ಬೇಲೂರು;ನಾನು ರಾಜಕಾರಣಕ್ಕೆ ಹಣ ಮಾಡುವ ಉದ್ದೇಶದಿಂದ ಬಂದಿಲ್ಲ.ಜನರ ಸೇವೆ ಮಾಡುವುದಷ್ಟೇ ನನ್ನ ಗುರಿ ಎಂದು ಶಾಸಕ ಹೆಚ್ ಕೆ ಸುರೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ 2023 -24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನ ಆಶಯಗಳಂತೆ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ.ಭಗವಂತ ನನಗೆ ಸಾಕಷ್ಟು ಆಸ್ತಿ-ಅಂತಸ್ತನ್ನು ನೀಡಿದ್ದು,ನಾನು ರಾಜಕಾರಣಕ್ಕೆ ಬಂದಿರುವ ಮುಖ್ಯ ಉದ್ದೇಶವೇ ಜನಸೇವೆಯಾಗಿದೆ .ಸರಕಾರದ ಎಲ್ಲ ಯೋಜನೆಗಳನ್ನು ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸವನ್ನು ನಾನು ಮಾಡಲಿದ್ದೇನೆ.ಜಾತಿ-ಧರ್ಮ ಇತ್ಯಾದಿಗಳ ಭೇದವಿಲ್ಲದೆ ಸರ್ವರನ್ನು ಸಮಾನವಾಗಿ ಕಾಣುತ್ತೇವೆ ಎಂದು ಬಾಬಾಸಾಹೇಬರ ಸಂವಿಧಾನದ ಮೇಲೆ ನಾವು ವಿಧಿ ತೆಗೆದುಕೊಂಡಿದ್ದು ಅದರಂತೆಯೇ ನಡೆದುಕೊಂಡು ಬಂದಿದ್ದು ಮುಂದೆಯೂ ಹಾಗೆಯೆ ಇರಲಿದ್ದೇನೆ ಎಂದರು.
ಡಾ.ಅಂಬೇಡ್ಕರ್ ರವರ ಆಶಯದಂತೆ ನಾವುಗಳೆಲ್ಲರೂ ಸಮ ಸಮಾಜ ನಿರ್ಮಿಸಲು ಕೆಲಸ ಮಾಡಬೇಕಿದೆ.ಈ ಸಹಕಾರ ಸಂಘದ ಬೆಳವಣಿಗೆಗೆ ಅನುದಾನ ಕೊಡಲಿದ್ದೇನೆ.ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಗೆ 38 ಲಕ್ಷ ರೂ,ಅನುದಾನವಿದ್ದು ಈ ಹಣದಲ್ಲಿ ಭವನದ ಹಿಂಭಾಗದಲ್ಲಿರುವ ನಿವೇಶನದಲ್ಲಿ ಅಡುಗೆ ಮನೆ ನಿರ್ಮಿಸಿ ಕಾರ್ಯಕ್ರಮ ಮಾಡುವುದಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.ಎ.ವಿ.ಎಸ್ಎಸ್ ಸಹಕಾರ ಸಂಘವು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು,ಈ ಸಂಘಕ್ಕೆ ನಾನೂ ಸಹ ಸದಸ್ಯನಾಗಿ ಹಣವನ್ನು ಠೇವಣಿ ಇಟ್ಟು ಸಂಘದ ಬೆಳವಣಿಗೆಗೆ ಮುಂದಾಗಲಿದ್ದೇನೆ ಎಂದರು.
