
ತುಮಕೂರು:ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಪ್ರತಿಭಟನೆಗೆ ಅನುಮತಿ ಪಡೆಯುವುದು ಕಡ್ಡಾಯ ಎನ್ನುವ ಆದೇಶದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಗೆ ಕೆಟ್ಟ ಹೆಸರು ತರುವ ಹುನ್ನಾರವಿದೆ ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟಗಾರರ ವೇದಿಕೆಯ ನಾಗರಾಜು ಸಿರಿಮನೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಎಂದು ರೈತರು,ಹೋರಾಟಗಾರರು,ಪ್ರಗತಿಪರರು ಆರೋಪಿಸುತ್ತಿದ್ದಾರೆ. ಈ ಕಾರಣಕ್ಕೆ ಗೃಹ ಸಚಿವರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ತಪಿತಸ್ಥರು ಎಂಬಂತೆ ಜನ ಭಾವಿಸುತ್ತಿದ್ದಾರೆ.ಯಾವ ಜಿಲ್ಲೆಯಲ್ಲೂ ಇಲ್ಲದ ಆದೇಶ ತುಮಕೂರು ಜಿಲ್ಲೆಯಲ್ಲಿ ಏಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಾಗಿ ಈ ಆದೇಶ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಗೆ ಮಸಿ ಬಳಿಯುವ ಕೆಲಸವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದೇ ಹೋರಾಟ, ಪ್ರತಿಭಟನೆಯಿಂದ.ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಮೂಲಭೂತ ಸೌಕರ್ಯಗಳನ್ನು ಹಾಗೂ ಹಕ್ಕುಗಳನ್ನು ಸಂವಿಧಾನದ ಅಡಿಯಲ್ಲಿ ಕಲ್ಪಿಸಿದ್ದು ಮನುಷ್ಯ ತನಗೆ ಅವಶ್ಯಕತೆ ಇರುವ ಹಕ್ಕುಗಳಿಗಾಗಿ ಹೋರಾಟ ಮಾಡಿ ಪಡೆಯಬೇಕಾಗಿರುವುದು ಸಾಮಾನ್ಯವಾಗಿದ್ದು ಅದೇ ರೀತಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಹಲವು ದಿನಗಳ ಹಿಂದೆ ನಡೆಯುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳು ಪೊಲೀಸ್ ಬಲ ಬಳಸಿ ಹತ್ತಿಕ್ಕಿರುವುದು ಸಂವಿಧಾನ ವಿರೋಧಿ ನೀತಿಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಹೋರಾಟ ಪ್ರತಿಭಟನೆ ನಡೆಸಲು ವಿಧಿಸಿರುವ ನಿರ್ಬಂಧಕ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಸಿರಿಮನೆ ನಾಗರಾಜ್ ಆಗ್ರಹ ಮಾಡಿದರು.

ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಸಂಘದ ವತಿಯಿಂದ ಭೂಮಿ ಮತ್ತು ವಸತಿ ರಹಿತರ ಮೂಲಭೂತ ಸೌಕರ್ಯಗಳಿಗಾಗಿ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯು ಹಲವು ಹೋರಾಟಗಳನ್ನು ಮಾಡುತ್ತಾ ಅನೇಕ ಬಾರಿ ಪತ್ರ ರವಾನೆ ಮಾಡಿ ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟವರು ಪ್ರತಿಭಟನಾಕಾರರ ಮನವಿಯನ್ನ ಆಲಿಸಲಿಲ್ಲ. ಅದೇ ರೀತಿಯಾಗಿ ಮತ್ತೆ ಪ್ರತಿಭಟನೆಯ ಹಾದಿ ತುಳಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟವನ್ನು ಹತ್ತಿಕ್ಕಲು ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರವನ್ನು ಬಳಸಿ ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸಿ, ರಾತ್ರೋರಾತ್ರಿ ಬಂಧಿಸಿ, ಬೇರೆಡೆಗೆ ಸ್ಥಳಾಂತರಿಸಿ, ಬಿಡುಗಡೆಗೊಳಿಸಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ, ಇದು ಒಳ್ಳೆಯ ನಡೆಯಲ್ಲ ಈ ರೀತಿ ನಡೆಸಿ ಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಜನರು ತಮ್ಮ ಅಗತ್ಯ ಸೌಕರ್ಯಗಳನ್ನು ಪಡೆಯುವ ಸಲುವಾಗಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಟನೆಯ ಹಾದಿಯನ್ನ ತುಳಿಯಬೇಕಾಗುತ್ತದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಅನುಮತಿಯನ್ನು ಪಡೆಯಬೇಕು ಎಂದು ಹೊರಡಿಸಿರುವ ಆದೇಶವು ಸಂವಿಧಾನ ವಿರೋಧಿಯಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನ ಪ್ರತಿಯೊಬ್ಬ ನಾಗರಿಕನಿಗೂ ನೀಡಿದ್ದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾವುದೇ ಜಿಲ್ಲಾಧಿಕಾರಿ ಹೊರಡಿಸದ ಆದೇಶ ತುಮಕೂರು ಜಿಲ್ಲೆಯಲ್ಲಿ ಹೊರ ಬಂದಿದ್ದು ಇದು ಸಾವಿಂಧಾನಿಕ ವ್ಯವಸ್ಥೆಗೆ ವಿರೋಧವಾಗಿದೆ ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ತುಮಕೂರು ಜಿಲ್ಲೆಯಲ್ಲಿ ಬಡವರ ಗೋಳು ಅವರಿಗಾಗುತ್ತಿರುವ ಅನ್ಯಾಯವನು ಕೇಳಲು ಯಾರೂ ಇಲ್ಲ . ತಮಗೆ ಆಗುವ ಅನ್ಯಾಯವನ್ನು ಕೇಳಲು ಪ್ರತಿಭಟನೆಯ ಹಾದಿಯನ್ನು ಹಿಡಿಯುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಆ ಪ್ರತಿಭಟನೆಯ ಹಾದಿಗೂ ಮುಳ್ಳು ಎಳೆದಿದ್ದು ಒಬ್ಬ ತಾಯಿಯು ತನ್ನ ಮಗುವಿಗೆ ಮಾಡುವ ದ್ರೋಹದಂತಿದೆ.ತುಮಕೂರು ಜಿಲ್ಲೆ ಚಳುವಳಿಗಳಿಂದ ಮುಂಚೂಣಿಗೆ ಬಂದ ಜಿಲ್ಲೆ. ರೈತರು,ದಲಿತರು ಹೋರಾಟದಿಂದಲೇ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದಾರೆ.ಹೋರಾಟಗಾರರನ್ನು ಹೆಂಗಸರು ಮಕ್ಕಳು ಎನ್ನದೇ ರಾತ್ರೋರಾತ್ರಿ ಎಳೆದೊಯ್ದಿರುವುದು ಖಂಡನೀಯವಾಗಿದ್ದು ಪ್ರಜಾಪ್ರಭುತ್ವದ ಆಡಳಿತದಲ್ಲಿ ನಾವೆಲ್ಲಿದ್ದೇವೆ ಎಂಬುದನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದರು.
