ಬೇಲೂರು-ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನದ ಮಾಹಿತಿಯನ್ನು ಆರೋಗ್ಯಾಧಿಕಾರಿಗೆ ಕೇಳಿದರೂ ಅವರು ಕೊಡದಿರುವುದಕ್ಕೆ ಹಣ ದುರ್ಬಳಕೆಯಾಗಿರುವುದೇ ಕಾರಣ ಎಂದು ಕೆ.ಡಿ.ಪಿ ಸದಸ್ಯ ಚೇತನ್.ಸಿ.ಗೌಡ ಆರೋಪಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚೇತನ್, ಸಮ್ಮುಖದಲ್ಲಿ ಅನುದಾನದ ಬಗ್ಗೆ ಮಾಹಿತಿ ಕೇಳಿ ಮಾತನಾಡಿದ ಅವರು,ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನ ಬಳಕೆಯಲ್ಲಿ ಲೋಪ ಕಂಡು ಬರುತ್ತಿದೆ.ನಾವು ಕೇಳಿದ ಮಾಹಿತಿ ನೀಡಲು ನಿರಾಕರಿಸುತ್ತಿರುವುದು ನಮ್ಮ ಅನುಮಾನಕ್ಕೆ ಕಾರಣವಾಗಿದೆ ಎಂದರು.
ತಾಲೂಕಿನಲ್ಲಿ 10ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು,ಇಲ್ಲಿ ವೈದ್ಯರ ಕೊರತೆ ಇದೆ.ತಾಲೂಕು ಆರೋಗ್ಯಾಧಿಕಾರಿ ಅಲ್ಲಿಗೆ ಭೇಟಿ ನೀಡದಿರುವುದೇ ಇದಕ್ಕೆ ಕಾರಣ.ಜತೆಗೆ ವಸತಿ ನಿಲಯಗಳಿಗೆ ತೆರಳಿ ಆಹಾರದ ಗುಣಮಟ್ಟ,ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪರಿಶೀಲಿಸುತ್ತಿಲ್ಲ.ಮಾಹಿತಿ ಕೇಳಿದರೆ ದಿನ ದೂಡುತಿದ್ದಾರೆ ಎಂದು ತಿಳಿಸಿದರು.
ಕೆ.ಡಿ.ಪಿ ಸದಸ್ಯ ನಂದೀಶ್ ಮಾತನಾಡಿ,ಸರ್ಕಾರದಿಂದ ನಾಲ್ಕು ವರ್ಷಗಳಿಂದ ಬಂದ ಅನುದಾನ ಯಾವ ಆಸ್ಪತ್ರೆಗೆ, ಯಾವುದಕ್ಕೆ ಖರ್ಚು ಮಾಡಿದ್ದೀರಾ,ಕೆಲ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.ಶಿಸ್ಟಚಾರ ಕಲಿತಿಲ್ಲ.ಕೆ.ಡಿ.ಪಿ ಸದಸ್ಯರಿಗೆ ಕಾರ್ಯಕ್ರಮಗಳ ಮಾಹಿತಿ ನೀಡುತ್ತಿಲ್ಲ,ರೋಗಿಗಳು ಆಸ್ಪತ್ರೆಗೆ ಬಂದರೆ ಹಣ ಕೇಳುತಿದ್ದಾರೆ.ಇದನ್ನೆಲ್ಲ ತಾಲೂಕು ಆರೋಗ್ಯಾಧಿಕಾರಿ ಗಮನಿಸಬೇಕು.ಮತ್ತು ತಕ್ಷಣವೇ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ ಚೇತನ್ ಮಾತನಾಡಿ,ಕೆ.ಡಿ.ಪಿ ಸದಸ್ಯರು ಪತ್ರದ ಮುಖಾಂತರ ಮಾಹಿತಿ ಕೇಳಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗ ದರ್ಶನದಂತೆ ನಡೆದುಕೊಳ್ಳುತ್ತೇವೆ.ಮುಂದಿನ ಒಂದು ವಾರದಲ್ಲಿ ನಿಮಗೆ ಮಾಹಿತಿ ನೀಡಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ ವಿಜಯ್ ಮಾತನಾಡಿ,ನಾಲ್ಕು ವರ್ಷದಿಂದ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆ ಎಷ್ಟು ಖರ್ಚಾಗಿದೆ,ಎಂಬುದರ ಬಗ್ಗೆ ಆಡಿಟ್ ಮಾಡಿಸಲಾಗುತ್ತಿದೆ.ನಂತರ ಕೆ.ಡಿ.ಪಿ ಸದಸ್ಯರಿಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಕೆಡಿಪಿ ಸದಸ್ಯರಾದ ಜ್ಯೋತಿ,ಸುಹಿಲ್ ಪಾಷ,ನವೀನ್,ಆಡಳಿತ ವೈದ್ಯಾಧಿಕಾರಿ ಡಾ.ಸುಧಾ ಇದ್ದರು.
——————————ರವಿಕುಮಾರ್