ರೂಲರ್ಸ್ ಚಿತ್ರದ ನಟ ಹಾಗೂ ಸಾಮಾಜಿಕ ಹೋರಾಟಗಾರ ಸಂದೇಶ್ ಮಾತನಾಡಿ,ಈ ಎವಿಎಸ್ಎಸ್ ಸಂಘ ರಾಜ್ಯದಲ್ಲಿ 12ವರ್ಷಗಳಿಂದ ಉತ್ತಮವಾಗಿ ಬೆಳೆಯುತ್ತ ಸಮುದಾಯದ ಬೆಳವಣಿಗೆಗೆ ಪೂರಕವಾಗಿದೆ.ಇದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು.ಇತರೆ ಸಮುದಾಯದ ಸಂಘಗಳು ಯಾವ ರೀತಿ ಅವರ ಸಮುದಾಯದ ಅಭಿವೃದ್ಧಿಗೆ ಮುಂದಾಗಿವೆಯೊ ಅವರಂತೆ ನಾವೂ ಸಹ ಸಂಘಟಿತರಾಗಿ ಸಹಕಾರ ಸಂಘದ ಮೂಲಕ ಆರ್ಥಿಕವಾಗಿ ಸಭಲರಾಗಬೇಕು.ಹಾಗಾದಾಗ ಮಾತ್ರ ನಾವುಗಳು ಸಹ ಎಲ್ಲರಂತೆ ಮುಂದೆ ಸಾಗಲು ಸಾಧ್ಯವಾಗುತ್ತದೆ.ನಮ್ಮ ಸಮುದಾಯದವರು ನಮ್ಮವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬಹುದು. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ಎ.ವಿ.ಎಸ್ಎಸ್ ಷೇರುದಾರರಾಗಿ, ಠೇವಣಿ ಇಟ್ಟು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಎ.ವಿ.ಎಸ್ಎಸ್ ನ ಬೇಲೂರು ಬ್ರಾಂಚಿನ ಅಧ್ಯಕ್ಷರಾದ ಡಾ.ಎಂ.ಎಂ.ರಮೇಶ್ ಮಾತನಾಡಿ,ಎ.ವಿ.ಎಸ್ಎಸ್ ನ್ನು ಸ್ನೇಹಿತರ ಸಹಕಾರದೊಂದಿಗೆ ಕಳೆದ ಫೆಬ್ರವರಿ ಯಲ್ಲಿ ಉದ್ಘಾಟಿಸಿದೆವು,ಎರಡು ವರ್ಷದಿಂದ ಈ ಸಂಘದ ಬೆಳವಣಿಗೆಗೆ ಕೆಲಸ ಮಾಡಿದ್ದೇವೆ.ಇಲ್ಲಿ 800 ಜನ ಷೇರುದಾರರು ಇದ್ದಾರೆ.ಜತೆಗೆ ಕೆಲವರ 13 ಲಕ್ಷ ರೂ, ಠೇವಣಿ ಹಣ ಇದೆ.ಆ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದೇವೆ.ಸಾಲ ಪಡೆದವರು ಸಕಾಲಕ್ಕೆ ಸಾಲ ಕಟ್ಟುವ ಮೂಲಕ ಸಂಘದ,ಹಾಗೂ ಸಮುದಾಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು.ಮುಂದಿನ ವರ್ಷ ಸಂಘದ ವಹಿವಾಟನ್ನು 50 ಲಕ್ಷ ರೂಪಾಯಿಗಳಿಗೆ ಏರಿಸುವುದಕ್ಕೆ ಕ್ರಮ ಕೈಗೊಳ್ಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ.ಶಾಂತಕುಮಾರ್, ಸಿ.ಎನ್.ದಾನಿ, ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ದಸಂಸ(ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಬಿ.ಎಲ್.ಲಕ್ಷ್ಮಣ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಉದ್ಯಮಿ ಸತೀಶ್, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ಚಂದ್ರಶೇಖರ್, ಮುಖಂಡರಾದ ವೆಂಕಟೇಶ್, ಓಂಕಾರಮೂರ್ತಿ, ಬಾಬು, ಸೋಮಶೇಖರ್, ಸಿದ್ಧಯ್ಯ, ಮಂಜುನಾಥ್, ವಿರೂಪಾಕ್ಷ, ಪ್ರವೀಣ್ ಬೌದ್, ದೇವರಾಜು, ಗಂಗಾಧರ್ ರಂಗನಾಥ್ ಡಿ.ಎಮ್ ಸೇರಿದಂತೆ ಸಂಘದ ಸದಸ್ಯರು ಇದ್ದರು.
——————–-ರವಿಕುಮಾರ್