ಗಟ್ಟಿಯಾಗಿ ಸಕ್ರೀಯ ಮಣ್ಣಿನ ಆಳ ಕಡಿಮೆಯಾಗಿರುವುದರಿಂದ, ಮಳೆ ನೀರಿಂಗುವಿಕೆ ಮತ್ತು ಬೇರಿನ ಬೆಳವಣಿಗೆಗೆ ದೊರೆಯುವ ಸ್ಥಳ ಕಡಿಮೆಯಾಗಿದೆ. ಇದರಿಂದ ಮಣ್ಣಿನಲ್ಲಿ ತೇವಾಂಶ ಸಂಗ್ರಹಣೆ ಕಡಿಮೆಯಾಗಿ ತೇವಾಂಶ ಕೊರತೆಯಿಂದ ಬೆಳೆಗಳು ನಲುಗಿ ಇಳುವರಿ ಕಡಿಮೆಯಾಗಿ, ರೈತರು ನಷ್ಟ ಅನುಭವಿಸುವಂತಾಗಿದೆ.

ಈ ಸಮಸ್ಯೆಗೆ ಪರಿಹಾರವಾಗಿ ಮಾಗಿ ಉಳುಮೆ ಪದ್ದತಿ ಅಳವಡಿಸಿಕೊಳ್ಳುವುದು ಉತ್ತಮ. “ಬಡವನ ಮಾಗಿ ಉಳುಮೆ ಬಲ್ಲಿದನ ಗೊಬ್ಬರಕ್ಕೆ ಸಮ” ಎನ್ನುವ ಪಾರಂಪರಿಕ ಗಾದೆಯಲ್ಲಿ ಅಡಗಿದೆ ಮಾಗಿ ಉಳುಮೆಯ ಮಹತ್ವ, ಟ್ರಾಕ್ಟರ್‍ಗಳು ಬಂದಾಗಿನಿಂದ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಾಗಿ ಉಳುಮೆ ಮಾಡುವ ರೈತರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಾಗಿ ಉಳುಮೆ ಒಂದು ಪುರಾತನ ಕೃಷಿ ಚಟುವಟಿಕೆ, ಹಿಂಗಾರು ಕಟಾವಿನ ನಂತರ ಮುಂಗಾರಿಗೂ ಮೊದಲು ಬೇಸಿಗೆಯಲ್ಲಿ ಮಾಡುವ ಮೊಟ್ಟಮೊದಲನೇ ಕೃಷಿ ಚಟುವಟಿಕೆ. ಕನಿಷ್ಟ 2-3 ವರ್ಷಕೊಮ್ಮೆ ಬೇಸಿಗೆಯಲ್ಲಿ ಒಂಟಿ / ಎರಡು ಬಾಳಿನ ನೇಗಿಲು ಹಾಕಿಕೊಂಡು, ಮಣ್ಣಿನಲ್ಲಿ ತೇವಾಂಶ ಇಲ್ಲದಿರುವಾಗ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದನ್ನು ಮೇಲಿನ ಗಾದೆ ಸಾರುತ್ತದೆ.

ಕಳೆದ ಸಾಲಿನಂತೆ ಈ ವರ್ಷವು ಉತ್ತಮ ಮಳೆ ಆಗುವ ಸಾಧ್ಯತೆಯಿದ್ದು ರೈತರು ಸಕ್ರೀಯಾವಾಗಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಹಾಗೂ ಬಿತ್ತನೆ ಪೂರ್ವವಾಗಿ ಕಡ್ಡಾಯವಾಗಿ ಮಾಗಿ ಉಳುಮೆ ಮಾಡಬೇಕೆಂದು ಸಹಾಯಕ ಕೃಷಿ ನಿರ್ದೇಶಕರಾದ ರುದ್ರಪ್ಪ ಎಂ.ಆರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