ಕೆ.ಆರ್.ಪೇಟೆ-ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು, ಕ್ರೀಡಾಕೂಟಗಳು, ಶಾಲಾ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳು ಸೂಕ್ತ ವೇದಿಕೆಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ ಅವರು ಹೇಳಿದರು.
ಅವರು ತಾಲ್ಲೂಕಿನ ಬಂಡಿಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಂಡಿಹೊಳೆ ಸಿ.ಆರ್.ಸಿ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಶಾಲೆ ಕಡೆಗೆ ಆಕರ್ಷಣೆ ಮಾಡಲು ಸಹಕಾರಿಯಾಗುತ್ತವೆ.ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿ, ನಾಲ್ಕು ಗೋಡೆಗಳ ಮಧ್ಯೆ ಬಂಧಿಸುವುದು ಸರಿಯಲ್ಲ.ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ,ಕ್ರೀಡಾ ಕೂಟಗಳು,ಪ್ರತಿಭಾ ಕಾರಂಜಿ,ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ಜ್ಞಾನ ವಿಕಾಸ ಹಾಗೂ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತರಬೇಕು ಎಂದರು.
ಪಠ್ಯಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೆ ನೀಡಿದರೆ ಉತ್ತಮ ವ್ಯಾಸಂಗ ಸಾಧ್ಯವಾಗುತ್ತದೆ ಎಂಬ ಶಿಕ್ಷಣ ತಜ್ಞರ ಸಲಹೆಯ ಮೇರೆಗೆ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಕ್ರೀಡಾಕೂಟ,ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮ,ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯು ಆದೇಶ ಹೊರಡಿಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮುಂದಾಗಿದೆ.ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ದೂರ ಮಾಡಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು ಎಂದು ಬಿ.ಇ.ಓ ಸೀತಾರಾಂ ಮನವಿ ಮಾಡಿದರು.
ಬಂಡಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಂಡಿಹೊಳೆ ಸಿ.ಆರ್.ಸಿ. ಅಧಿಕಾರಿ ಎ.ಜೆ.ಧನೇಂದ್ರೇಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನಯ್ವಾಧಿಕಾರಿ ಹೆಚ್.ಕೆ.ಮಂಜುನಾಥ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಗ್ರಾ.ಪಂ.ಪಿಡಿಓ ಶಿವಕುಮಾರ್, ತಾಲ್ಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಗೌಡ, ಬಿ.ಆರ್.ಪಿ ಸಂಪನ್ಮೂಲ ವ್ಯಕ್ತಿ ಕೆ.ಪಿ.ಬೋರೇಗೌಡ, ದಾನಿಗಳಾದ ಬಂಡಿಹೊಳೆ ಹರೀಶ್, ಬಂಕ್ ಚೇತನ್‌ಕುಮಾರ್, ಸಿಂಚನ ಮೊಬೈಲ್ ಯತೀಶ್, ದೀಪು, ಇಂಜಿನಿಯರ್ ನಾಟನಹಳ್ಳಿ ವಸಂತಕುಮಾರ್, ಎಂ.ಜಿ.ದೇವೇಗೌಡ, ಕರೋಠಿ ಮಂಜೇಗೌಡ, ಶಿಕ್ಷಣ ಸಂಯೋಜಕರಾದ ಹರೀಶ್, ನೀಲಾಮಣಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಶ್ವೇತಾ, ಗ್ರಾ.ಪಂ.ಬಿಲ್ ಕಲೆಕ್ಟರ್ ಅಶೋಕ್, ರಾಘವೇಂದ್ರ, ಸೇರಿದಂತೆ ಎಲ್ಲಾ ಗ್ರಾ.ಪಂ.ಸದಸ್ಯರು ಹಾಗೂ ಬಂಡಿಹೊಳೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
————–ಶ್ರೀನಿವಾಸ್ ಕೆ ಆರ್ ಪೇಟೆ