ಬೇಲೂರು;ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಲ್ಲಿ ‘ಅಂಗನವಾಡಿ ಶಿಕ್ಷಕಿ’ಯರ ಪಾತ್ರ ಮಹತ್ವದ್ದು-ನ್ಯಾಯಾಧೀಶೆ ಎಂ.ಎಸ್ ಶಶಿಕಲಾ

ಬೇಲೂರು;ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಎಲ್ಲಾ ಇಲಾಖೆಗಳ ಕರ್ತವ್ಯ. ಅದರಲ್ಲೂ ಬಹುಮುಖ್ಯವಾಗಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಮಹತ್ವದ್ದು ಎಂದು ಬೇಲೂರು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್ ಶಶಿಕಲಾ ಹೇಳಿದರು.

ಪಟ್ಟಣದ ಶ್ರೀ ಚನ್ನಕೇಶವ ದಾಸೋಹ ಭವನದಲ್ಲಿ ಕಾನೂನು ಸೇವಾ ಸಮಿತಿ,ವಕೀಲರ ಸಂಘ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ,ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಪೌಷ್ಟಿಕ ಆಹಾರದ ಬಗ್ಗೆ ಗಮನ ಹರಿಸದೆ ಕೇವಲ ಜಂಕ್ ಪುಡ್ ಗಳಿಗೆ ಮಾರುಹೋಗುತ್ತಿರುವುದು ಬೇಸರದ ಸಂಗತಿ.ಅಪೌಷ್ಟಿಕತೆ ನಿರ್ಮೂಲನೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕು.ದೇಶ ಅಭಿವೃದ್ದಿ ಯಾಗಬೇಕಾದರೆ ನಮ್ಮ ಆರೋಗ್ಯ ಪದ್ದತಿ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಹಿಂದೆ ಹಸಿತರಕಾರಿ,ಮೊಳಕೆ ಕಾಳು ಮತ್ತು ಕೈತೋಟದಲ್ಲಿ ಬೆಳೆದ ವಸ್ತುಗಳಲ್ಲಿ ಆಹಾರ ತಯಾರು ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮ ತನವನ್ನು ಮರೆತು ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದೇವೆ.

ಪೌಷ್ಟಿಕತೆ ಎನ್ನುವುದು ಪ್ರಾಪ್ತ ವಯಸ್ಸಿನವರಿಗೆ ಮಾತ್ರವಲ್ಲದೆ ಪ್ರಸವ ಪೂರ್ವ ಮಗುವಿಗೂ ಅತ್ಯವಶ್ಯಕ ಅದಕ್ಕಾಗಿ ಸರ್ಕಾರದ ಮಹತ್ವದ ಯೋಜನೆಗಳನ್ನು ಸಮಾಜಕ್ಕೆ ಹತ್ತಿರವಾಗಿರುವ ಅಂಗನವಾಡಿ ಕೇಂದ್ರಗಳ ಮೂಲಕ ತಲುಪಿಸುತ್ತಿದೆ.ಇದನ್ನು ಉತ್ತಮ ರೀತಿಯಲ್ಲಿ ಪ್ರತಿಯೊಬ್ಬರಿಗು ನೀಡುವ ಮೂಲಕ ಭಗವಂತ ನೀಡಿರುವ ಸೇವಾ ಅವಕಾಶವನ್ನು ಸರಿಯಾಗಿ ಮಾಡಿದಾಗ ನಿಮ್ಮ ಸೇವೆಗೆ ಅರ್ಥ ಬರುತ್ತದೆ ಎಂದರು .

