ಕೊರಟಗೆರೆ- ಜಲಜೀವನ್ ಮಿಷನ್ ಯೋಜನೆ ವೈಫಲ್ಯ – ಗುತ್ತಿಗೆದಾರರ ಧನದಾಹಕ್ಕೆ ಯೋಜನೆ ಹಾಳು- ವಿಶೇಷ ವರದಿ

ಕೊರಟಗೆರೆ :- ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಅಕ್ಷರಶಃ ಪೂರ್ಣ ಪ್ರಮಾಣದಲ್ಲಿ ವಿಫಲವಾಗಿದ್ದು, 2021 ರಲ್ಲಿ ಪ್ರಾರಂಭವಾದ ಕಾಮಗಾರಿ 4 ವರ್ಷ ಕಳೆದರೂ ಪೂರ್ಣಗೊಳ್ಳದೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಹಣ ದಾಹಕ್ಕೆ ಇಡೀ ಯೋಜನೆ ಹಳ್ಳ ಹಿಡಿದಿದೆ.

          ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ 50 : 50ರ ಅನುಪಾತದಲ್ಲಿ ಹಣ ಬಿಡುಗಡೆಗೊಂಡು, ತುಮಕೂರು ಜಿಲ್ಲೆಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ಮೀಸಲಿಟ್ಟು, ಕೊರಟಗೆರೆ ತಾಲೂಕಿನಲ್ಲಿ 100 ಕೋಟಿಗೂ ಹೆಚ್ಚು ಅನುದಾನದ ಕಾಮಗಾರಿ ನಡೆಯುತ್ತಿದ್ದು, 30 ರಿಂದ 40 ಕೋಟಿಗೂ ಹೆಚ್ಚು ಹಣ ಬಿಡುಗಡೆಗೊಂಡು ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ 22 ಗ್ರಾಮ ಪಂಚಾಯತಿಗಳಲ್ಲಿಯೂ ಜಲಜೀವನ್ ಮಿಷನ್ ಯೋಜನೆ ಬರೋಬರಿ 4 ವರ್ಷ ಕಳೆದರೂ ಯಾವುದೇ ಪಂಚಾಯತಿ ಕಾಮಗಾರಿ ಪೂರ್ಣಗೊಳ್ಳದೆ ಇಡೀ ಯೋಜನೆ ವಿಫಲವಾಗಿದೆ ಎಂದು ಸ್ವತಃ ಗ್ರಾಮ ಪಂಚಾಯತಿ ಸದಸ್ಯರುಗಳೇ ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತದೆ.

              ರಾಜ್ಯದ ಬಹುತೇಕ ಜಿಲ್ಲೆಗಳು ನೀರಿನ ಸಮಸ್ಯೆ ನಿರಂತರವಾಗಿ ಅನುಭವಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಜನ ಪರದಾಡುವಂತಹ ಪರಿಸ್ಥಿತಿ  ಇದೆ, ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ, ಪ್ರತಿಯೊಬ್ಬರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಒದಗಿಸುವ ಈ ಯೋಜನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿಯೂ ಮನೆಮನೆಗೆ ನೀರು ಕೊಡುವ ಜಲಜೀವನ್ ಮಿಷಿನ್ ಯೋಜನೆ ಸಾರ್ವಜನಿಕರ ದಾಹ ನಿಗಿಸುವಂತ   ಮನೆಮನೆ ಗಂಗೆ ಹೆಸರಿನ ಯೋಜನೆ  ಸಾರ್ವಜನಿಕರಿಗೆ ಮರೀಚಿಕೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ. 

              ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಯೋಗದಲ್ಲಿ ಜನರ ನೀರಿನ ಬವಣೆಯನ್ನು ನೀಗಿಸುವ ಉದ್ದೇಶ ದೊಂದಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಲಿಸುವ ಜಲ ಜೀವನ್‌ ಮಿಷನ್‌ ಯೋಜನೆಯನ್ನು ಮಹತ್ವಕಾಂಕ್ಷಿ ಇಟ್ಟುಕೊಂಡು ಪ್ರಾರಂಭಿಸಿ ಅದರಲ್ಲೂ ಕರ್ನಾಟಕದಲ್ಲಿ ಈ ಯೋಜನೆ ಮನೆ ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಜಲ ಜೀವನ್ ಮಿಷನ್‌ (ಜೆಜೆಎಂ) 2019ರಲ್ಲಿ ಪ್ರಾರಂಭವಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಹಂತದಲ್ಲಿ 2021 ರಲ್ಲಿ ಈ ಪ್ರಾರಂಭಿಸಲಾಗಿ, ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಪೈಪ್ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ದ್ಯೆಯೋದ್ದೇಶ ದೊಂದಿಗೆ ಪ್ರಾರಂಭವಾಗಿದ್ದರೂ 4 ವರ್ಷ ಕಳೆದರೂ ಹಣ ಬಳಕೆಯಾಗಿದೆ ಬಿಟ್ಟರೆ ಈವರೆಗೂ ಯಾವ ಪಂಚಾಯತಿಯಲ್ಲೂ ಈ ಯೋಜನೆ ಪೂರ್ಣಗೊಳ್ಳದಿರುವುದು ಯೋಜನೆಯ ಹಾದಿತಪ್ಪಿ ಇಡೀ ಯೋಜನೆ ವಿಫಲಗೊಂಡಿದೆ ಎಂದು ಸ್ಥಳೀಯ ಸಾರ್ವಜನಿಕರೇ ಆರೋಪಿಸುತ್ತಿರುವುದು ಕಂಡುಬರುತ್ತಿದೆ. 

