ಕೆ.ಆರ್.ಪೇಟೆ:ಪಿ.ಎಲ್‌.ಡಿ ಬ್ಯಾಂಕ್ ರೈತರ ಜೀವನಾಡಿಯಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ರೈತರ ಪ್ರಗತಿಗೆ ಶ್ರಮಿಸುತ್ತಿದೆ-ಎಸ್.ರಾಧ ಈಶ್ವರ್ ಪ್ರಸಾದ್

ಕೆ.ಆರ್.ಪೇಟೆ:ಶತಮಾನಗಳಿಂದ ಪಿ.ಎಲ್‌.ಡಿ ಬ್ಯಾಂಕ್ ಗ್ರಾಮೀಣ ರೈತರ ಜೀವನಾಡಿಯಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ರೈತರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ.ಇವುಗಳ ಲಾಭ ಪಡೆದು ರೈತರು ಸಾಲ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷೆ ಎಸ್.ರಾಧ ಈಶ್ವರ್ ಪ್ರಸಾದ್ ತಿಳಿಸಿದರು.

ಪಟ್ಟಣದಲ್ಲಿರುವ ಎಸ್.ಎಂ ಲಿಂಗಪ್ಪ ಸಹಕಾರ ಭವನ ಆವರಣದಲ್ಲಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು,ಶೇ.60 ರಷ್ಟು ಕೃಷಿ ಚಟುವಟಿಕೆ ಮೇಲೆಯೇ ಅವಲಂಬಿತವಾಗಿದೆ ರೈತರಿಗಾಗಿ ಸರ್ಕಾರ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಜಮೀನು ಅಭಿವೃದ್ಧಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.ಇದರ ಲಾಭವನ್ನು ಪ್ರತಿಯೊಬ್ಬ ರೈತರು ಪಡೆಯಬೇಕು.ರೈತರು ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದರು.ಆದರೆ ಸದ್ಯ ರೈತರ ಬೆಳೆಗೆ ಸರ್ಕಾರವೇ ಬೆಂಬಲ ಬೆಲೆ ಮೂಲಕ ಖರೀದಿಸುವುದು ರೈತರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ರೈತಸ್ನೇಹಿ ಬ್ಯಾಂಕ್‌ ಆಗಿದ್ದು ರೈತರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ನಮ್ಮ ಬ್ಯಾಂಕ್‌ ಸದಸ್ಯರುಗಳಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರ ನೀಡಿದೆ ಎಂದು ತಿಳಿಸಿ,ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದರೆ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯ.ಈ ಬ್ಯಾಂಕ್ ತಾಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿ ಒಳಗೊಂಡಿದ್ದು,ಸದಸ್ಯರು ಸೂಕ್ತ ದಾಖಲೆಯೊಂದಿಗೆ ಹಲವಾರು ಸಾಲ ಸೌಲಭ್ಯಗಳನ್ನು ಪಡೆದು ಮರು ಪಾವತಿ ಮಾಡಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ,ಸಹಕಾರ ಸಂಘಗಳು ಸಮುದಾಯದ ಅಭಿವೃದ್ಧಿ ಜತೆಗೆ ಸಮಾಜದ ಅಭಿವೃದ್ಧಿಯ ಉದ್ದೇಶ ಹೊಂದಿದ್ದರೆ ಮಾತ್ರ ಯಶಸ್ಸು ಲಭಿಸಲು ಸಾಧ್ಯ.ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ.ಪರಸ್ಪರ ಕೈ ಜೋಡಿಸಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ತಾವು ಬೆಳೆದು ತಮ್ಮವರನ್ನೂ ಬೆಳೆಸುವುದು ಸಹಕಾರ ತತ್ತ್ವ.ಸಂಘ ಜೀವಿಯಾದ ಮನುಷ್ಯ ಸಹಕಾರ ಜೀವಿಯೂ ಆಗಬೇಕು.ಸ್ವಾರ್ಥ ಜೀವನದಿಂದ ಏನನ್ನೂ ಸಾಧಿಸಲಾಗುವುದಿಲ್ಲ.ಹೀಗಾಗಿ ಸಹಕಾರ ಸಂಘಗಳ ಮೂಲಕ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ನಿಸಬೇಕು.ನಮ್ಮಂತೆ ಇತರರು ಬೆಳೆಯಲು ನಮ್ಮ ಕೈಯಲ್ಲಾದಷ್ಟು ನೆರವಾಗಬೇಕು.ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಸಂಘದ ವ್ಯವಸ್ಥಾಪಕ ರವಿಕುಮಾರ್ ಈ ವರ್ಷದ ಆಯ್ಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕಿಕ್ಕೇರಿ ಏಜಾಜ್ ಪಾಷಾ, ನಿರ್ದೇಶಕರಾದ ನಾಗರಾಜು ಎ.ಬಿ, ಶಿವಕುಮಾರ್ ಬಿ.ಆರ್, ಶಂಭುಲಿಂಗೇಗೌಡ ಸಿ. ಪಿ, ಕಮಲಮ್ಮ, ಜಯಶೀಲಾ ಸಿ.ಜಿ, ಗೋವಿಂದರಾಜು ಎ.ಎನ್, ಧನಂಜಯ ಬಿ.ಜಿ, ಕಾಂತರಾಜೇಗೌಡ, ರಾಜ ನಾಯಕ, ಚಂದ್ರೇಗೌಡ, ಅಂಜನಿ, ನಾಗೇಶ್ ಬಿ.ಪಿ, ಬ್ಯಾಂಕಿನ ವ್ಯವಸ್ಥಾಪಕ ರವಿಕುಮಾರ್, ಕಿರಿಯ ಕ್ಷೇತ್ರಾಧಿಕಾರಿ ಯೋಗೇಶ್ವರಿ, ಸಿಬ್ಬಂದಿಗಳಾದ ಹರೀಶ್, ರೂಪ, ನರಸಿಂಹ, ಮೋಹನ್, ಬಾಬು, ಅಭಿಷೇಕ್,ಸೋಮಶೇಖರ, ನೂರಾರು ಸಂಖ್ಯೆಯಲ್ಲಿ ರೈತರು ಸೇರಿದಂತೆ ಉಪಸ್ಥಿತರಿದ್ದರು.

——————————-ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?