ತುಮಕೂರು- ರಾಷ್ಟ್ರರಕ್ಷಣೆಗಾಗಿ ಹಾಗೂ ದೇಶದ ಜನ ತಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ದೇಶದ ರಕ್ಷಣೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ರಾಷ್ಟ್ರೀಯ ರಕ್ಷಣೆಗಾಗಿ ನಾಗರಿಕರು, ತುಮಕೂರು ವತಿಯಿಂದ ತಿರಂಗ ಯಾತ್ರೆಯನ್ನು ನಗರದಲ್ಲಿಂದು ನಡೆಸಲಾಯಿತು.
ನಗರದ ಎಸ್‌ಐಟಿ ಕಾಲೇಜು ಮುಂಭಾಗದಿಂದ ಹೊರಟ ತಿರಂಗ ಯಾತ್ರೆಗೆ ವಿವಿಧ ಮಠಾಧೀಶರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ, ಇದೊಂದು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಕೈಗನಡಿಯಲ್ಲಿ ದೇಶದ ಇತಿಹಾಸದ ಅನೇಕ ಘಟನಾವಳಿಗಳನ್ನು ಭಾರತೀಯರು ಓದಿ ಅರ್ಥ ಮಾಡಿಕೊಂಡಿದ್ದೇವೆ ಎಂದರು.
ಪಹಲ್ಗಾಮ್‌ನಲ್ಲಿ ಅಮಾಯಕ 26 ಜನರನ್ನು ಹತ್ಯೆ ಮಾಡಿದ ಉಗ್ರರಿಗೆ ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿ ದೇಶದ ಯೋಧರು ಇಡೀ ವಿಶ್ವಕ್ಕೆ ಭಾರತದ ಸಾರ್ವಭೌಮತ್ವವನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಯಥಾ ರಾಜ ತಥಾ ಪ್ರಜೆ ಎಂಬಂತೆ ರಾಜ ಸರಿಯಾಗಿದ್ದರೆ ಎಲ್ಲವೂ ಸರಿ ಹೋಗುತ್ತದೆ. ನಾವು ಯಾವ ದೇಶದ ಮೇಲೂ ಯುದ್ಧ ಸಾರಿಲ್ಲ. ಪಾಕಿಸ್ತಾನದವರು ಉಗ್ರಗಾಮಿ ಸಂಘಟನೆಗಳನ್ನು ಜೀವಂತವಾಗಿ ಉಳಿಸಿ ಪೋಷಿಸಿ 26 ಜನ ಅಮಾಯಕ ಭಾರತೀಯರನ್ನು ಕೊಂದಿದ್ದಾರೆ. ಅವರು ಮಾಡಿರುವ ಪಾಪದ ಕೆಲಸಕ್ಕೆ ದೇಶದ ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು.
ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ಅಘೋಷಿತ ಯುದ್ಧವನ್ನು ಗೆದ್ದಿದೆ. ಇದು ನಮ್ಮ ದೇಶದ ಯುದ್ಧವಲ್ಲ, ಭಯೋತ್ಪಾದರ ಕುಕೃತ್ಯಕ್ಕೆ ಪ್ರತೀಕಾರ ಅಷ್ಟೇ. 9 ಉಗ್ರನೆಲೆಗಳನ್ನು ನಮ್ಮ ಯೋಧರು ಧ್ವಂಸ ಮಾಡಿದ್ದಾರೆ. ನಮ್ಮ ಸೈನಿಕರ ಧೈರ್ಯ, ಶೌರ್ಯವನ್ನು ಎಲ್ಲರೂ ಮೆಚ್ಚಲೇಬೇಕು ಎಂದರು.

ನಮ್ಮ ಯುದ್ಧ ಭಯೋತ್ಪಾದಕರ ವಿರುದ್ಧ, ಆತಂಕವಾದಿಗಳ ವಿರುದ್ದ. ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ ಎಂಬುದನ್ನು ನಮ್ಮ ದೇಶ ಸಾಬೀತುಪಡಿಸಿದೆ ಎಂದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಭಾರತ ದೇಶದ ಭದ್ರತೆಗಾಗಿ ಪಾಕಿಸ್ತಾನವನ್ನು ಬಗ್ಗು ಬಡಿದ ದೇಶದ ಯೋಧರನ್ನು ಪ್ರೋತ್ಸಾಹಿಸುವುದಕ್ಕಾಗಿ ತಿರಂಗ ಯಾತ್ರೆಯನ್ನು ರಾಷ್ಟ್ರರಕ್ಷಣೆಗಾಗಿ ನಾಗರಿಕರು ತುಮಕೂರು ವತಿಯಿಂದ ನಡೆಸಲಾಗುತ್ತಿದೆ ಎಂದರು.

ಈ ತಿರಂಗ ಯಾತ್ರೆಯಲ್ಲಿ ಬಿ.ವೈ.ವಿಜಯೇಂದ್ರ, ಸೊಗಡುಶಿವಣ್ಣ, ರವಿಶಂಕರ್ ಹೆಬ್ಬಾಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಡಾ. ಎಸ್.ಪರಮೇಶ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಪ್ರದೀಪ್‌ಕುಮಾರ್, ಚಂದ್ರಮೌಳಿ, ಸೇರಿದಂತೆ ಪಕ್ಷಾತೀತವಾಗಿ ನಗರದ ನಾಗರಿಕರು ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