ಕೆ.ಆರ್.ಪೇಟೆ:ಸಹಕಾರ ಸಂಘಗಳು ಸದಸ್ಯರ ಸಂಕಷ್ಟದ ಸಮಯದಲ್ಲಿ ನೆರವಾಗುತ್ತವೆ ಎಂದು ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಹೆಚ್.ಕೆ ಅಶೋಕ್ ಅಭಿಪ್ರಾಯಪಟ್ಟರು.
ತಾಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘದಲ್ಲಿ ರೈತರು ತಮಗೆ ಅಗತ್ಯವಿದ್ದ ಸಮಯದಲ್ಲಿ ಒಡವೆ ಅಡವಿಟ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಅದೇ ರೀತಿ ಕೃಷಿ ಕಾರ್ಯಕ್ಕಾಗಿ ಜಮೀನು ಅಡವಿಟ್ಟು ಸಹ ಸಾಲ ಪಡೆಯಬಹುದು. ಹಣಕ್ಕಾಗಿ ರೈತರು ಖಾಸಗಿ ವ್ಯಕ್ತಿಗಳ ಬಳಿ ಸಾಲ ಪಡೆಯಲು ಹಲವು ಬಾರಿ ತಿರುಗುವುದರ ಜೊತೆಗೆ ಹೆಚ್ಚು ಬಡ್ಡಿ ಪಾವತಿಸಬೇಕು. ಅದರೆ ಸಹಕಾರಿ ಬ್ಯಾಂಕ್‌ಗಳು ಶೀಘ್ರವಾಗಿ ಸಾಲ ನೀಡುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತಿದ್ದು ಗ್ರಾಮೀಣ ಆರ್ಥಿಕ ಪ್ರಗತಿಗೆ ವಿ.ಎಸ್.ಎಸ್.ಎನ್ ಸಂಘಗಳು ಸಹಕಾರ ನೀಡುತ್ತಿವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ ಭರತ್ ಕುಮಾರ್,ಗ್ರಾಮಾಂತರ ಭಾಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಸದಾ ತೋಡಗಿಸಿಕೂಂಡಿರುವ ರೈತರ ಏಳಿಗೆಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳು ಸದಾ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಂಘದ ಸರ್ವ ಸದಸ್ಯರು ಇದೇ ರೀತಿಯ ಸಹಕಾರ ನೀಡಿದರೆ ಇನ್ನಷ್ಟು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯ ಎಂದು ತಿಳಿಸಿ,ಸಭೆಯಲ್ಲಿ ಕೆಲ ಲೋಪದೋಷಗಳನ್ನು ನೆರೆದಿದ್ದ ಸದಸ್ಯರು ಪ್ರಸ್ತಾಪಿಸಿದಾಗ ಎಲ್ಲಾ ಪ್ರಶ್ನೆಗಳಿಗೂ ಅರ್ಥಪೂರ್ಣ ಉತ್ತರಗಳನ್ನು ನೀಡಿ ಸಮಸ್ಯೆಗಳನ್ನು ತಿಳಿಗೂಳಿಸಿದರು.
ಎಂ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಆದಿಲ್ ಪಾಷ ಪ್ರಸ್ತುತ ಆರ್ಥಿಕ ವರ್ಷದ ವ್ಯವಹಾರಗಳು, ಸಂಘದ ರೂಪರೇಷಗಳು ಮಂಡಿಸಿದರಲ್ಲದೆ, ಮುಂದಿನ ಆರ್ಥಿಕ ವರ್ಷದ ಬಜೆಟ್‌ನ್ನು ಸಹ ಮಂಡಿಸಿದರು. ಸಭೆ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಕಾಶ್ ವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಕೃಷ್ಣಾಚಾರಿ, ನಿರ್ದೇಶಕರಾದ ಶಿವಶಂಕರ್, ಪರಮೇಶ್,ನಂಜುಂಡಪ್ಪ, ರಮೇಶ್, ಮಂಜುಳಮ್ಮ, ಶ್ರೀಧರ,ತಾಯಮ್ಮ, ನಾಗಶೆಟ್ಟಿ, ಸೋಮಯ್ಯ, ಸಂಘದ ಕಾರ್ಯದರ್ಶಿ ಚೇತನ್, ಗುಮಾಸ್ತರಾದ ಮಧುಚಂದ್ರ, ಸುರೇಶ್, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.
———————–ಮನು ಮಾಕವಳ್ಳಿ ಕೆ ಆರ್ ಪೇಟೆ