ತುಮಕೂರು: ಭಾರತದಲ್ಲಿ ಉಳಿದಿರುವ ಪಾಕಿಸ್ತಾನದ ಪ್ರಜೆಗಳನ್ನು ದೇಶದಿಂದ ಓಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ನಿರ್ದೇಶನ ನಿರ್ಲಕ್ಷಿಸಿ ಪಾಕ್ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳಿಸಲು ಉದಾಸೀನ ಮಾಡುತ್ತಿರುವ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ನಗರಪಾಲಿಕೆ ಆವರಣದ ಡಾ.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಬಿಜೆಪಿ ಮುಖಂಡರು, ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಮ್ಮು-ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರು ಹಿಂದೂ ಪ್ರವಾಸಿಗರ ಹತ್ಯೆನಡೆಸಿದ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ಉತ್ತರ ನೀಡಲು 5 ರಾಜತಾಂತ್ರಿಕ ಕ್ರಮ ಕೈಗೊಂಡಿದೆ. ಅದರಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಘಟನೆ ನಡೆದ 48 ಗಂಟೆಗಳೊಳಗೆ ಅವರ ದೇಶಕ್ಕೆ ವಾಪಸ್ ಕಳಿಸಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.ಆದರೆ, ಕರ್ನಾಕ ಸೇರಿದಂತೆ ಬಿಜೆಪಿಯೇತರ ರಾಜ್ಯಗಳ ಸರ್ಕಾರಗಳು ಈ ವಿಚಾರವನ್ನು ಉದಾಸೀನ ಮಾಡಿ ಪಾಕ್ ಪ್ರಜೆಗಳ ರಕ್ಷಣೆ ಮಾಡುತ್ತಿವೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳಿಸುವ ಪ್ರಯತ್ನ ಮಾಡದೆ ನಿರ್ಲಕ್ಷತೆ ಮಾಡಿದೆ.ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ರಾಜ್ಯಪಾಲರಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ.ಜಿಲ್ಲೆಯಲ್ಲೂ ಪಾಕಿಸ್ತಾನ ಪ್ರಜೆಗಳನ್ನು ಪತ್ತೆ ಮಾಡಿ ಕಳುಹಿಸುವ ಕಾರ್ಯ ಮಾಡುತ್ತಿಲ್ಲ. ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕಮಾತನಾಡಿ, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದು 26 ಜನ ಅಮಾಯಕ ಪ್ರವಾಸಿಗರು ಹತ್ಯೆಗೀಡಾದ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ,ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಭಾರತದಿಂದ ಕಳುಹಿಸಬೇಕೆಂದು ಎಲ್ಲಾರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದರೂ ಕಾಂಗ್ರೆಸ್ ಆಡಳಿತವಿರುವ ಸರ್ಕಾರಗಳ ಪಾಲನೆ ಮಾಡದೆ ಪಾಕಿಸ್ತಾನಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಅಪಾದಿಸಿದರು.

ಜಿಲ್ಲಾ ಬಿಜೆಪಿ ಮುಖಂಡರುಗಳಾದ ಸಂದೀಪ್‌ಗೌಡ,ಧನುಷ್, ನವಚೇತನ್, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಸಿ.ಎನ್.ರಮೇಶ್, ವಿಷ್ಣುವರ್ಧನ್, ಪುಟ್ಟರಾಜು, ಸತ್ಯಮಂಗಲ ಜಗದೀಶ್, ವಿರೂಪಾಕ್ಷಪ್ಪ, ಗಣೇಶ್‌ಪ್ರಸಾದ್,ಹನುಮಂತರಾಯಪ್ಪ, ಬಂಬೂಮೋಹನ್, ವೆಂಕಟೇಶಾಚಾರ್, ದಯಾನಂದ,ಅಕ್ಷಯ್‌ಚೌಧರಿ, ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