ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ಮಡುವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಂ.ಪಿ.ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಥಮ ಸಾಮಾನ್ಯ ನಡೆಸಿದ ಅಧ್ಯಕ್ಷ ಎಂ.ಪಿ.ಲೋಕೇಶ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಸಂಘಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಎಲ್ಲಾ ಸಮುದಾಯಕ್ಕೂ, ಎಲ್ಲಾ ಗ್ರಾಮಗಳಿಗೂ ತಮ್ಮ ಅಧಿಕಾರದ ಅವಧಿಯಲ್ಲಿ ಅಂಬೇಡ್ಕರ್ ಆಶಯದಂತೆ ಸಾಮಾಜಿಕ ನ್ಯಾಯ ಒದಗಿಸಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಸಂಘದ ಮೂಲಕ ಸಾಲ ಪಡೆದುಕೊಂಡಿರುವ ಹಲವು ಮಹಿಳಾ ಸ್ವಸಹಾಯ ಸಂಘಗಳು ಕೂಡಲೇ ಸಾಲ ಮರುಪಾವತಿ ಮಾಡಬೇಕು ಈ ಮೂಲಕ ಬೇರೇ ಸಂಘಗಳಿಗೆ ಸಾಲ ಸೌಲಭ್ಯ ನೀಡಲು ಅವಕಾಶ ನೀಡಬೇಕು.

ಈ ಬಗ್ಗೆ ಸಂಘದ ಸಿಇಓ ಅವರು ಸಾಲ ಬಾಕಿ ಉಳಿಸಿಕೊಂಡಿರುವ ಸಂಘಗಳಿಗೆ ನೋಟೀಸ್ ಜಾರಿ ಸಾಲ ವಸೂಲಾತಿಗೆ ಕ್ರಮ ವಹಿಸಬೇಕು. ಸಂಘದಲ್ಲಿ ಹೊಸ ಶೇರುದಾರರಾಗಲು ಬಯಸುವ ಎಲ್ಲಾ ರೈತರಿಗೂ ಶೇರು ನೀಡಲು ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಉಚಿತವಾಗಿ ಶೇರು ನೀಡಲು ಅವಕಾಶವಿದ್ದು ದಲಿತ ಬಂಧುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಂಘದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರೈತರು ಸಂಘದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಎಂ.ಪಿ.ಲೋಕೇಶ್ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷ ಎಂ.ಪಿ.ಲೋಕೇಶ್, ಉಪಾಧ್ಯಕ್ಷೆ ಮಂಗಳಮ್ಮ ಸೇರಿದಂತೆ ಎಲ್ಲಾ ನಿರ್ದೇಶಕರು, ಸಂಘದ ಮೇಲ್ವಿಚಾಕರ ರಘು ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಉಮೇಶ್, ನಾಗೇಶ್, ಪ್ರಶಾಂತ್ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ನಿರ್ದೇಶಕರಾದ ಸತೀಶ್ ಕುಮಾರ್, ಶ್ರೀನಿವಾಸ್, ಎಂ.ಸಿ.ರವಿಕುಮಾರ್, ಸಂಜಯ್, ಡಿ.ಬಿ.ಮಹೇಶ್, ರಾಮಚಂದ್ರ, ವಿಜಯ್ ಕುಮಾರ್, ಹೇಮರಾಜಶೇಖರ್, ಸುನಂದಮ್ಮ, ಬೇಬಿ, ಮಾಜಿ ಅಧ್ಯಕ್ಷರುಗಳಾದ ಉಮೇಶ್, ನಾಗೇಶ್, ಪ್ರಶಾಂತ್ ಉಪಸ್ಥಿತರಿದ್ದು ಸಂಘದ ಅಭಿವೃದ್ಧಿ ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು.

ಸಂಘದ ಸಿಇಓ ಅನುರಾಧ ಸಭೆಗೆ ಅಗತ್ಯ ಮಾಹಿತಿಗಳನ್ನು ಒದಗಿಸಿದರು. ಸಿಬ್ಬಂದಿಗಳಾದ ಸುರೇಶ್, ರಶ್ಮಿ, ಪ್ರಕಾಶ್ ಇತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.