ಮೂಡಿಗೆರೆ:ಮೂಡಿಗೆರೆ ಪಟ್ಟಣ ಪಂಚಾಯಿತಿಯ 5ನೇ ವಾರ್ಡಿನ ಅಂಗನವಾಡಿಗೆ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಶನಿವಾರ ತಾ.ಪಂ.ಇ.ಒ ದಯಾವತಿ ಹಾಗೂ ಸಿ.ಡಿ.ಪಿ.ಒ ಶೋಭಾ ಬಿ.ಮ್ಯಾಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ವಿನೋಧ್ ಮಾತನಾಡಿ,ಪಟ್ಟಣದ ಮಾರ್ಕೆಟ್ ರಸ್ತೆಯ ಅಂಗನವಾಡಿಯಲ್ಲಿನ ಕಾರ್ಯಕರ್ತೆ ಹುದ್ದೆಗೆ ಸಾಮಾನ್ಯ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿದೆ.ಆದರೆ ಆನ್‌ಲೈನ್ ಮೂಲಕ ಅರ್ಜಿ ಹಾಕುವಾಗ ಉರ್ದು ಭಾಷೆ ಆಯ್ಕೆ ಮಾಡಿಕೊಂಡರೆ ಮಾತ್ರ ಅರ್ಜಿ ಪೂರ್ಣಗೊಳ್ಳುತ್ತದೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಂಡರೆ ಯುಆರ್ ನಾಟ್ ಎಲಿಜಬೆಲ್ ಎಂದು ಸ್ಕ್ರೀನಿಂಗ್ ನಲ್ಲಿ ಸಂದೇಶ ಮೂಡಿಬಂದು ಅಪ್ಲಿಕೇಷನ್ ಮುಂದೆ ಸಾಗುವುದಿಲ್ಲ.ಇಂತಹ ಅವೈಜ್ಞಾನಿಕ ತಂತ್ರಾoಶ ಮಾಡಿರುವವರನ್ನು ಅಮಾನತ್ತುಗೊಳಿಸಿ
ಕಾನೂನು ಕ್ರಮಕೈಗೊಳ್ಳಬೇಕು. ಈಗಿರುವ ಆದೇಶವನ್ನು ಸರ್ಕಾರ ಹಿಂಪಡೆದು ಎಲ್ಲಾ ಭಾಷಿಕರು ಅರ್ಜಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಕನ್ನಡ ಸೇನೆ ಅಧ್ಯಕ್ಷ ಹೊರಟ್ಟಿ ರಘು ಮಾತನಾಡಿ,ಸರ್ಕಾರವೇ ಕನ್ನಡ ಕೊಲ್ಲಲು ಹೊರಟಿರುವುದು ನಾಚಿಗೇಡಿನ
ಸಂಗತಿ.ಅಂಗನವಾಡಿಗೆ ಎಲ್ಲಾ ಧರ್ಮ ಹಾಗೂ ಭಾಷೆಯ ಎಳೆ ವಯಸ್ಸಿನ ಮಕ್ಕಳು ಆಗಮಿಸುತ್ತಾರೆ.ಅಲ್ಲಿ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದು ಖಂಡನೀಯ. ಕನ್ನಡಕ್ಕೆ ದ್ರೋಹ ಬಗೆಯುವ ಜೊತೆಗೆ ಇತರೆ ಜನಾಂಗದವರು ಈ ಹುದ್ದೆಗೆ ಅರ್ಜಿ ಸಲ್ಲಿಸದಂತೆ ವ್ಯವಸ್ಥಿತ ಪಿತೂರಿ ನಡೆದಿದೆ.ಈ ಅವೈಜ್ಞಾನಿಕ ಆದೇಶವನ್ನು 2 ದಿನದಲ್ಲಿ ರದ್ದುಗೊಳಿಸಬೇಕು.ಇಲ್ಲವಾದರೆ ಎಲ್ಲಾ ಕನ್ನಡಪರ ಸಂಘಟನೆಗಳ ಸಭೆ ಕರೆದು ಬೃಹತ್ ಪ್ರತಿಭಟನೆ
ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ,ಮುಖಂಡರಾದ ಎಂ.ಎ.ಶ್ರೇಷ್ಟಿ,ವಿಶ್ವ ಹಾರ್ಲಗದ್ದೆ,ಗೀತಾ
ಛತ್ರಮೈದಾನ ಮತ್ತಿತರರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು ಮಾತನಾಡಿ, ಅಂಗನವಾಡಿ ಕೇoದ್ರವಿರುವ ಪ್ರದೇಶದಲ್ಲಿ ಎಲ್ಲಾ ಧರ್ಮಿಯರು, ಭಾಷಿಕರು ಇದ್ದಾರೆ. ಆದರೆ ಹುದ್ದೆಗೆ ಅರ್ಜಿ ಹಾಕಬಯಸುವವರು ಕಡ್ಡಾಯವಾಗಿ ಉರ್ದು ಕಲಿತಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿರುವುದರಿಂದ ಮೂಡಿಗೆರೆ ಕರ್ನಾಟಕದಲ್ಲಿದೆಯೇ ಅಥವಾ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿದೆಯೇ ಎಂಬ ಅನುಮಾನ ಮೂಡಿದೆ.ಇದು ಒಂದು ಕೋಮಿಗೆ ಹುದ್ದೆ ನೀಡಲು ನಡೆಸಿದ ಹುನ್ನಾರವಾಗಿದೆ. ಸರ್ಕಾರ ಇಂತಹ ನಿರ್ಧಾರದಿಂದದ ಹಿಂದೆ ಸರಿಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದರು.
……….. ವರದಿ: ವಿಜಯಕುಮಾರ್.ಟಿ.ಮೂಡಿಗೆರೆ