ಚಿಕ್ಕಮಗಳೂರು:ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಸಂಭ್ರಮದ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ ಎಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕಕ್ಕೆ ಮರುನಾಮಕರಣವಾಗಿ ಕರ್ನಾಟಕ ಎಂಬ ಹೆಸರು ಘೋಷಣೆಯಾದ ೫೦ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.ಕನ್ನಡದ ಹಿರಿಮೆ, ಕನ್ನಡದ ಗರಿಮೆ,ಕನ್ನಡ ಶಕ್ತಿ,ಕನ್ನಡದ ಮಣ್ಣಿನ ವಾಸನೆಯ ಪರಿಕಲ್ಪನೆಯನ್ನು ಈ ರಥಯಾತ್ರೆ ಸಾರುತ್ತದೆ.ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿರುವ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡದ ರಥ ಸಂಚರಿಸಿದಲ್ಲೆಲ್ಲಾ ಕನ್ನಡದ ವಾತಾವರಣ ಸೃಷ್ಟಿಯಾಗಲಿ.ಕನ್ನಡದ ಶಕ್ತಿ ಸಾಮರ್ಥ್ಯಗಳು ವೃದ್ದಿಸಲಿ.ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದೆಲ್ಲಡೆ ಪ್ರಜ್ವಲಿಸುವಂತಹ ಸಂಭ್ರಮದ ಕ್ಷಣ ಮೂಡಿ ಬರಲಿ ಎಂದರು.
ಶಾಸಕರಾದ ಹೆಚ್.ಡಿ ತಮ್ಮಯ್ಯ ಮಾತನಾಡಿ,ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ.ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯೂ ಕರ್ನಾಟಕ ಎಂದು ನಾಮಕರಣಗೊಂಡ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಲು ಮತ್ತು ಕನ್ನಡ ನಾಡು ನುಡಿಗೆ ದುಡಿದವರ ಸ್ಮರಣೆಗೆ ಕಾರಣವಾಗಲಿ ಎಂದರು.
ಎಸ್.ಎಲ್.ಭೋಜೇಗೌಡ ಮಾತನಾಡಿ,ಕನ್ನಡ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯೋತ್ಸವದಂತಹ ಕಾರ್ಯಕ್ರಮ ಸಂಭ್ರಮಾಚರಣೆಗೆಸೀಮಿತವಾಗಬಾರದು.ಕವಿಗಳು ಕೊಟ್ಟ ಕವಿವಾಣಯಂತೇ ನಡೆದರೇ ಕನ್ನಡ ಏಳಿಗೆ ಸಾಧ್ಯವಾಗುತ್ತದೆ.ಕನ್ನಡದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ.ಕನ್ನಡ ಶಾಲೆಗಳು ಮುಚ್ಚುತ್ತಿದೆ.ಇದರ ಬಗ್ಗೆ ಧ್ವನಿ ಎತ್ತಬೇಕಿದೆ.ಸರ್ಕಾರಿ ಶಾಲೆಗಳಲ್ಲಿ ಕಲಿತವರು ಹಲವು ಕ್ಷೇತ್ರದಲ್ಲಿ ಸಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡದ ಬಗ್ಗೆ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿವಾಣ ಮೂಡಿತು.ಕರ್ನಾಟಕ ಮರುನಾಮಕರಣದ ವರ್ಷಗಳ ಅವಲೋಕನ ನಡೆಸಿದರೇ ನಾವು ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಹೆಸರೇನೋ ಕರ್ನಾಟಕವಾಯ್ತು.ಆದರೆ ಕನ್ನಡ ಯಾವ ಪ್ರಮಾಣದಲ್ಲಿ ಕನಸು ಕಟ್ಟಿ ಉಸಿರಾಗಬೇಕೆಂದು ಬಯಸಿದ್ದೇವೋ ರೀತಿ ಉಸಿರಾಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಸಗರಸಭೆ ಅಧ್ಯಕ್ಷರಾದ ಸುಜಾತ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್,ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕ ರಡ್ಡಿ,ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಂಜುಳಾ ಹುಲ್ಲಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು, ಸಾಂಸ್ಕೃತಿಕ ವಲಯದ ಕಲಾವಿದರು, ಆಟೋ, ಟ್ಯಾಕ್ಸಿ ಸಂಘದ ಸದಸ್ಯರು ಇದ್ದರು.
————————–ಸೂರಿ ಬಣಕಲ್