         ಜಲಜೀವನ್ ಮಿಷನ್ ಗ್ರಾಮೀಣ ಪ್ರದೇಶದ 20 ಮನೆಗಳಿರುವ ಪ್ರದೇಶದಲ್ಲೂ ಮನೆ ಮನೆಗೆ ಕೊಳಯಿ ಅಳವಡಿಸಿ ನಿತ್ಯ ನೀರು ಒದಗಿಸಬೇಕು ಎಂಬ ನಿಯಮಾವಳಿ ಇದೆ ಅದರಂತೆ ಕೊರಟಗೆರೆ ತಾಲೂಕಿನಲ್ಲಿ  337 ಹಳ್ಳಿಗಳು ಈ ಯೋಜನೆಗೆ ಒಳಪಟ್ಟು. ಅದರಲ್ಲಿ ಸರಿಸುಮಾರು 200 ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ,  ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇಲಾಖೆಯಿಂದ ಕಾಮಗಾರಿ ಗುತ್ತಿಗೆ ಆನ್‌ಲೈನ್ ಹರಾಜು ಮೂಲಕ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿದ್ದು, ಹಣದ ದಾಹಕ್ಕೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಷಮೀಲ್ಲಾಗಿ, ಒಂದೊಂದು ಕಾಮಗಾರಿಗೆ ಒಬ್ಬೊಬ್ಬ ಗುತ್ತಿಗೆದಾರ ಇದ್ದಿದ್ದರೆ ಸರ್ಕಾರದ ಗುರಿಯಂತೆ 1-2 ವರ್ಷಕ್ಕೆ ಮುಗಿಯಬೇಕಿದ್ದ ಕಾಮಗಾರಿಗಳು ನಿಯಮ ಬಹಿರವಾಗಿ ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಬಹುಕೋಟಿ ಗುತ್ತಿಗೆ ನೀಡಿರುವುದು ಜಲಜೀವನ್ ಮಿಷನ್ ಪೂರ್ಣ ವಿಫಲಕ್ಕೆ  ಕಾರಣ ಎನ್ನಬಹುದಾಗಿದೆ.

           ಕೊರಟಗೆರೆ ತಾಲೂಕಿನಲ್ಲಿ 2021 ಅಂದರೆ ಕಳೆದ 4 ವರ್ಷಗಳ ಹಿಂದೆ ಜಲಜೀವನ್ ಮಿಷನ್ ಕಾಮಗಾರಿ ಪ್ರಾರಂಭಗೊಂಡಿದ್ದು , ಇದಕ್ಕೆ ಮುಂಚಿತವಾಗಿ ಬಹುತೇಕ ಎಲ್ಲಾ 22 ಗ್ರಾಮ ಪಂಚಾಯಿತಿಗಳಲ್ಲಿಯೂ ಪ್ರತಿ ಮನೆಮನೆಗೂ ಬಹುತೇಕ ನಲ್ಲಿ ಸಂಪರ್ಕ ಅಳವಡಿಕೆ ಇದ್ದರೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಮನೆ-ಮನೆಗೆ ನೀರು ಕೊಡುವ ಮನೆಮನೆ ಗಂಗೆ ಶಿವನಿಂದ ಗಂಗೆಯನ್ನೇ ಧರೆಗೆ ಇಳಿಸಿದ ರೀತಿಯಲ್ಲಿ ಪ್ರಾರಂಭ ಹಂತದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅದ್ದೂರಿಯಾಗಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಅಳವಡಿಸಲಾಗುತ್ತದೆ ಎಂಬ ಭ್ರಮೆಯಲ್ಲಿ ಕಾಮಗಾರಿ ಪ್ರಾರಂಭಗೊಂಡಿತು ಆದರೆ 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಯೋಜನೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹಣಗಳಿಕೆಗಾಗಿ ಹೇಳಿ ಮಾಡಿಸಿಕೊಟ್ಟ ಯೋಜನೆಯಾಗಿದ್ದು, ಇದು ಒಂದು ರೀತಿ ಪೈಪ್ ದಂಧೆಯಾಗಿ, ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಬಹುಕೋಟಿ ಗುತ್ತಿಗೆ ನೀಡಿ ಗುತ್ತಿಗೆ ದಂಧೆಯಾಗಿ ಮಾರ್ಪಟ್ಟು ಇಡೀ ಜಲಜೀವನ್ ಮಿಷನ್ ಯೋಜನೆ ದೊಡ್ಡ ವಿಫಲತೆ ಕಂಡು ಬಂದಿದೆ. 

