ಅರಕಲಗೂಡು-ಮಾಗಡಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗು ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ರೈತರ ಜೊತೆಗೂಡಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಹೆಚ್ ಪಿ ಶ್ರೀಧರಗೌಡ ಭೇಟಿ ನೀಡಿ ಸಮಸ್ಯೆಯ ಆಲಿಸಿದರು.
ತಾಲೂಕು ದಂಡಾಧಿಕಾರಿಗಳಾದ ಸೌಮ್ಯ,ರಾಜ್ಯಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜೀನಿಯರ್ ಸುಪ್ರಿಯಾ ಹಾಗು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜೀನಿಯರ್ ಶಿವರಾಜ್ ರವರನ್ನು ಸ್ಥಳಕ್ಕೆ ಕರೆಸಿ ಅವರಿಂದ ಹೆಚ್.ಪಿ ಶ್ರೀಧರಗೌಡ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು ರೈತರ ಹಾಗು ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳ ಅಹವಾಲನ್ನು ಆಲಿಸಿದ್ದು ಇದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.ಶನಿವಾರದಂದು ಈ ರಸ್ತೆಯಲ್ಲಿ ಬರುವ ಎಲ್ಲ ಗ್ರಾಮಗಳಿಗೂ ನಾನು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾಹಿತಿ ಸಂಗ್ರಹಿಸಿ ಅದನ್ನು ಸರಕಾರಕ್ಕೆ ಮುಟ್ಟಿಸಲಿದ್ದೇನೆ.ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಮಂತ್ರಿಗಳಿಗೆ ವರದಿ ಒಪ್ಪಿಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದಾಗಿ ಭರವಸೆ ನೀಡಿ ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುವಂತೆ ಧರಣಿ ನಿರತರಿಗೆ ಮನವಿ ಮಾಡಿಕೊಂಡರು.
——————ಶಶಿಕುಮಾರ್ ಕೆಲ್ಲೂರು