ಹಾಸನ: ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ರಂಗ ಹೃದಯ ಹಾಗೂ ಸಂಸ್ಕೃತಿ ಟ್ರಸ್ಟ್ ವತಿಯಿಂದ 21 ದಿನಗಳ ಮಕ್ಕಳ ರಂಗ ಶಿಬಿರ ‘ಕುಣಿಯೋಣ ಬಾರ’ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನೆರವೇರಿತು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಈಚೆಗೆ ಈ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಅನುಭವಿ ರಂಗಭೂಮಿ ಕಲಾವಿದರು ಮಕ್ಕಳಿಗೆ ರಂಗಭೂಮಿಯ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಟ್ಟರಲ್ಲದೆ, ಸಿನಿಮಾ ನಟನೆ ಕುರಿತಾಗಿ ಶಿಬಿರದಲ್ಲಿ ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ನೀಡಿದ ನೃತ್ಯ ಪ್ರದರ್ಶನಗಳು ಮತ್ತು ನೀನಾಸಮ್ ರಂಗ ಶಿಕ್ಷಕ ಅಜಯ ಸಿಂಹ ನಿರ್ದೇಶನದ ‘ತಕರಾರಿ ಅಲ್ಲಾ ತರಕಾರಿ’ ನಾಟಕವು ಎಲ್ಲರ ಗಮನ ಸೆಳೆಯಿತು. ನಂತರ ರಂಗಾಯಣ ಪ್ರದೀಪ್ ನಿರ್ದೇಶಿಸಿದ 45 ನಿಮಿಷಗಳ ‘ಮಹಾಭಾರತದ ಮಹಾ ಪಾತ್ರಗಳು’ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಹಾಸನ ಮಹಾನಗರ ಪಾಲಿಕೆ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಮಕ್ಕಳಿಗಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಶ್ಲಾಘಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ಮಕ್ಕಳ ಕಲಾ ಪ್ರತಿಭೆಯನ್ನು ಮುಕ್ತವಾಗಿ ಹೊಗಳಿದರು. ಇಂತಹ ರಂಗ ಶಿಬಿರಗಳು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕöÈತಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಶಿಬಿರದ ಸಂಚಾಲಕಿ ಪೂಜಾ ರಘುನಂದನ್ ಮಾತನಾಡಿ, 21 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ರಸ್ತೆ ಸುರಕ್ಷತೆ ಕುರಿತು ಮಾಹಿತಿ, ಭಾರತ ದರ್ಶನ, ರಂಗಗೀತೆಗಳ ಕಲಿಕೆ, ರಂಗಾಟಗಳು, ನಾಟಕ ಕಲಿಕೆ, ರಂಗಭೂಮಿಯ ವಿವಿಧ ಆಯಾಮಗಳ ಪರಿಚಯ, ಬೆಳದಿಂಗಳ ಊಟ ಕಾರ್ಯಕ್ರಮ, ಪೊಲೀಸ್ ಸ್ವಾನದಳ ಪ್ರಾತ್ಯಕ್ಷಿಕೆ, ಪುಸ್ತಕದ ಅಂಗಡಿಗೆ ಭೇಟಿ, ಕಥೆ ಓದು, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಾತ್ಯಕ್ಷಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟೈಮ್ಸ್ ಗಂಗಾಧರ್ ಮಾತನಾಡಿ, ಮಕ್ಕಳ ಬಾಲ್ಯವನ್ನು ಉನ್ನತೀಕರಿಸುವ ಇಂತಹ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಅಭಿನಂದನೆಗಳು. ಕಳೆದ ಮೂರು ವರ್ಷಗಳಿಂದಲೂ ಮಕ್ಕಳ ಸಾಹಿತ್ಯ ಪರಿಷತ್ತು ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮುಂದೆಯೂ ಮಕ್ಕಳ ಬೌದ್ಧಿಕ ವಿಕಾಸ ಹಾಗೂ ಸಾಹಿತ್ಯದ ಕಡೆಗೆ ಅವರನ್ನು ಸೆಳೆಯುವ ಕಾರ್ಯವನ್ನು ಮುಂದುವರೆಸಲಾಗುವುದು ಎಂದರು.
ತರಬೇತುದಾರ ಅಜಯ ಸಿಂಹ, ರಂಗ ಹೃದಯ ಅಧ್ಯಕ್ಷ ಗುರುರಾಜ್ ಹುಲಿಕಲ್ ಹಾಗೂ ಇತರರು ಹಾಜರಿದ್ದರು.