             ಕೊರಟಗೆರೆ ತಾಲೂಕಿನ 22 ಗ್ರಾಮ ಪಂಚಾಯತಿಗಳಲ್ಲಿಯೂ ಜಲಜೀವನ್ ಮಿಷನ್ ಯೋಜನೆ, ಮಂದಗತಿಯಲ್ಲಿ ಆಮೆ ವೇಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಪಂಚಾಯಿತಿಗಳಲ್ಲಿ ಪೈಪ್ ಲೈನ್ ವರ್ಕ್ ಮಾತ್ರ ಪೂರ್ಣಗೊಂಡು, ಮನೆ ಮನೆಗೆ ಶೋ ಕೊಡುವ ರೀತಿಯಲ್ಲಿ ನಲ್ಲಿ ಅಳವಡಿಕೆಯಾಗಿದ್ದು, ನಲ್ಲಿ ಅಳವಡಿಕೆಯಲ್ಲಿಯೂ (ಎಫ್ ಎಸ್ ಸಿ ) ಲೋಪ ಭ್ರಷ್ಟಾಚಾರ, ಕೆಲವು ಮನೆಗಳ ಮುಂದೆ ದಿಂಡು ಕಳಚಿ ಬೀಳುತ್ತಿರುವುದು, ನಲ್ಲಿಯೇ ಇಲ್ಲದೆ ಅಳವಡಿಕೆ ಮಾಡಿರುವುದು, ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಭದ್ರತೆಯಲ್ಲಿದ್ದ ಎಷ್ಟೋ ಸಿಸಿ ರಸ್ತೆಗಳನ್ನ ಪೈಪ್ ಲೈನ್ ಅಳವಡಿಕೆಗೆ ರಸ್ತೆ ಕೊರೆಯಲಾಗಿ ಈವರೆಗೂ ಕೊರೆದ ಸಿಸಿ ರಸ್ತೆಯನ್ನು ಮುಚ್ಚಲಾಗದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದರೆ, ಕೊಳವೆಬಾವಿ ಕೊರೆಯುವ, ಮೋಟರ್ ಪಂಪು ಸ್ಟಾರ್ಟರ್ ಕೇಬಲ್ ಅಳವಡಿಸುವ ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರ, ಈವರೆಗೂ ಯಾವ ಪಂಚಾಯತಿಯಲ್ಲಿಯೂ ಕೊರೆದ ಬೋರ್ವೆಲ್ನಿಂದ ಕಲೆಕ್ಷನ್ ನೀಡಲಾಗದೆ ಇಲಾಖೆಯನ್ನ ಯಾಮರಿಸುತ್ತಿರುವುದು ಒಂದೆಡೆಯಾದರೆ ಓವರ್ ಟ್ಯಾಂಕ್ ಬಾಗಿದ ಪರಿಣಾಮ ಟ್ಯಾಂಕನ್ನೇ ಜೆಸಿಬಿ ಮೂಲಕ ಕಿತ್ತಾಕುವ ಮೂಲಕ ಜಲಜೀವನ್ ಮಿಷನ್ ನ ಪ್ರತಿ ಹಂತದ ಲೋಪ ಆಗಿದ್ದಷ್ಟು ಭ್ರಷ್ಟಾಚಾರ ಹೊರ ಬರುತ್ತಿದ್ದು, ಮನೆಮನೆ ಗಂಗೆ ಮನೆ ತಲುಪುವ ಮುಂಚೆಯೇ ಭ್ರಷ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಜೋಬು ಸೇರುತ್ತಿರುವುದು ಯೋಜನೆ ಸಫಲತೆಯಾಗುವ ಯಾವುದೇ ಲಕ್ಷಣಗಳು ಕಾಣದ ದಟ್ಟತೆ ಕಂಡುಬರುತ್ತದೆ.

             ಒಟ್ಟಾರೆ ಜಲಜೀವನ್ ಮಿಷನ್ ಮನೆಮನೆ ಗಂಗೆ ಮನೆಗೆ ನೀರು ಕೊಡುವಂತಹ ಯೋಜನೆ ಪ್ರಾರಂಭದಿಂದಲೂ ಅನೇಕ ಭ್ರಷ್ಟಾಚಾರದಲ್ಲಿ ಮುಳುಗಿದ್ದು, 2021 ರಿಂದ 2025 ಅಂದರೆ 4 ವರ್ಷ ಕಳೆದರೂ ಕೊರಟಗೆರೆ ತಾಲೂಕಿನ 22 ಗ್ರಾಮ ಪಂಚಾಯಿತಿಯಲ್ಲಿಯೂ ಯಾವ ಪಂಚಾಯತಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಜಲಜೀವನ್ ಮಿಷನ್ ಪೂರ್ಣಗೊಂಡಿದೆ ಎನ್ನವ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನುವ ಸೂಚನೆಗಳು ಮರೀಚಿಕೆಯಾಗುತ್ತಿದ್ದು, 22 ಗ್ರಾಮ ಪಂಚಾಯಿತಿಗಳಲ್ಲಿಯೂ ಭ್ರಷ್ಟಾಚಾರ ಕೋಪದಲ್ಲಿ ಜಲಜೀವನ್ ಮಿಷನ್ ಮುಳುಗಿ ಹೋಗಿದ್ದು, ಮುಂದಿನ ದಿನಗಳಲ್ಲಿ ಜಲಜೀವನ್ ಮಿಷನ್ ಪೂರ್ಣಗೊಳಿಸಲಾಗದೆ ಹಳೆಯ ಪದ್ಧತಿಯ ಪೈಪ್ಲೈನ್ ಬಳಸಿಕೊಳ್ಳಲಾಗಿದೆ ಹೊಸ ಜಲಜೀವನ್ ಮಿಷನ್ ನ ಮನೆ ಮನೆ ಗಂಗೆಯೂ ಬಳಸಿಕೊಳ್ಳಲಾಗದೆ ಮುಂದೊಂದು ದಿನ ಸಾರ್ವಜನಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ವಿರುದ್ಧ ತಿರುಗಿ ಬೀಳುವ ದಿನ ದೂರವಿಲ್ಲ ಎಂಬುವಂತಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇಡೀ ಯೋಜನೆ ಹಳ್ಳ ಹಿಡಿದು, ಅನುದಾನ ಬಳಕೆಯಾಗಿರುವುದರಿಂದ ಕೆಲವೊಂದು ಪಂಚಾಯಿತಿಗಳಲ್ಲಿ ಕೆಲಸವು ಆಗದೆ , ಅನುದಾನವು ದುರ್ಬಳಕೆಯಾಗಿ ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತಹ ಕಾಲ ಮುಂದೊಂದು ದಿನ ಒದಗಲಿದೆ ಎನ್ನಲಾಗುತ್ತಿದೆ.

 *ಗುತ್ತಿಗೆ ನೀಡುವಲ್ಲಿಯೇ ಮೊದಲ ಲೋಪ*

ಜಲಜೀವನ್ ಮಿಷನ್ (ಜೆಜೆಎಂ) ಮನೆಮನೆ ಗಂಗೆ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಮೊದಲ ಹಂತದಲ್ಲಿಯೇ ಯಡವಲಾಗಿದ್ದು, ಗುತ್ತಿಗೆ ನೀಡುವಾಗ ಅರ್ಹರಲ್ಲದ ಸತೀಶ್, ಉಮೇಶ್, ಕಿರಣ್ ಕುಮಾರ್ ಸೇರಿದಂತೆ ಹಲವರಿಗೆ ಗುತ್ತಿಗೆ ನೀಡಲಾಗಿದ್ದು (ಕ್ಲಾಸ್ 3) ಗುತ್ತಿಗೆದಾರರಿಗೆ ಬಹು ಕೋಟಿ ಗುತ್ತಿಗೆ ಸತೀಶ್ ಎಸ್ ಅವರಿಗೆ 15 ಕ್ಕೂ ಹೆಚ್ಚು ಕಾಮಗಾರಿ ಉಮೇಶ್ ಎಂಬುವರಿಗೆ 13ಕ್ಕೂ ಹೆಚ್ಚು ಕಾಮಗಾರಿ ನೀಡಲಾಗಿದ್ದು, ಮೊದಲ ಅಂತದಲ್ಲಿ  ಪೈಪ್ಲೈನ್ ಕಾಮಗಾರಿ ನಡೆಸಲಾಗಿ ಬಹುತೇಕ ಹಣ ಗಳಿಸಿ ಓವರ್ ಹೆಡ್ ಟ್ಯಾಂಕ್ ಮಾಡೋದೆ ಕೈ ಚೆಲ್ಲಿ ಕುಳಿತಿರುವುದು ಅನುಮಾನ ಮೂಡಿಸಿದ್ದು, ಗುತ್ತಿಗೆಯ ಬಹುತೇಕ ಹಣವನ್ನ ಪಡೆದು ಇತರೆ ಕಾಮಗಾರಿ ನಡೆಸದೆ ಕಣ್ಮರೆಯಾಗಿರುವುದು , ಕಾಮಗಾರಿ ಅರ್ಧದಲ್ಲಿ ಗುತ್ತಿಗೆದಾರರು ಕಾಲ್ ಕಿತ್ತಿರುವುದು ಜಲಜೀವನ್ ಮಿಷನ್ ಹಳ್ಳ ಹಿಡಿಯಲು ಮೊದಲ ಕಾರಣವಾಗಿದೆ.

