ಕೆ.ಆರ್.ಪೇಟೆ-ಟಿವಿಎಸ್ ಮೊಪೆಡ್ ವಾಹನ‌-ಖಾಸಗಿ ಬಸ್ಸ್‌ ಡಿಕ್ಕಿ-ವ್ಯಕ್ತಿ ಸ್ಥಳದಲ್ಲೇ ಸಾವು

ಕೆ.ಆರ್.ಪೇಟೆ,ಮೇ.25: ಟಿವಿಎಸ್ ಮೊಪೆಡ್ ವಾಹನಕ್ಕೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದ ಬಳಿ ಮೈಸೂರು-ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 10.30ಗಂಟೆ ಸಮಯದಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಭೈರಾಪುರ ಗ್ರಾಮದ ನಿವಾಸಿ ದುಬೈ ವೆಂಕಟೇಗೌಡ(75) ಮೃತ ದುರ್ದೈವಿ ವ್ಯಕ್ತಿಯಾಗಿದ್ದಾರೆ.

ಘಟನೆ ವಿವರ: ಭೈರಾಪುರದ ವೆಂಕಟೇಗೌಡ ಕೆಲಸದ ನಿಮಿತ್ತ ಕೆ.ಆರ್.ಪೇಟೆ ಪಟ್ಟಣಕ್ಕೆ ತಮ್ಮ ಟಿವಿಎಸ್ ಮೊಪೆಡ್ ವಾಹನದ ಮೂಲಕ ಆಗಮಿಸುತ್ತಿದ್ದರು. ಈ ವೇಳೆ ಅತಿವೇಗವಾಗಿ ಮೈಸೂರಿನಿಂದ ಕೆ.ಆರ್.ಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್(ಕೆ.ಎ-20.ಡಿ.4301) ವೆಂಕಟೇಗೌಡನ ಮೊಪೆಡ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಬಸ್ಸಿನ ಅತಿವೇಗದ ರಬಸಕ್ಕೆ ಬೈಕಿನಿಂದ ಕೆಳಕ್ಕೆ ಬಿದ್ದ ಮೊಪೆಡ್ ಸವಾರ ವೆಂಕಟೇಗೌಡನ ಮೈಮೇಲೆ ಬಸ್ಸಿನ ಚಕ್ರಗಳು ಹರಿದ ಪರಿಣಾಮ ವೆಂಕಟೇಗೌಡ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾನೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಆನಂದೇಗೌಡ ಅವರು ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಆಗಮಿಸಿ ಅಪಘಾತ ನಡೆಸಿದ ಖಾಸಗಿ ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಶವವನ್ನು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.

ಘಟನೆ ಕುರಿತು ಮೃತ ವೆಂಕಟೇಗೌಡ ಅವರ ಪತ್ನಿ ಸರೋಜಮ್ಮ ನೀಡಿದ ದೂರಿನ ಮೇರೆಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತ ವೆಂಕಟೇಗೌಡ ಸುಮಾರು 40ವರ್ಷಗಳ ಕಾಲ ದುಬೈನಲ್ಲಿ ಕಂಪನಿಯೊ0ದರಲ್ಲಿ ದುಡಿಮೆ ಮಾಡಿ, ಊರಿನಲ್ಲಿ ಜಮೀನು ಖರೀದಿಸಿ, ನಿವೃತ್ತಿಯ ನಂತರ ಭೈರಾಪುರದಲ್ಲಿ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮೃತ ವೆಂಕಟೇಗೌಡ ಅವರ ಅಂತ್ಯಸAಸ್ಕಾರವು ಭಾನುವಾರ ಸಂಜೆ ಭೈರಾಪುರ ಗ್ರಾಮದಲ್ಲಿ ನಡೆಯಿತು.

– ಶ್ರೀನಿವಾದ್‌ ಆರ್.

Leave a Reply

Your email address will not be published. Required fields are marked *