ಹಾಸನ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ “ದಿಟ್ಟ ನಾಯಕತ್ವ, ಬಲಿಷ್ಠ ಕಾರ್ಯಕರ್ತ” ಎಂಬ ಘೋಷಣೆಯೊಂದಿಗೆ ಆಯೋಜಿಸಿದ ಕಾರ್ಯಕರ್ತರ ಸಮಾವೇಶ ಸಕಲೇಶಪುರದ ಅಜಾದ್ ರಸ್ತೆಯ ಪಕ್ಷ ಕಚೇರಿಯಲ್ಲಿ ನಡೆಯಿತು.
ಸಭೆಗೆ ಎಸ್ಡಿಪಿಐ ಸಕಲೇಶಪುರ ಕ್ಷೇತ್ರ ಅಧ್ಯಕ್ಷರಾದ ವಾಜಿದ್ ಪಾಷರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಹಾಜರಾದ ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ.ಆರ್.ನಗರ್ ಮಾತನಾಡಿ, “ಉಗ್ರರ ಹತ್ಯೆ, ದೇಶ ರಕ್ಷಣೆಯ ಹೊಣೆಗಾರಿಕೆ ಮತ್ತು ರಕ್ಷಣಾ ಪಡೆಗಳಿಗೆ ಧೈರ್ಯ ತುಂಬುವ ಕಾರ್ಯ ನಮ್ಮೆಲ್ಲರ ಕರ್ತವ್ಯ. ಸರ್ಕಾರ ಯಾವದಾದರೂ, ರಾಷ್ಟ್ರಭಕ್ತಿಯಲ್ಲಿ ಎಲ್ಲರ ಬೆಂಬಲ ಅಗತ್ಯ,” ಎಂದು ಹೇಳಿದರು.

ಇನ್ನು ಮತ್ತೊಂದು ಅತಿಥಿಯಾಗಿ ಹಾಜರಾದ ಎಸ್ಡಿಪಿಐ ಬೇಲೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅರ್ಶದ್ ಅರೇಹಳ್ಳಿ, “ರಾಜ್ಯದಲ್ಲಿ ಇತ್ತೀಚಿನ ಪಕ್ಷ ಕಾರ್ಯಚಟುವಟಿಕೆಗಳು ಸದೃಢವಾಗಿವೆ. ಯುವ ಶಕ್ತಿ ಸಕ್ರಿಯವಾಗಿ ಆಡಳಿತವಿರೋಧಿ ಮತ್ತು ಸಮಾಜೋದ್ದೀಪನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದೆ,” ಎಂದರು.

ಸಭೆಯ ಆರಂಭದಲ್ಲಿ 16–05–2025ರಂದು ಕುಶಾಲನಗರದ 7ನೇ ವಾರ್ಡ್ ನಿವಾಸಿ ಸೆಯ್ಯದ್ ಆಸಿಫ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಲಾಯಿತು. ನಂತರ ಉಪಾಧ್ಯಕ್ಷ ಸೆಯ್ಯದ್ ಮೈದಿನ್ ಸ್ವಾಗತ ಹಾಗೂ ಕಾರ್ಯದರ್ಶಿ ಹೈದರ್ ಆನೆಮಹಲ್ ವಂದನಾರ್ಪಣೆ ನಡೆಸಿದರು. ಮುನೀರ್ ಕಾಡ್ಲೂರ್ ಸಭೆಯನ್ನು ನಿರೂಪಿಸಿದರು.

ಸಭೆಯಲ್ಲಿ ಎಸ್ಡಿಪಿಐ ಸಕಲೇಶಪುರ ಕ್ಷೇತ್ರದ ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರು ವ್ಯಾಪಕವಾಗಿ ಭಾಗವಹಿಸಿದ್ದರು. ಸಮಾವೇಶವು ಕ್ಷೇತ್ರದ ಸಂಘಟನೆ ಬಲಪಡಿಸುವಲ್ಲಿ ಮತ್ತು ಮುಂದಿನ ವಿಧಾನಸಭಾ ಆಯ್ಕೆ ಸಮಸ್ಯೆಗಳಿಗೆ ಸಿದ್ಧತೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವಪೂರ್ಣಸ್ಫೂರ್ತಿಯಾಯಿತು.
-ನೂರು ಅಹಮದ್