 *ಅರ್ಧಕ್ಕೆ ಉರುಳಿ ಬಿದ್ದ ಓವರ್ ಹೆಡ್ ಟ್ಯಾಂಕ್* 

ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಗೋನಹಳ್ಳಿ ಲಂಬಾಣಿ ತಂಡದಲ್ಲಿ ನಿರ್ಮಾಣದ ಹಂತದಲ್ಲಿದ್ದ ಓವರ್ ಹೆಡ್ ಟ್ಯಾಂಕ್ ಅರ್ಧಕ್ಕೆ ಕುಸಿದಿದೆ, ಓವರ್ ಹೆಡ್ ಟ್ಯಾಂಕ್ ಕಳಪೆ ಕಾಮಗಾರಿಯಾದ ಕಾರಣ ಓವರ್ ಎಂಡ್ ಟ್ಯಾಂಕ್ ನ ನಿರ್ಮಾಣ ಹಂತದಲ್ಲಿಯೇ 4 ಪಿಲ್ಲರ್ ಗಳು ಬಾಗಿ ನೆಲಕ್ಕೆ ಉರುಳುÀವ ಸೂಚನೆ ಕಂಡುಬಂದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಂದೆ ನಿಂತು ಜೆಸಿಬಿ ಮೂಲಕ ಕಿತ್ತು ಹಾಕಿಸಿದ್ದ ಪ್ರಕರಣ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದ್ದು, ಜಿಲ್ಲಾ ಪಂಚಾಯತ್ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಸತೀಶ್ ಅವರ ನಿರ್ಲಕ್ಷ್ಯಕ್ಕೆ ಓವರ್ ಹೆಡ್ ಟ್ಯಾಂಕ್ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿದೆ, ಗುತ್ತಿಗೆದಾರ ಸತೀಶ್ ಅವರ ಬಹಳಷ್ಟು ಕಾಮಗಾರಿಗಳು ಕಳಪೆಯಾಗಿದ್ದು, ಪೈಪ್ ಲೈನ್ ಕಾಮಗಾರಿ ಮೊದಲ ಹಂತದಲ್ಲಿ ಮುಗಿಸಿದವರು ಕೆಲವೊಂದು ಲೋಪದೋಷಗಳು ಕಂಡುಬಂದರೂ ಸ್ಥಳಕ್ಕೆ ಆಗಮಿಸಿ, ಸರಿಪಡಿಸದೆ ಇರುವುದು ಜಲಜೀವನ್ ಮಿಷನ್ ನ ಕಾಮಗಾರಿ ಹಳ್ಳ ಹಿಡಿಯಲು ಈ ಗುತ್ತಿಗೆದಾರರು ಸಹ ಕಾರಣಕರ್ತರಾಗಿದ್ದಂತಾಗಿದೆ.

 *ಎಫ್ ಎಸ್ ಸಿ ಹಾಗೂ ರೆಸ್ಟೋಲೇಶನ್ ನಲ್ಲಿ ಲೋಪ* 

ಜಲಜೀವನ್ ಮಿಷನ್ 2021 ರಲ್ಲಿ ಮೊದಲ ಹಂತವಾಗಿ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಪ್ರಾರಂಭಗೊಂಡು 1 ಅಥವಾ 2 ವರ್ಷದಲ್ಲಿಯೇ ಮುಕ್ತಾಯಗೊಳಿಸುವಂಥ ನಿಬಂಧನೆ ಯೊಂದಿಗೆ ಪ್ರಾರಂಭಗೊಂಡ ಕಾಮಗಾರಿ 4 ವರ್ಷ ಕಳೆದರೂ ಮಂದಗತಿಯಲ್ಲಿ ಆಮೆ ವೇಗದಲ್ಲಿ ಸಾಗುತ್ತಿದ್ದು, 22 ಗ್ರಾಮ ಪಂಚಾಯತಿಗಳಲ್ಲಿ ಮನೆ ಮನೆಗೆ ನಲ್ಲಿ ಅಳವಡಿಸುವಂತಹ ಎಫ್ ಎಸ್ ಸಿ ಪಿಲ್ಲರ್ ಕ್ವಾಲಿಟಿ ಗುಣಮಟ್ಟದ ಪಿಲ್ಲರ್ ಗಳು ಇಲ್ಲದ ಕಾರಣ ಬಹಳಷ್ಟು ಪಿಲ್ಲರ್ ಗಳು ನಲ್ಲಿ ಸಮೇತ ಕೆಳಗೆ ಉರುಳಿ ಹಾಳಾಗಿದೆ, ಕೊರಟಗೆರೆ ತಾಲೂಕಿನ 22 ಪಂಚಾಯಿತಿಗಳಲ್ಲಿಯೂ ಪೈಪ್ ಲೈನ್ ಅಳವಡಿಸಲು ಸಿಸಿ ರಸ್ತೆಗಳನ್ನ ಕೊರಿಯಲಾಗಿದ್ದು, ಕೊರೆದು ಅಳವಡಿಸಲಾದ ಪೈಪ್ಲೈನ್ ನ ನಂತರ ಕೊರಿಯಲಾದ ಜಾಗವನ್ನು ಸಮರ್ಪಕವಾಗಿ ಸಿಮೆಂಟ್ ಅಲ್ಲಿ ಮುಚ್ಚದೆ ಹಾಗೆ ಬಿಟ್ಟಿರುವುದರಿಂದ ಸಾರ್ವಜನಿಕರು ಮನೆಯ ಮುಂಭಾಗ ಪೈಪ್ಲೈನ್ ಗಾಗಿ ಕೊರೆಯಲಾದ ಜಾಗದಲ್ಲಿ ಹಲವು ಬಾರಿ ಅಪಘಾತಗಳು ಸೇರಿದಂತೆ ಇನ್ನಿತರ ಘಟನೆಗಳು ಜರುಗಿ ಜಲಜೀವನ್ ಮಿಷನ್ ಕಾಮಗಾರಿಗಳ ವಿರುದ್ಧ ಇಡೀ ಶಾಪಾಗುತ್ತಿರುವುದು ಕಂಡು ಬರುತ್ತಿದೆ, ವೀರಯ್ಯನಪಾಳ್ಯ ಮಣ್ಣಿನ ಪ್ರಮುಖ ರಸ್ತೆಯಲ್ಲಿಯೇ ಜೆಸಿಬಿ ಮೂಲಕ ರಸ್ತೆ ಕೊರೆದು ಪೈಪ್ಲೈನ್ ಅಳವಡಿಸಿದ ಪರಿಣಾಮ ಇಡೀ ರಸ್ತೆಯನ್ನೇ ಆಳೂಗೆಡವಿದ್ದಾರೆ .

