ಚಿಕ್ಕಮಗಳೂರು;ವಸತಿ ರಹಿತರಿಗೆ ವಸತಿ ಹಾಗೂ ಹಕ್ಕುಪತ್ರ ವಿತರಿಸಬೇಕು ಹಾಗೂ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಭಾರತ ಕಮ್ಯೂನಿಸ್ಟ್ ಪಕ್ಷ ನೇತೃತ್ವದಲ್ಲಿ ಶುಕ್ರವಾರ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್,ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ಬಡ ಕೂಲಿ ಕಾರ್ಮಿಕರಾಗಿದ್ದು ನೆತ್ತಿಯ ಮೇಲೆ ಸೂರಿಲ್ಲ,ಈ ಭಾಗದಲ್ಲಿ ಗ್ರಾಮಸ್ಥರು ಬದುಕಿನ ಮೂಲಭೂತ ಹಕ್ಕಿನಿಂದ ವಂಚಿತರಾಗಿ ಸಂಕಷ್ಟದಿoದ ಬದುಕು ಸಾಗಿಸುತ್ತಿದ್ದಾರೆ ಎಂದರು.
ಗ್ರಾಮದಲ್ಲಿ ಸಮೃದ್ದಿ ಜೀವನ ನಡೆಸುವ ಸಂಬoಧ ಒಂದು ನಿವೇಶನ ಅಥವಾ ವಸತಿ ಸೌಲಭ್ಯವಿಲ್ಲ.ಅಲೆಮಾರಿಗಳಂತೆ ಪರದಾಟದಾಡುವಂತಾಗಿದೆ.ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆಗಳ ಮೂಲಕ ಪಂಚಾಯಿತಿ ಗಮನ ಸೆಳೆದರೂ ಕೂಡಾ ಕೇವಲ ಭರವಸೆಗಳ ಹೊರತಾಗಿ ಯಾವುದೇ ಸವಲತ್ತು ಒದಗಿಸುತ್ತಿಲ್ಲ ಎಂದು ದೂರಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕುಟುಂಬಕ್ಕೆ ಒಂದರoತೆ ಮನೆ ನೀಡುವ ಪ್ರಸ್ತಾವನೆಯನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು.ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದ್ದರೂ ಸಹ ನಿವೇಶನ ರಹಿತರ ಸಮಸ್ಯೆಗಳನ್ನು ಬಗೆಹರಿಸುವ ಯಾವ ಪ್ರಕ್ರಿಯೆಯು ಪ್ರಾರಂಭಿಸಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯವಾಗಿ ಈ ಭಾಗದಲ್ಲಿ ಕೊಳಗಾಮೆ ಹಾಗೂ ಮೇಲಿನಹುಲುವತ್ತಿ ಗ್ರಾಮದಲ್ಲಿ ಮರ ತೆಗೆದು ಹಕ್ಕುಪತ್ರ ವಿತರಿಸಬೇಕು.ವಾಲ್ಮೀಕಿ ನಗರಕ್ಕೆ ಸಿಮೆಂಟ್ ರಸ್ತೆ ನಿರ್ಮಿಸಬೇಕು.ವಸತಿ ರಹಿತರಿಗೆ ವಸತಿ ಕೊಡಬೇಕು.ಗುಡಿಸಲು ಹಾಕಿರುವ ಎಲ್ಲಾ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರುಗಳಾದ ಎ.ಶಂಕರ್,ಮುತ್ತಯ್ಯ,ಕೊರಗಪ್ಪ,ರುಕ್ಮ,ಕುಸುಮ ಹಾಗೂ ಗ್ರಾಮಸ್ಥರು ಹಾಜರಿದ್ದರು.
–—————–ಸುರೇಶ್