ತಹಶಿಲ್ದಾರ್ ಎಂ ಮಮತಾ ಮಾತನಾಡಿ ಭಾರತೀಯರಾದ ನಾವುಗಳು ಎಲ್ಲದರಲ್ಲೂ ಮುಂದೆ ಇದ್ದೇವೆ.ಆದರೆ ಆರೋಗ್ಯದ ವಿಷಯದಲ್ಲಿ ಮಾತ್ರ ನಾವು ಹಿಂದೆ ಇದ್ದೇವೆ.ಈ ಹಿಂದೆ ಹಿರಿಯರು ಹಾಕಿಕೊಟ್ಟ ಆರೋಗ್ಯ ಪದ್ದತಿ ಬಿಟ್ಟು ಮೊಬೈಲ್ ನಲ್ಲಿ ಬರುವಂತಹ ಅಡುಗೆಗಳಿಗೆ ಒಗ್ಗಿರುವುದು ವಿಪರ್ಯಾಸ.ಪ್ರತಿನಿತ್ಯ ಮನೆಯಲ್ಲಿ ಹಸಿ ತರಕಾರಿಗಳಿಗೆ ಹೆಚ್ಚಿನ ಮಾನ್ಯತೆ ನೀಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎಂ.ಪಿ.ದಿನೇಶ್ ಮಾತನಾಡಿ, ಅಪೌಷ್ಟಿಕತೆಯಿಂದಾಗಿ ಹಲವು ಅನಾರೋಗ್ಯದ ಸಮಸ್ಯೆಗಳು ಉದ್ಭವಿಸಿ,ವಯಸ್ಸು ಹಾಗೂ ಲಿಂಗ ಭೇದವಿಲ್ಲದೆ,ಎಲ್ಲರೂ ಸಂಕಷ್ಟಕ್ಕೆ ಒಳಗಾಗುತ್ತಾರೆ.ಗರ್ಭಿಣಿ ಪೌಷ್ಟಿಕ ಮಟ್ಟದ ಆಧಾರದ ಮೇಲೆ ಆಕೆಗೆ ಹುಟ್ಟುವ ಮಗುವಿನ ಆರೋಗ್ಯ ನಿರ್ಧಾರವಾಗುತ್ತದೆ.ರಕ್ತಹೀನತೆಯು ಗರ್ಭಿಣಿ, ಬಾಣಂತಿಗೆ ಸಾಮಾನ್ಯ ಸಮಸ್ಯೆಯಾಗಿದೆ.ಪ್ರತಿದಿನ ಸಮತೋಲನ ಆಹಾರ ಸೇವಿಸುವುದರಿಂದ ಮಾತ್ರ ಪರಿಣಾಮಕಾರಿಯಾಗಿ ರಕ್ತಹೀನತೆಯನ್ನು ತಡೆಗಟ್ಟಬಹುದು.ಎಲ್ಲರೂ ಪ್ರತಿ ದಿನ ಏಕದಳ, ದ್ವಿದಳ ಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು ಹಾಗೂ ಹಣ್ಣು-ಹಂಪಲು ಸೇವಿಸುವುದರಿಂದ ಪೌಷ್ಟಿಕ ಮಟ್ಟ ಹೆಚ್ಚುತ್ತದೆ.ಜೀವ ಮತ್ತು ಜೀವನಕ್ಕೆ ಪೌಷ್ಟಿಕ ಆಹಾರ ಸೇವನೆ ಅತ್ಯವಶ್ಯಕ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಮತಾ, ಸಮತೋಲನ ಆಹಾರದ ಮಹತ್ವ, ಇಲಾಖೆ ಸೌಲಭ್ಯಗಳು, ಮಾತೃ ವಂದನಾ ಸಪ್ತಾಹ, ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಮಹತ್ವ, ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ ಮಾತನಾಡಿ ಇತ್ತೀಚಿನ ದಿನದ ವೇಗದ ನಾಗಲೋಟಕ್ಕೆ ನಾವೆಲ್ಲರೂ ಬಲಿಯಾಗುತ್ತಿದ್ದೇವೆ.ಕೇವಲ ದುಡಿಮೆಯಾ ಹಿಂದೆ ಬಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇರುವುದು ವಿಪರ್ಯಾಸ.ರೈತರು ಬೆಳೆದ ಪದಾರ್ಥಗಳ ಬಿಟ್ಟು ಅಂಗಡಿಗಳಲ್ಲಿ ಸಿಗುವ ಪದಾರ್ಥಗಳಿಗೆ ಒಗ್ಗಿಕೊಂಡಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.ಸಾರ್ವಜನಿಕರ ಜೊತೆ ನೇರ ಸಂಪರ್ಕ ದಲ್ಲಿರುವ ನೀವುಗಳು ಗ್ರಾಮೀಣ ಭಾಗದಲ್ಲೇ ಪೌಷ್ಟಿಕ ಆಹಾರ ಪದ್ದತಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದಾಗ ಅದು ಸಾಧ್ಯವಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದರು.

ಇದೇ ವೇಳೆ ತಾಲುಕಿನ ಎಲ್ಲಾ ಅಂಗನವಾಡಿ ಇಲಾಖೆಯ ಕಾರ್ಯಕರ್ತರು ವಿಶೇಷವಾದ ಆಹಾರ ಮೇಳ ಹಾಗು ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ ವಿಜಯ್,ಆಡಳಿತ ವೈದ್ಯಾಧಿಕಾರಿ ಡಾ ಸುಧಾ,ಸರ್ಕಾರಿ ಅಭಿಯೋಜಕರಾದ ಶಶಿಕಲಾ,ಗೀತಾಮಣಿ,ನ್ಯಾಯಾಲಯದ ಸಿಬ್ಬಂದಿಗಳಾದ ಪ್ರಕಾಶ್ ಇತರರು ಹಾಜರಿದ್ದರು.

—————————-ರವಿಕುಮಾರ್

Leave a Reply

Your email address will not be published. Required fields are marked *

× How can I help you?