 *ಅಡ್ವಾನ್ಸ್ ಪೇಮೆಂಟ್ ಭ್ರಷ್ಟಾಚಾರದ ಕರಿನೆರಳು* 

ಕೊರಟಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಗಳಿಗೆ ಅಡ್ವಾನ್ಸ್ ಪೇಮೆಂಟ್ ಮಾಡಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದ್ದು, ಮೂರು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಯಲು, ಮೋಟರ್, ಪಂಪ್, ಕೇಬಲ, ಸ್ಟಾರ್ಟರ್ ಅಳವಡಿಸಲು ಮುಂಚಿತವಾಗಿಯೇ ಅಡ್ವಾನ್ಸ್ ಪೇಮೆಂಟ್ ಮಾಡಲಾಗಿದ್ದು ಮೂರು ವರ್ಷದ ಹಿಂದೆ ಮಾಡಲಾದ ಅಡ್ವಾನ್ಸ್ ಪೇಮೆಂಟನ್ನ ಕಳೆದ 6 ತಿಂಗಳ ಹಿಂದೆ ಸಾರ್ವಜನಿಕರ ಪ್ರಶ್ನೆಯ ನಂತರ ಎಚ್ಚೆತ್ತುಕೊಂಡ ಅಧಿಕಾರಿವರ್ಗ ನಮ್ಮ ತಲೆದಂಡವಾಗಲಿದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಮೋಟರ್ ಪಂಪ್ ಕೇಬಲ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಅಳವಡಿಸಲಾಯಿತು ಎನ್ನಲಾಗಿದೆ, ಜೆಜೆಎಂ ಕಾಮಗಾರಿಗಳ ಹಿನ್ನೆಲೆಗೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹಣದಾಹವೇ ಮೂಲ ಕಾರಣ ಎನ್ನಲಾಗುತ್ತಿದೆ.

*ಹೊರಗಿನ ಗುತ್ತಿಗೆದಾರರಿಗೆ ಮೊದಲ ಆದ್ಯತೆ*

ಕೊರಟಗೆರೆ ತಾಲೂಕಿನ ಜಲಜೀವನ್ ಮಿಷನ್ ಯೋಜನೆಯಡಿ ನಡೆಸುತ್ತಿರುವ ಕಾಮಗಾರಿಯಲ್ಲಿ ಹೊರಗಿನ ಗುತ್ತಿಗೆದಾರರೇ  ಮೇಲ್ಗೈ ಸಾಧಿಸಲಾಗಿದ್ದು, ಸ್ಥಳೀಯ ಗುತ್ತಿಗೆದಾರರು ಒಂದು ಅಥವಾ ಎರಡು ಕಾಮಗಾರಿಗಳು ನಡೆಸಲಾಗುತ್ತಿದ್ದು, ಸತೀಶ್ 15 ಕಾಮಗಾರಿಗಳು ಕಿರಣ್ ಕುಮಾರ್ 2, ಉಮೇಶ್ 13 ಕಾಮಗಾರಿಗಳು ನಡೆಸಲಾಗುತ್ತಿದೆ (ಕ್ಲಾಸ್ 3) ಗುತ್ತಿಗೆದಾರರು ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ 10 ರಿಂದ 15 ಕಾಮಗಾರಿಗಳನ್ನ ವಹಿಸಿರುವುದು , ಜಲಜೀವನ್ ಮಿಷನ್ ಕಾಮಗಾರಿಯ ಹಿನ್ನೆಡೆಗೆ ಮೂಲ ಕಾರಣವಾಗಿದ್ದು, ಇವರು ಸಂಪರ್ಕಕ್ಕೆ ಬಾರದೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಅದರಲ್ಲೂ ಅಂತ ಹಣ ಗಳಿಸುವ ಕಾಮಗಾರಿಗಳನ್ನು ನಡೆಸಿ , ಓವರ್ ಹೆಡ್ ಟ್ಯಾಂಕರ್ ಅಂತ ಕಾಮಗಾರಿಗಳು ನಡೆಸದೆ ಕಾಲ್ ಕಿತ್ತಿರುವುದು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹಣದಾಹಕ್ಕೆ ಮನೆಮನೆ ಗಂಗೆ ಮರೀಚಿಕೆಯಾಗುತ್ತಿದೆ ‌.

