ಅರೇಹಳ್ಳಿ:ಜಗತ್ತು ಕಂಡ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲ್ಲಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ‍್ಯದರ್ಶಿ ಮುಜೀಬುರ್ ರೆಹಮಾನ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಹಿರಾ ಸೆಂಟರಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ವತಿಯಿಂದ 'ಪ್ರವಾದಿ ಮುಹಮ್ಮದ್ ಮಹಾನ್ ಚಾರಿತ್ರ್ಯವಂತ' ಎಂಬ ರಾಜ್ಯವ್ಯಾಪಿ ನಡೆಸಲಾಗುತ್ತಿರುವ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ಸೀರತ್ ಪ್ರವಚನ ಕಾರ‍್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು,ಮುಹಮ್ಮದ್ ಕೇವಲ ಮುಸ್ಲಿಂ ಧರ್ಮದ ಪ್ರವಾದಿಯಾಗಿರದೆ ಇಡೀ ಮಾನವ ಕುಲದ ಪ್ರವಾದಿಯಾಗಿದ್ದಾರೆ.ಪ್ರಪಂಚದಲ್ಲಿರುವ 120 ಕೋಟಿ ಮುಸ್ಲಿಮರು ಮುಹಮ್ಮದರ ಹೆಸರನ್ನು ಪ್ರತಿನಿತ್ಯ ಜಪಿಸುತ್ತಾ ಆಜಾನ್ ಮಾಡುತ್ತಾರೆ ಎಂದರು.
ಖ್ಯಾತ ಪ್ರವಚನಕಾರ ಉಡುಪಿಯ ಅಕ್ಬರ್ ಅಲಿ ಮಾತನಾಡಿ, ಮನುಷ್ಯನಿಗಾಗಿ ದೇವರು ಜಗತ್ತನ್ನು ಸೃಷ್ಠಿ ಮಾಡಿದ್ದಾನೆ.ಆ ದೇವರು ಪ್ರವಾದಿಗಳನ್ನು ಸೃಷ್ಠಿಸಿ ಆ ಮೂಲಕ ಮನುಷ್ಯನಿಗೆ ಮಾರ್ಗದರ್ಶನ ನೀಡುವ ಜವಾಬ್ಧಾರಿ ನೀಡಿದ್ದನು.ಇಂದಿನ ಆಧುನಿಕ ಸಮಾಜದಲ್ಲಿ ಪರಸ್ಪರ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಮಯವೆ ಇಲ್ಲದಾಗಿದೆ.ಮುಂದುವರೆದ ಸಮಾಜದಲ್ಲಿ ತಂದೆ ತಾಯಿಗಳನ್ನು ಮನೆಯಿಂದ ಆಚೆಗಟ್ಟುತ್ತಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ.
ಜನ್ಮ ಕೊಡುವ ಹೆಣ್ಣಿನ ಮೇಲೆ ದೌರ್ಜನ್ಯಗಳು ಪ್ರತಿ ನಿತ್ಯ ಜರುಗುತ್ತಿವೆ.ಮಾಹಿತಿಯ ಪ್ರಕಾರ ದೇಶಾದ್ಯಂತ ನಿಮಿಷಕ್ಕೆ 16 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ.ಉತ್ತಮ ಚಾರಿತ್ರ್ಯ ಹೊಂದಿದ್ದರೆ ಮಾತ್ರ ನಾವು ಮನುಷ್ಯರಾಗಲು ಸಾಧ್ಯ.ಇಲ್ಲವೆಂದಾದಲ್ಲಿ ಪ್ರಾಣಿಗಳಿಗೂ ಕೀಳು ಮಟ್ಟಕ್ಕೆ ಇಳಿಯುತ್ತೇವೆ.ದೇವರು ಬೆಸೆಯುವಂತಹ ಸಂಬಂಧಗಳನ್ನು ಯಾವತ್ತೂ ದೂರ ಮಾಡದೆ ಎಲ್ಲರೂ ಒಟ್ಟಾಗಿ ಬಾಳಿದಾಗ ಮಾತ್ರ ಸಂತೋಷ ಪ್ರಾಪ್ತಿಯಾಗುತ್ತದೆ.ಎಲ್ಲವನ್ನು ಕಲ್ಪಿಸಿಕೊಟ್ಟ ದೇವರಿಗಿಂತ ಮನುಷ್ಯನ ಉದ್ಧಟತನವೆ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್. ಕಾರ್ತಿಕ್,ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್. ಸಂತೋಷ್ ಕುಮಾರ್,ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಖಜಾಂಚಿ ಮುಜೀಬ್ ಉರ್ ರೆಹ್ಮಾನ್,ಜಮಾಅತೆಯ ಅಧ್ಯಕ್ಷ ಅಬ್ದುಲ್ಲಾ ಉಮ್ರಿ, ಪದಾಧಿಕಾರಿಗಳು ಈ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.
———————-ರವಿಕುಮಾರ್