ಹೋರಾಟ ಸಮಿತಿಯ ಇನ್ನೊರ್ವ ಮುಖಂಡ ತಿಪಟೂರು ಕೃಷ್ಣ ಮಾತನಾಡುತ್ತಾ,ಜನರು ತಮಗೆ ಅನ್ಯಾಯವಾದಾಗ ಅಥವಾ ನ್ಯಾಯಯುತ ಬೇಡಿಕೆ ಈಡೇರಿಸಲು ಮನವಿ, ಜೊತೆಗೆ ಪ್ರತಿಭಟನೆ ಹಾದಿಯನ್ನ ತುಳಿಯುತ್ತಾರೆ . ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿರುವುದು ಕೂಡ ಸತ್ಯಾಗ್ರಹ ಮತ್ತು ಚಳುವಳಿ ಮೂಲಕವೇ ಆಗಿದೆ. ಪ್ರತಿಭಟನೆ, ಹೋರಾಟ ಸಂಘರ್ಷಗಳಿಂದಲೇ ಜನರು ಸವಲತ್ತು ಪಡೆಯುವ ಅನಿವಾರ್ಯವಿದೆ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಜನ ಬೀದಿಗಳಿಯುತ್ತಾರೆಂದರೆ ಅದು ಸರ್ಕಾರದ ಲೋಪವೇ ಹೊರತು, ಪ್ರತಿಭಟನಾಗಾರರ ತಪ್ಪಲ್ಲ. ಆದರೆ, ಜಿಲ್ಲಾಧಿಕಾರಿ ಕಛೇರಿ ಮುಂದೆ ಒಂದು ಮೂಲೆಯಲ್ಲಿ ಬಡ ಜನರು ತಮ್ಮ ಬೇಡಿಕೆ ಈಡೇರಿಸಲು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು ಯಾವುದೇ ರೀತಿಯ ಕಾನೂನಿಗೆ ಭಂಗ ತರುವಂತಹ ಪ್ರತಿಭಟನೆಯನ್ನು ನಡೆಸುತ್ತಿರಲಿಲ್ಲ. ಆದರೆ ಜಿಲ್ಲಾಡಳಿತ ಯಾವುದೋ ಒತ್ತಡಕ್ಕೆ ಮಣಿದು, ಪ್ರತಿಭಟನೆ ನಡೆಸಲು ನಿರ್ಬಂಧನವನ್ನು ಹೇರಿರುವುದು,ಸ್ವಾತಂತ್ರ್ಯ ಹರಣವಾಗಿದೆ. ಜಿಲ್ಲಾಧಿಕಾರಿಗಳು ಪ್ರತಿಭಟನೆಯನ್ನು ಯಾವ ರೀತಿ ನಡೆಸಬೇಕು ಎಂಬ ಅಂಶಗಳನ್ನು ಅವರೇ ತಿಳಿಸಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ಆರ್ ಶ್ರೀರಂಗಾಚಾರ್ ಮಾತನಾಡಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ನಮಗೆ ಸಂವಿಧಾನ ನಮಗೇ ವಿಶೇಷ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ನೀಡಿದೆ. ನಾವಿಲ್ಲಿ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ತಲೆ ಮೇಲೆ ಸೂರು, ಹಸಿದಾಗ ಅನ್ನಕ್ಕಾಗಿ ವಸತಿ ಮತ್ತು ಭೂಮಿ ಕೇಳುತ್ತಿದ್ದೇವೆ. ಅದು ತಪ್ಪಾ. ಬಂಡವಾಳಶಾಹಿ ವ್ಯವಸ್ಥೆಗೆ ಉದ್ಯಮಕ್ಕಾಗಿ ಸಾವಿರಾರು ಎಕರೆ ಭೂಮಿ ಕೊಡಲು ಮುಙದಾಗುವ ಸರ್ಕಾರಕ್ಕೆ ಜಡವರಿಗೆ ಭೂಮಿ ಕೊಡಲು ಮನಸ್ಸಿಲ್ಲವೇ ? ಭೂಮಿಯಲ್ಲಿ ಅನ್ನ ಬೆಳೆಯದಿದ್ದರೆ ಭವಿಷ್ಯದಲ್ಲಿ ಮಣ್ಣು ತಿನ್ನುವಿರಾ ಎoದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ವೇದಿಕೆಯ ರಾಜ್ಯ ಸಮಿತಿಯ ರಮೇಶ್ ಸಂಕ್ರಾತಿ, ಜಿಲ್ಲಾ ಸಮಿತಿ ಸದಸ್ಯ ತಿಪಟೂರು ನಿಂಗಪ್ಪ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
-ವರದಿ-ಕೆ.ಬಿ ಚಂದ್ರಶೇಖರ್