 *ಹುಚ್ಚರ ಮದುವೆಯಲ್ಲಿ ಊಂಡವನೇ ಜಾಣ* 

ಈ ಗಾದೆ ಅಕ್ಷರ ಸಹ ಜಲಜೀವನ್ ಮಿಷನ್ ಗೆ ಅನ್ವಯವಾಗಲಿದ್ದು, ಈ ಹಿಂದಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ , ಹಾಗೂ ಕಾರ್ಯಪಾಲಕ ಇಂಜಿನಿಯರ್  ಬಹಳ ಜಾನ್ಮೆಯಿಂದ ಮೊದಲನೇ ಹಂತದ ಕಾಮಗಾರಿಗಳಿಗೆ ಇಷ್ಟಾನುಸಾರ ದುಡ್ಡು ಬಿಡುಗಡೆಗೊಳಿಸಿ ಬಹುತೇಕ ಭ್ರಷ್ಟಾಚಾರಕ್ಕೆ ಮೂಲ ಕಾರಣ ಪುರುಷರಾಗಿರುವುದಲ್ಲದೆ ಗುತ್ತಿಗೆದಾರರಿಂದ ಒಳ್ಳೆ ಕಮಿಷನ್ ಪಡೆದು ಕಾಮಗಾರಿಗಳನ್ನ ಸಮರ್ಪಕವಾಗಿ ನಿರ್ವಹಣೆ ಮಾಡದೇ ಕಾಲ್ ಕಿತ್ತಿರುವುದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕೈಗನ್ನಡಿಯಂತಿದೆ, ನಿಯಮ ಬಹಿರವಾಗಿ (ಕ್ಲಾಸ್ 3) ಗುತ್ತಿಗೆದಾರರಿಗೆ ಕಾಮಗಾರಿ ನಿಯೋಜನೆಗೊಳಿಸಿರುವುದಲ್ಲದೆ ವ್ಯವಸ್ಥಿತವಾಗಿ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿ, ಪೈಪ್ ಲೈನ್ ದಂಧೆಯಲ್ಲಿ ಮುಳುಗಿ ಹೋಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೇವಲ ಪೈಪ್ ಲೈನ್ ವರ್ಕ್ ನೆಡೆಸಿ ಪೈಪ್ ಲೈನ್ ಕ್ವಾಲಿಟಿಯಲ್ಲಿಯೂ ಬಹಳಷ್ಟು ಜನ ಅನುಮಾನ ವ್ಯಕ್ತಪಡಿಸಲಾಗುತ್ತಿದ್ದು, ಬಹುತೇಕ ಹಳ್ಳಿಗಳಲ್ಲಿ ಕೇವಲ ಪೈಪ್ ಲೈನ್ ವರ್ಕ್ ಗಳನ್ನು ಮಾತ್ರ ಮುಗಿಸಿ ಓವರ್ ಹೆಡ್ ಟ್ಯಾಂಕ್ ಗಳಿಗೆ ಕೈ ಹಾಕದಿರುವುದು ದುರಾದೃಷ್ಟಕರ, ಯಾವುದರಲ್ಲಿ ಹೆಚ್ಚು ಹಣ ಗಳಿಸಬಹುದು ಅಷ್ಟನ್ನ ಮಾತ್ರ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕಾಯನಿರ್ವಹಿಸಿದ್ದಾರೆ, ಇಲ್ಲಿನ ಉತ್ತರ ಕರ್ನಾಟಕ ಭಾಗದ ಗುಲ್ಬರ್ಗ, ರಾಯಚೂರು ಭಾಗದ ಅತಿ ಹೆಚ್ಚು ಗುತ್ತಿಗೆದಾರರಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದ್ದು, ಹೊರಗಿನ ಗುತ್ತಿಗೆದಾರರಿಂದ ಕಾಮಗಾರಿ ನಡೆಸುತ್ತಿರುವುದರಿಂದ ಕೆಲವೊಂದು ಕಾಮಗಾರಿಗಳು ಅರ್ಧಕ್ಕೆ ನಿಲ್ಲಿಸಿ ಅಧಿಕಾರಿಗಳಿಗೂ ಸಮರ್ಪಕವಾಗಿ ಸಿಗದ ಕಾರಣ  ಕೈ ಚೆಲ್ಲಿ ಕುಳಿತಿರುವುದು ಜಲಜೀವನ್ ಮಿಷನ್ ನ ಕಾಮಗಾರಿಯ ಲೋಪದಲ್ಲಿ ಬಹುಪಾಲು ಪಡೆಯುವ ಮೂಲಕ ಯೋಜನೆ ಹಳ್ಳ ಹಿಡಿವಂತೆ ಮಾಡಲಾಗಿದೆ ಎನ್ನಲಾಗಿದೆ. 

