ಕೆ.ಆರ್.ಪೇಟೆ-ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣವು ಬದುಕಿನ ತಿರುವು ನೀಡುವ ಘಟ್ಟ-ಶಾಸಕ ಹೆಚ್.ಟಿ.ಮಂಜು

ಕೆ.ಆರ್.ಪೇಟೆ: ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣವು ಬದುಕಿನ ತಿರುವು ನೀಡುವ ಘಟ್ಟವಾಗಿದೆ. ಹಾಗಾಗಿ ಪದವಿ ಹಂತದಲ್ಲಿ ಕಠಿಣ ಪರಿಶ್ರಮದಿಂದ ವಿಧ್ಯಾಭ್ಯಾಸ ಮಾಡಿದರೆ ಅಯಕಟ್ಟಿನ ಹುದ್ದೆಗಳನ್ನು ಗಿಟ್ಟಿಸಬಹುದು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಸಾಂಸ್ಕೃತಿಕ, ಕ್ರೀಡಾ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್ ಹಾಗೂ ರೆಡ್ ಕ್ರಾಸ್ ಸಮಿತಿಗಳ ವಾರ್ಷಿಕ ಸಮಾರೋಪ ಸಮಾರಂಭವನ್ನು ಹಾಸ್ಯನಟ ಮನೋಹರ್ ಅವರೊಂದಿಗೆ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನವಾಗಿವೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವವು ಸಮಗ್ರವಾಗಿ ವಿಕಾಸವಾಗುವುದರಿಂದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿವೆಯೆಂದು ಶಾಸಕ ಮಂಜು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಕೆ.ಪಿ.ಪ್ರತಿಮಾ ಅವರು ಕಾಲೇಜಿನ ಶೈಕ್ಷಣಿಕ ಮತ್ತು ಸಹಪಾಠಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆಯನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಮಿಡಿ ಕಿಲಾಡಿಯ ಹಾಸ್ಯ ನಟ. ಮನೋಹರ್ ಮಡುವಿನಕೋಡಿ ಅವರು ವಿದ್ಯಾರ್ಥಿಗಳಿಗೆ ಮನೋರಂಜನೆಯ ಜೊತೆಗೆ ಸೊಗಸಾದ ಸಂದೇಶ ನೀಡಿ ತಮ್ಮ ವಿಶೇಷ ಭಾಷಣದಿಂದ ಕಾರ್ಯಕ್ರಮವನ್ನು ಹರ್ಷಭರಿತವಾಗಿಸಿದರು.
ಕಾರ್ಯಕ್ರಮದ ಆರಂಭದಲ್ಲಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ.ವಿನಯ್ ಕುಮಾರ್ ಅವರು ಪ್ರಾಸ್ತಾವಿಕ ನುಡಿಯಿಂದ ಕಾರ್ಯಕ್ರಮದ ಗಂಭೀರತೆಗೆ ಬೆಳಕು ಚೆಲ್ಲಿದರು. ಪ್ರೊ.ಮಧು ಜಿ.(IQAC ಸಂಚಾಲಕರು) ಸ್ವಾಗತ ಭಾಷಣ ಮಾಡಿದರು.

ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳ ಕಲಾ ಕೌಶಲ್ಯಗಳನ್ನು ತೋರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೆರವೇರಿತು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಕೃಷ್ಣಮೂರ್ತಿ ಎನ್.ಟಿ.ದಿನೇಶ್, ಎಂ.ವಿ. ಮಹದೇವ್, ಆದರ್ಶ.ಕೆ.ಎನ್, ಚೇತನ್ ಕುಮಾರ್, ಕಿರಣ್ ಎಸ್, ನಪೀಸ ನಾಯಕ್, ವಿನೋದ್, ಪುಟ್ಟಮಾದಪ್ಪ, ಶ್ಯಾಮ್, ಚಂದ್ರು, ನಾಗೇಶ್ ಉಪಸ್ಥಿತರಿದ್ದರು.

ವಿಧ್ಯಾರ್ಥಿನಿಯರಾದ ನಿತ್ಯ ಹಾಗೂ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಸಂಚಾಲಕರಾದ ಚೂಡಲಿಂಗಯ್ಯ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಂತಹದ್ದಾಗಿ ಪರಿಣಮಿಸಿತು.

  • ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *