ಕೆ.ಆರ್.ಪೇಟೆ,ಮೇ.17: ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ವಿಶ್ವದಲ್ಲಿಯೇ ಯಾವುದೂ ಇಲ್ಲವಾದ್ದರಿಂದ ಶ್ರೀ ಸಾಮಾನ್ಯರು ತಮ್ಮ ಅಮೂಲ್ಯವಾದ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಮೈಸೂರಿನ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಮೈಸೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿ ನೂತನವಾಗಿ ಆರಂಭವಾದ ನ್ಯೂ ಹೈಟೆಕ್ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಾಲೂಕು ಕೇಂದ್ರದಲ್ಲಿ ಮೈಸೂರು ಬೆಂಗಳೂರು ಮಹಾನಗರಗಳಲ್ಲಿ ಇರುವಂತಹ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡಲು ಆರಂಭವಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಜನ ಸಾಮಾನ್ಯರ ಹಿತಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಹೈಟೆಕ್ ಆಸ್ಪತ್ರೆ ಆರಂಭಿಸುವ ಸಾಹಸ ಕಾರ್ಯಕ್ಕೆ ಮುಂದಾಗಿರುವ ಅನಿಲ್ ಹಾಗೂ ಬೋರೇಗೌಡ ಆವರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೂಜ್ಯ ಶ್ರೀಗಳಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ಪಟ್ಟಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಆರಂಭವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ತಾಲೂಕಿನ 326 ಹಳ್ಳಿಗಳ ಜನರು ಮೈಸೂರು ಬೆಂಗಳೂರು ನಗರಗಳ ವ್ಯಾಮೋಹಕ್ಕೆ ಒಳಗಾಗದೆ ನಿಮ್ಮ ಮನೆ ಬಾಗಿಲಿನಲ್ಲಿಯೇ ದೊರೆಯುತ್ತಿರುವ ಉತ್ತಮವಾದ ವೈದ್ಯಕೀಯ ಆರೋಗ್ಯಸೇವೆಯನ್ನು ಸದ್ಭಳಕೆ ಮಾಡಿಕೊಂಡು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.

ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಡಿ.ಲಕ್ಷಿö್ಮÃನಾರಾಯಣ ಮಾತನಾಡಿ ಇಂದಿನ ದಿನಮಾನದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಿರಿಯ ನಾಗರಿಕರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ, ಸಕ್ಕರೆ ಖಾಯಿಲೆ, ಕ್ಯಾನ್ಸರ್, ಜ್ವರ, ಶೀತದಂತಹ ಖಾಯಿಲೆಗಳು ಸರ್ವೇ ಸಾಮಾನ್ಯವಾಗಿವೆ. ಆದ್ದರಿಂದ ಕುಡಿಯಲು ಶುದ್ಧವಾದ ನೀರನ್ನು ಬಳಸಿ, ಶುಚಿ ರುಚಿಯಾದ ಆಹಾರ ಪದಾರ್ಥಗಳನ್ನು ಸೇವಿಸಿ ಅಮೂಲ್ಯವಾದ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಲಕ್ಷಿö್ಮÃನಾರಾಯಣ ಕಿವಿಮಾತು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮಂಡ್ಯ ನಗರದಲ್ಲಿ ಯಶಶ್ವಿ ಹೋಟೆಲ್ ಉದ್ಯಮಿಗಳಾಗಿರುವ ಅನಿಲ್ ಬೋರೇಗೌಡ ಅವರು ವಿವಿಧ ಸಾರ್ವಜನಿಕ ಸೇವೆಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆ ನೀಡಲು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸುವ ಸಾಹಸ ಮಾಡಿದ್ದಾರೆ. ಅನಿಲ್ ಮತ್ತು ಬೋರೇಗೌಡ ಆವರಿಗೆ ಶುಭ ಕೋರುತ್ತೇನೆ ಎಂದು ಹೇಳಿದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲೂಕಿನ ಜನತೆಗೆ ಉತ್ತಮವಾದ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಸಾಹಸ ಕಾರ್ಯಕ್ಕೆ ಮುಂದಾಗಿರುವ ಅನಿಲ್, ಬೋರೇಗೌಡ ಸ್ನೇಹಿತರ ಸಾಹಸ ಕಾರ್ಯವನ್ನು ಶ್ಲಾಘಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸಮಾಜ ಸೇವಕ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷೆ ಪಂಕಜಾಪ್ರಕಾಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸುಜೇಂದ್ರ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸುಬ್ರಮಣ್ಯ, ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್ ಸೇರಿದಂತೆ ನೂರಾರು ಗಣ್ಯರು ಆಸ್ಪತ್ರೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.