 **ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಮೀನಾ ಮೇಷ ಏಕೆ ?*  

ಜಲಜೀವನ್ ಮಿಷನ್ ಯೋಜನೆ ಅಡಿ ಬಹುತೇಕ ಗುತ್ತಿಗೆದಾರರು ಕೇವಲ ಅತಿ ಹೆಚ್ಚು ಹಣ ಉಳಿಯುವಂತ ಪೈಪ್ ಲೈನ್ ಕಾಮಗಾರಿಗಷ್ಟೇ ಸೀಮಿತವಾಗಿ, ಓವರ್ ಹೆಡ್ ಟ್ಯಾಂಕ್ ನಿರ್ಮಿಸದೆ ಕಾಲಾಹರಣ ಮಾಡುತ್ತಿರುವುದು ಯೋಜನೆಯ ಹಿನ್ನೆಡೆಗೆ ಕಾರಣವಾಗಿದೆ, ಕೊರಟಗೆರೆ ತಾಲೂಕಿನ 22 ಗ್ರಾಮ ಪಂಚಾಯತಿಗಳ ಪೈಕಿ ಬಹುತೇಕ ಗ್ರಾಮ ಪಂಚಾಯಿತಿಗಳ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕುಗಳು ನಿರ್ಮಿಸದೆ ಪೈಪ್ ಲೈನ್ ವರ್ಕಿಂಗ್ ಅಷ್ಟೇ ಸೀಮಿತವಾಗಿ ಮನೆಮನೆ ಗಂಗೆ ಮನೆ ತಲುಪಲು ಮೀನಾ ಮೇಷ ಎಣಿಸುತ್ತಿರುವುದು ಕಂಡುಬರುತ್ತದೆ. 

 *ಪೈಪ್ ಲೈನ್ ದಂದೆಯಾದ ಜೆಜೆಎಂ*

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಎಂದೇ ಬಣ್ಣಿಸಲಾಗುವ ಜಲಜೀವನ್ ಮಿಷನ್ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಹಣದ ದಾಹಕ್ಕೆ ಹಿಚ್ಛಾನುಸಾರ ನಡೆಸಲಾಗುತ್ತಿದ್ದು, ಕಾಮಗಾರಿ ಹಂತ ಹಂತವಾಗಿ ಪೈಪ್ ಲೈನ್, ಎಫ್ ಎಸ್ ಸಿ ನಲ್ಲಿ ಅಳವಡಿಕೆ, ಕೊಳವೆಬಾವಿ, ಮೋಟರ್ , ಪಂಪ್ , ಸ್ಟಾರ್ಟರ್ , ಕೇಬಲ್ , ವಿದ್ಯುತ್ ಸಂಪರ್ಕ ಕಲ್ಪಿಸುವಂತಹ ಎಲ್ಲಾ ವ್ಯವಸ್ಥೆಗಳನ್ನು ಒಂದಾದ ನಂತರ ಒಂದರಂತೆ ಕಾರ್ಯನಿರ್ವಹಿಸ ಬೇಕು ಆದರೆ ಜೆಜೆಎಮ್ ಯೋಜನೆ ಅಡಿಯಲ್ಲಿ ಕೇವಲ ಪೈಪ್ ಲೈನ್ ಅಳವಡಿಕೆ ಹೆಚ್ಚು ಒತ್ತು ನೀಡಿ ಹೆಚ್ಚೆಚ್ಚು ಹಣ ಬಿಡುಗಡೆ ಮಾಡಿಕೊಂಡು ಓವರ್ ಹೆಡ್ ಟ್ಯಾಂಕ್ ನಿರ್ಮಿಸದೆ ಕೈ ಚೆಲ್ಲಿ ತಲೆಮರಸಿಕೊಂಡಿರುವುದು ಜೆಜೆಎಂ ಕಾಮಗಾರಿ ನೆಲ ಕಚ್ಚಲು ಕಾರಣವಾದಂತಾಗಿದೆ.

ಜಲ್ ಜೀವನ್ ಮಿಷನ್ ಯೋಜನೆ ಕಳೆದ ನಾಲ್ಕು ವರ್ಷಗಳಿಂದ ಕೊರಟಗೆರೆ ತಾಲೂಕಿನಲ್ಲಿ ಕಾಮಗಾರಿ ನಡೆಯುತ್ತಿದೆ,  ನಾನು ಅಧಿಕಾರವಹಿಸಿಕೊಂಡು ಕೇವಲ 3-4 ತಿಂಗಳಾಗಿದೆ, ನಾನು ಹೇಗೆ ಉತ್ತರ ಕೊಡುವುದು, ತುಮಕೂರಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ ಇ ಅವರನ್ನ ಈ ಹಿಂದಿನ ಹಗರಣಗಳ ಬಗ್ಗೆ ಅಲ್ಲಿ ಮಾಹಿತಿ ತೆಗೆದುಕೊಳ್ಳಿ ನಾನು ಏನು ಹೇಳಲು ಸಾಧ್ಯವಿಲ್ಲ. 

  • ಆರ್. ಎಸ್ ಕಾಂತರಾಜು… ಸಹಾಯಕ ಕಾರ್ಯ ಪಾಲಕ ಇಂಜಿನಿಯರ್. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ .ಕೊರಟಗೆರೆ

-ವಿಶೇಷ ವರದಿ .. ಶ್ರೀನಿವಾಸ್ ಟಿ. ಕೊರಟಗೆರೆ.

Leave a Reply

Your email address will not be published. Required fields are marked *