ಕೆ.ಆರ್.ಪೇಟೆ-ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮಳೆನೀರು ತುಂಬಿಕೊಳ್ಳದಂತೆ ಸೂಕ್ತ ಕ್ರಮ ವಹಿಸಿ-ರಾಜ್ಯದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಧಿಕಾರಿಗಳಿಗೆ ಸೂಚನೆ

ಕೆ.ಆರ್.ಪೇಟೆ,ಮೇ.19: ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಮಳೆನೀರು ತುಂಬಿಕೊಳ್ಳದಂತೆ ಸೂಕ್ತ ಕ್ರಮ ವಹಿಸಬೇಕು. ಇದೂವರೆವಿಗೂ ಮಳೆಯಿಂದ ಹಾನಿಗೀಡಾಗಿರುವ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ನೀಡುವ ಜವಾಬ್ದಾರಿಯನ್ನು ಸಾರಿಗೆ ಇಲಾಖೆ ಮತ್ತು ಪುರಸಭೆಯ ಅಧಿಕಾರಿಗನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಎಚ್ಚರಿಕೆ ನೀಡಿದರು.

ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ಮಿಂಚಿನ ಸಂಚಲನ ನಡೆಸಿ ಅವ್ಯವಸ್ಥೆಗಳ ಅವಲೋಕನ ನಡೆಸಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಕಂಡು ತೀವ್ರ ಅಸಮಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ತಾಲ್ಲೂಕು ಕೇಂದ್ರ ಕೆ.ಆರ್.ಪೇಟೆ ಪಟ್ಟಣದಲ್ಲಿ ಶುಚಿತ್ವ ಕಾಪಾಡದ ಪುರಸಭೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕೂಡಲೇ ಪಟ್ಟಣದ ಸ್ವಚ್ಚತೆ ಪ್ರಥಮ ಆಧ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.‌

ಕೆ.ಆರ್.ಪೇಟೆಯಿಂದ ಮೈಸೂರು ನಗರಕ್ಕೆ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಪ್ರಯಾಣಿಕರು ಸಂಚರಿಸಲು ಇರುವ ಬಸ್ಸುಗಳ ಬಗ್ಗೆ ಹಲವಾರು ಸಾರ್ವಜನಿಕರು ಲೋಕಾಯುಕ್ತರ ಗಮನ ಸೆಳೆದು ಬಸ್ ವ್ಯವಸ್ಥೆ ಮಾಡಿಸಿಕೊಡುವಂತೆ ಅವಲತ್ತುಕೊಂಡರು. ಬಸ್ ನಿಲ್ದಾಣದಲ್ಲಿ ಅಶುಚಿತ್ವ ತುಂಬಿ ತುಳುಕುತ್ತಿರುವ ಬಗ್ಗೆ ವಿಭಾಗೀಯ ಸಾರಿಗೆ ಅಧಿಕಾರಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಮೀನಿನ ಮಾರುಕಟ್ಟೆಯ ತ್ಯಾಜ್ಯ ನೀರು ಸೇರಿದಂತೆ ಪಟ್ಟಣದ ಒಳಚರಂಡಿಯ ತ್ಯಾಜ್ಯ ನೀರು ಚನ್ನಪ್ಪನ ಕಟ್ಟೆಯ ನೀರಿನ ಮೂಲಕ ಹೊಸಹೊಳಲು ಕೆರೆ ಹಾಗೂ ಪಟ್ಟಣದ ದೇವಿರಮ್ಮಣ್ಣಿ ಕೆರೆಗೆ ಸೇರುತ್ತಿರುವ ಬಗ್ಗೆ ಪಟ್ಟಣದ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಲೀನ ನೀರು ಕೆರೆಗೆ ಹೋಗದಂತೆ ನೋಡಕೊಳ್ಳಬೇಕು ಎಂದು ಆದೇಶ ನೀಡಿದರು.

ಬಸ್ ನಿಲ್ದಾಣದ ಸ್ವಚ್ಚತೆ ಕಾಪಾಡದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳು ಸೇರಿದಂತೆ ಮೀನಿನ ಮಾರುಕಟ್ಟೆಗೆ ಭೇಟಿ ನೀಡಿ ಅಶುಚಿತ್ವ ತಾಂಡವ ಮಾಡುತ್ತಿರುವುದನ್ನು ಕಣ್ಣಾರೆ ಕಂಡು ಪುರಸಭೆಯ ಅಧಕಾರಿಗಳು ಏನು ಮಾಡುತ್ತಿದ್ದೀರಿ, ತಮ್ಮ ಕರ್ತವ್ಯ ಲೋಪ ಇಲ್ಲಿ ಎದ್ದು ಕಾಣುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ತಮ್ಮ ಕೆ.ಆರ್.ಪೇಟೆ ಪಟ್ಟಣದ ಭೇಟಿಯ ಸಮಯದಲ್ಲಿ ಸಾರ್ವಜನಿಕರು ನೀಡಿದ ದೂರುಗಳು ಹಾಗೂ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ವಿವರವಾದ ವರದಿಯನ್ನು ಕಳಿಸಿಕೊಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಡಾ.ಅಶೋಕ್ ಆವರಿಗೆ ನಿರ್ದೇಶನ ನೀಡಿದರು.

ಲೋಕಾಯುಕ್ತರ ನಗರ ಸಂಚಾರದ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ, ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ತಹಶೀಲ್ದಾರ್ ಡಾ. ಅಶೋಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಪುರಸಭೆಯ ಮುಖ್ಯಾಧಿಕಾರಿ ನಟರಾಜ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ತಾ.ಪಂ.ಸಹಾಯಕ ನಿರ್ದೇಶಕ ಡಾ.ನರಸಿಂಹ ರಾಜು, ಪೊಲೀಸ್ ಇನ್ಸ್ ಪೆಕ್ಟರ್ ಆನಂದೇಗೌಡ, ನವೀನ್, ಕಸಬಾ ರಾಜಸ್ವ ನೀರಿಕ್ಷಕ ಜ್ಞಾನೇಶ್, ಗ್ರಾಮ ಆಡಳಿತಾಧಿಕಾರಿ ಜಗದೀಶ್, ಪಟ್ಟಣದ ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *