ಮೈಸೂರು:ಈ ಬಾರಿ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಅದ್ಧೂರಿಯಾಗಿ ಬೃಹತ್ ಮೆರವಣಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು,ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೂ ಭಾಗಿಯಾಗುವ ಹಿನ್ನೆಲೆಯಲ್ಲಿ ಆಚರಣೆಯ ಸಿದ್ಧತೆಯ ಕುರಿತು ಇಂದು ಕೆ.ಎಸ್.ಟಿ.ಡಿ.ಸಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಅವರೊಂದಿಗೆ ಪ್ರವಾಸೋದ್ಯಮದ ನೇರ ಪಾಲುದಾರರು ಮೂರನೆಯ ಸುತ್ತಿನ ಸಭೆ ನಡೆಸಿ ಚರ್ಚಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಅವರು, ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಘೋಷವಾಕ್ಯ ಪ್ರವಾಸೋದ್ಯಮ ಹಾಗೂ ಶಾಂತಿ.ಈ ಸಂದೇಶವನ್ನು ಸಾರಲು ಸಾಂಸ್ಕೃತಿಕ ಮೆರವಣಿಗೆ ನಡೆಸಲಾಗುವುದು.ಅರಮನೆಯ ಮುಂಭಾಗದಿಂದ ಆರಂಭವಾಗುವ ಈ ಮೆರವಣಿಗೆ ಕೆ.ಆರ್.ವೃತ್ತದ ಮಾರ್ಗವಾಗಿ ಸಾಗಿ ಹೈವೇ ವೃತ್ತದಲ್ಲಿ ಕೊನೆಗೊಳ್ಳಲಿದೆ.
ಶಾಂತಿ ಹಾಗೂ ನಮ್ಮ ಸಂಸ್ಕೃತಿಯ ಸಂಕೇತವಾಗಿ ಎಲ್ಲರೂ ಸಾಂಪ್ರದಾಯಕ ಬಿಳಿ ಉಡುಗೆಯನ್ನು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಸಾಂಸ್ಕೃತಿಕ ಕಲಾತಂಡಗಳು, ದಸರಾ ಆನೆಗಳು, ಅಶ್ವಾರೋಹಿದಳ ಎಲ್ಲವೂ ಮೆರವಣಿಗೆಯಲ್ಲಿ ಇರಲಿವೆ. ಮೈಸೂರು ಪ್ರವಾಸೋದ್ಯಮದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಮಹಾಜನ ಕಾಲೇಜು, ವಿದ್ಯಾವಿಕಾಸ್ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಟೂರಿಸಂ ಹಾಗೂ ಹಾಸ್ಪಿಟಾಲಿಟಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಹಲವಾರು ಪ್ರಮುಖರು ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ.ನಾರಾಯಣಗೌಡ, ಮೈಸೂರು ಟ್ರಾವಲ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಬಿ.ಎಸ್.ಪ್ರಶಾಂತ್, ಸ್ಕಾಲ್ ಇಂಟರ್ನ್ಯಾಷನಲ್ ಮೈಸೂರು ಅಧ್ಯಕ್ಷರಾದ ಸಿ.ಎ.ಜಯಕುಮಾರ್, ಯೋಗ ಫೆಡೆರೇಶನ್ ಮೈಸೂರು ಅಧ್ಯಕ್ಷರಾದ ಶ್ರೀಹರಿ ಡಿ., ಟೂರಿಸ್ಟ್ ಗೈಡ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಎಸ್.ಜೆ.ಅಶೋಕ್, ಪ್ರವಾಸಿ ವಾಹನ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷರಾದ ನಾಗರಾಜ್, ಸಮರ್ಥ್ ವೈದ್ಯ, ರವೀಂದ್ರ ಭಟ್, ಮಹೇಶ್ ಕಾಮತ್, ಭರತ್ ಗೌಡ, ಜಾರ್ಜ್ ಜೇಸನ್, ವಿನಯ್ ಕುಮಾರ್ ಮತ್ತಿತರರು ಸಭೆಯಲ್ಲಿದ್ದರು.
————–ಮಧುಕುಮಾರ್