ಚಿಕ್ಕಮಗಳೂರು;ರೈತರು ಒತ್ತುವರಿ ಸಂಬoಧಪಟ್ಟಂತೆ ಅರ್ಜಿ ನಮೂನೆ 50, 53, 57 ಹಾಗೂ 94ಸಿ, 94ಸಿಸಿ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಸಾಗುವಳಿ ಚೀಟಿ ಖಾತೆ ದಾಖಲೆಗಳನ್ನು ನೀಡಬೇಕು.ಒತ್ತುವರಿ ವಿಚಾರದಲ್ಲಿ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವುದನ್ನು ತಕ್ಷಣದಿoದಲೇ ನಿಲ್ಲಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬoಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ದೊಡ್ಡ ದೊಡ್ಡ ಕಂಪನಿಗಳು ನೂರಾರು ಎಕರೆ ಒತ್ತುವರಿ ಹಾಗೂ ರೆಸಾರ್ಟ್ಗಳ ನಿರ್ಮಾಣಕ್ಕೆ ಅರಣ್ಯ ಒತ್ತುವರಿಗೊಳಿಸಿದನ್ನು ತೆರವುಗೊಳಿಸದೇ ಬಂಡವಾಳ ಶಾಹಿಗಳ ಜೊತೆ ಸರ್ಕಾರ ಇರುವುದು ಹಲವು ಸಂಶಯಕ್ಕೆ ಎಡೆ ಮಾಡಿಕೊಡುತ್ತಿವೆ.
ಜಿಲ್ಲೆಯ ಗೋಮಾಳ,ಸೊಪ್ಪಿಬೆಟ್ಟ,ಕಾನು,ಹುಲ್ಲುಬನ್ನಿ ಹಾಗೂ ಇತರೆ 55 ಸಾವಿರ ಹೆಕ್ಟೇರ್ ಕಂದಾಯ ಭೂಮಿಗಳನ್ನು ಅವೈಜ್ಞಾನಿಕವಾಗಿ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 4ರಡಿಯಲ್ಲಿ 2001-02 ರಲ್ಲಿ ಮೀಸಲು ಅರಣ್ಯವೆಂದು ಘೋಷಿಸಿ ನಂತರ ಡೀಮ್ಡ್ ಅರಣ್ಯವೆಂದು ಅರಣ್ಯದ ಕರುವೆ ಇಲ್ಲದೇ ಪ್ರದೇಶವನ್ನು ಅಂದಿನ ಜಿಲ್ಲಾಧಿಕಾರಿಗಳು ಅರಣ್ಯ ಮೀಸಲೆಂದು ಘೋಷಿಸಿರುವುದು ಅವೈಜ್ಞಾನಿಕವಾಗಿದೆ ಎಂದರು.
ದೇಶವು ಸ್ವಾತಂತ್ರ್ಯಗೊಂಡ ದಿನದಿಂದಲೂ ರೈತರ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿವೆ.ಕೇಂದ್ರ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸದೇ ಕೊಟ್ಟ ಮಾತನ್ನು ತಪ್ಪಿದೆ.
ಕೇಂದ್ರ ಸರ್ಕಾರ ಕೃಷಿ ಬೆಲೆ ಆಯೋಗ ನೀಡಿದ ವರದಿಯನ್ನು ಜಾರಿ ಮಾಡಲಿಲ್ಲ.ಸರ್ಕಾರಗಳು ಜಾರಿಗೊಳಿಸಿರುವ ಬೆಂಬಲ ಬೆಲೆಗೆ ಯಾವುದೇ ಮಾನದಂಡವಿಲ್ಲ.2014ರಿಂದ ಇಲ್ಲಿತನಕ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೃಷಿ, ಗ್ರಾಮಾಭಿವೃದ್ದಿ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ನೈರ್ಮಲ್ಯ,ಉದ್ಯೋಗಖಾತ್ರಿ ಮುಂತಾದ ವಲಯಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಕಡಿತಗೊಳಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರದ ಅವೈಜ್ಞಾನಿಕ ಆಮದು ನೀತಿಗಳಿಂದ ಕಾಫಿ,ಅಡಿಕೆ,ಕಾಳುಮೆಣಸು,ತೆಂಗು,ರಬ್ಬರ್ ಹಾಗೂ ಶೇಂಗಾ,ಸೂರ್ಯಕಾಂತಿ ಮುಂತಾದ ಎಣ್ಣೆ ಕಾಳುಗಳು ಆಮದಾಗುತ್ತಿದ್ದು ನಮ್ಮ ರೈತರ ಬೆಳೆಗಳು ತೀವ್ರ ಕುಸಿತವಾಗುತ್ತಿದೆ.
ರಸಗೊಬ್ಬರ,ಕೀಟನಾಶಕ ಇತ್ಯಾದಿ ಸಬ್ಸಿಡಿ ಕಡಿತಗೊಳಿಸಿ ಬೆಲೆಯನ್ನು ಏರಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ವಿದ್ಯುತ್ ಖಾಸಗೀಕರಣದ ಭಾಗವಾಗಿ ಐಪಿಸೆಟ್ಗಳಿಗೆ ಆಧಾರ್ ಜೋಡಿಸಿ ಸ್ವಯಂ ಆರ್ಥಿಕ ಯೋಜನೆ ಜಾರಿಗೊಳಿಸಿರುವ ಪರಿಣಾಮ ರೈತರನ್ನು ಕೃಷಿಯಿಂದ ಹೊರಹಾಕುವ ಪ್ರಯತ್ನಿಸಲಾಗುತ್ತಿದೆ.
ಕಾರ್ಫೊರೇಟ್ ಪರವಾದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ರದ್ದುಪಡಿಸಿ ಎಲ್ಲಾ ಬೆಳೆಗಳಿಗೂ ವಿಮೆ ಒದಗಿಸುವ ಸಮಗ್ರ ಸಾರ್ವಜನಿಕ ವಿಮಾಯೋಜನೆ ಜಾರಿಗೊಳಿಸಬೇಕು.ರೈತರ ಎಲ್ಲಾ ಸಾಲಗಳನ್ನು ಮನ್ನಾ ಯೋಜನೆ ಜಾರಿಗೆ ತರಬೇಕು.ಕೃಷಿ ಸಾಲ ಪಡೆಯಲು ಬ್ಯಾಂಕ್ಗಳು ಎನ್ಓಸಿಗೆ ಶುಲ್ಕ ವಸೂಲಿ ಮಾಡಬಾರದು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಸಿರುಸೇನೆ ಅಧ್ಯಕ್ಷ ಅನಂತೇಶ್, ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್, ಜಿಲ್ಲಾ ಸಂಚಾಲಕ ಸವಿಂಜಯ ಜೈನ್, ಉಪಾಧ್ಯಕ್ಷ ಬಸವರಾಜಪ್ಪ, ಮುಖಂಡರುಗಳಾದ ಬಿ.ಸಿ.ದಯಾಕರ್, ನಿರಂಜನಮೂರ್ತಿ, ಸುರೇಶ್ ಭಟ್, ಓಂಕಾರಪ್ಪ, ಹೆಚ್.ಕುಮಾರ್, ಕಾರ್ಯದರ್ಶಿ ಅಣ್ಣೇಗೌಡ ಮತ್ತಿತರರು ಹಾಜರಿದ್ದರು.
——–ಸುರೇಶ್