ಚಿಕ್ಕಮಗಳೂರು-ಹಳದಿ-ಕೆಂಪು ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ಗಳನ್ನು ಧರಿಸದೇ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವ ಸರಕಾರಿ ನೌಕರರು:ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು:-ರಾಜ್ಯದ ಸರ್ಕಾರಿ ಇಲಾಖೆ ನೌಕರರು ಹಳದಿ-ಕೆಂಪು ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ಗಳನ್ನು ಧರಿಸದೇ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂಬoಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಕರವೇ ಮುಖಂಡರುಗಳು ಮನವಿ ಸಲ್ಲಿಸಿ ಸರ್ಕಾರದ ಆದೇಶದಂತೆ ಹಳದಿ-ಕೆಂಪು ಬಣ್ಣದ ಟ್ಯಾಗ್ ಧರಿಸಿರದಿದ್ದಲ್ಲಿ ಆಯಾ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಮಾತನಾಡಿದ ಕರವೆ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್ ಕರ್ನಾಟಕ ರಾಜ್ಯ ಉಗಮಗೊಂಡು 50 ವರ್ಷ ಪೂರೈಸಿದ ಹಿನ್ನೆಲೆ ಹೆಸರಾಯಿತು ಕರ್ನಾಟಕ, ಉಸಿರಾಗಲೀ ಕನ್ನಡ ಎಂಬ ಅಭಿಯಾನದಡಿ ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ಎಲ್ಲಾ ಇಲಾಖೆಗಳು, ನಿಗಮ ಮಂಡಳಿ, ನಿರ್ದೇಶನಾಲಯ ಸೇರಿದಂತೆ ಇತ್ಯಾದಿ ಕಚೇರಿಗಳಲ್ಲಿ ಹಳದಿ-ಕೆಂಪು ಟ್ಯಾಗ್ ಧರಿಸಲು ಆದೇಶಿಸಿತ್ತು ಎಂದರು.

ಅದರoತೆ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧೀಕಾರಿಗಳು, ಸಿಬ್ಬಂದಿಗಳು ತಮ್ಮ ಇಲಾಖೆಯ ಗುರುತಿನ ಚೀಟಿಯ ಟ್ಯಾಗ್‌ಗಳನ್ನು ಧರಿಸಲು ಪ್ರಾಧಿಕಾರಗಳು ಕೂಡಲೇ ನಿಯಮ ಗಳನುಸಾರ ಪಾಲಿಸಬೇಕೆಂದು ಕಳೆದ ತಿಂಗಳಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ ಎಂದು ಹೇಳಿದರು.

ಆದರೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಯಾವುದೇ ಅಧಿಕಾರಿಗಳು ಕೂಡಾ ಹಳದಿ-ಕೆಂಪು ಬಣ್ಣ ಟ್ಯಾಗ್ ಧರಿಸಿದೇ ಸರ್ಕಾರದ ಆದೇಶವನ್ನು ಪಾಲಿಸದೇ ತಿಂಗಳಿನಿoದ ಕರ್ತವ್ಯ ನಿರತರಾಗಿದ್ದಾರೆ.ಆದ್ದರಿಂದ ಕೂಡಲೇ ಸರ್ಕಾರದ ಆದೇಶವನ್ನು ಪಾಲಿಸಬೇಕು ಜಿಲ್ಲಾಡಳಿತ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ಕುಮಾರ್,ನಗರಾಧ್ಯಕ್ಷ ಈಶ್ವರ್,ಸದಸ್ಯರುಗಳಾದ ಅಶ್ವತ್,ನಟರಾಜ್, ಶಿವಕುಮಾರ್,ದಾಸ್,ಮಂಜುನಾಥ್,ಪ್ರಕಾಶ್ ಮತ್ತಿತರರಿದ್ದರು.

————–ಸುರೇಶ್

Leave a Reply

Your email address will not be published. Required fields are marked *

× How can I help you?