ಧರ್ಮಸ್ಥಳ- 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ- ಗೃಹಸ್ಥಾಶ್ರಮಕ್ಕೆ ಕಾಲಿಟ್ಟ 75 ಜೋಡಿಗಳು-ಬಡವರಿಗೆ ವರದಾನವಾದ ಸಾಮೂಹಿಕ ವಿವಾಹ -ಈವರೆವಿಗೂ 12900 ಜನರಿಗೆ ಮಾಂಗಲ್ಯ ಭಾಗ್ಯ

ಧರ್ಮಸ್ಥಳ: ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ಮೇ 3 ರಂದು ಶನಿವಾರ ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಮುಹೂರ್ತದಲ್ಲಿ ಆಯೋಜಿಸಿದ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 75 ಜತೆ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 75 ಜತೆ ವಧು-ವರರು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಮದುವೆಯ ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು.
ವೇದಘೋಷ, ಮಂಗಳವಾದ್ಯ, ಮಂತ್ರಾಕ್ಷತೆಯೊಂದಿಗೆ ಸುಮುಹೂರ್ತದಲ್ಲಿ ಹಾರ ವಿನಿಮಯ ಮತ್ತು ಮಾಂಗಲ್ಯಧಾರಣೆ ನಡೆಯಿತು. ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ನೂತನ ದಂಪತಿಗೆ ಶುಭ ಹಾರೈಸಿ, ಮಾತನಾಡಿ, ಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಸೇವೆ ಎಂದು ಹೇಳಿದರು. ನಾಡಿನೆಲ್ಲೆಡೆ ಬಹುಮುಖಿ ಸಮಾಜಸೇವಾ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿಯೂ ಹಣದ ಮಿತಬಳಕೆ, ಉಳಿತಾಯ ಹಾಗೂ ಸಮರ್ಪಕ ಹೂಡಿಕೆ ಬಗ್ಗೆ ಪೂಜ್ಯ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸೇವೆ ಹಾಗೂ ಸಾಧನೆ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಳ ಸಾಮೂಹಿಕ ವಿವಾಹ ಅತ್ಯಂತ ಪುಣ್ಯದ ಕಾಯಕ. ಕಳೆದ 52 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ 12,900 ಜತೆ ವಿವಾಹವಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯ ಜೀವನ ನಡೆಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ತಾವು ಕಾನೂನು ಸಚಿವರಾಗಿದ್ದಾಗ ಸರಳ ಸಾಮೂಹಿಕ ವಿವಾಹ ಪದ್ಧತಿ ಜಾರಿಗೆ ತರಲು ಕಾನೂನು ರೂಪಿಸಿದ್ದೆ. ಆದರೆ ಸಚಿವ ಸಂಪುಟದಲ್ಲಿ ಹಾಗೂ ಇತರರು ಕೂಡಾ ಇದ್ದಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ತಾನು ವಿಫಲನಾದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹೆಗ್ಗಡೆಯವರ ಕಷ್ಟದ ಕಾಲದಲ್ಲಿ ಶ್ರೀ ಮಂಜುನಾಥ ಸ್ವಾಮಿ ಅವರಿಗೆ ಶಾಂತಿ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು. ಪೂಜ್ಯರ ಜತೆಗೆ ನಾವೆಲ್ಲ ಸದಾ ಸಿದ್ಧರೂ, ಬದ್ಧರೂ ಆಗಿದ್ದೇವೆ ಎಂದು ಅವರು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಸನಾತನ ಪರಂಪರೆಯಲ್ಲಿ ಷೋಢಶ ಸಂಸ್ಕಾರಗಳಲ್ಲಿ ಮದುವೆ ಎಂಬುದು ಭಾವನಾತ್ಮಕ ಸಂಬಂಧ ಹೊಂದಿದೆ. ಈ ಪವಿತ್ರ ಸಂಸ್ಕಾರ ಪಡೆದ ಪತಿ-ಪತ್ನಿ ಸಮಾನವಾಗಿ ಸುಖ-ಕಷ್ಟ, ನೋವು-ನಲಿವು ಎಲ್ಲವನ್ನೂ ಶಾಂತಿ ಮತ್ತು ತಾಳ್ಮೆಯಿಂದ ಅನುಭವಿಸಿ ಧನ್ಯತಾಭಾವ ಹೊಂದಿರಬೇಕು. ಸಾರ್ಥಕ ಜೀವನ ನಡೆಸಬೇಕುʼʼ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆ ಆದವರು ದುಂದುವೆಚ್ಚ ಮಾಡಬಾರದು. ಸತ್ಕಾರಕೂಟ, ನಿಶ್ಚಿತಾರ್ಥ, ಅತಿಥಿ ಸತ್ಕಾರಕ್ಕೆಂದು ಅನಗತ್ಯ ವೆಚ್ಚ ಮಾಡಬಾರದು ಎಂದು ಸಲಹೆ ನೀಡಿದರು.
ಅನೇಕ ಮಂದಿ ದಾನಿಗಳು ನಗದು ದೇಣಿಗೆ, ಮಂಗಳಸೂತ್ರ, ಮೂಗುತಿ, ಸೀರೆ ಮೊದಲಾದವುಗಳನ್ನು ಉಚಿತ ಸಾಮೂಹಿಕ ವಿವಾಹಕ್ಕೆ ಕೊಡುಗೆಯಾಗಿ ನೀಡಿ ಪುಣ್ಯ ಭಾಗಿಗಳಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಧರ್ಮಸ್ಥಳದ ವತಿಯಿಂದ ನೂತನ ದಂಪತಿಗೆ ವಿಶೇಷ ಉಡುಗೊರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹೇಮಾವತಿ.ವಿ.ಹೆಗ್ಗಡೆ, ಶ್ರೀಮತಿ ಶ್ರದ್ಧಾಅಮಿತ್, ಅಮಿತ್ ಉಪಸ್ಥಿತರಿದ್ದರು. ಡಿ.ಹರ್ಷೇಂದ್ರ ಕುಮಾರ್, ಅಖಿಲೇಶ್ ಶೆಟ್ಟಿ ಧರ್ಮಸ್ಥಳ , ಡಾ. ಸುನಿಲ್ ಪಂಡಿತ್ ನಿರ್ವಹಿಸಿದರು.

ವರದಿ:ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?