ನಾಗಮಂಗಲ;ಜಗತ್ತಿನ ಕಲಾ ಪರಂಪರೆಗೆ ಜಾನಪದವೇ ಮೂಲ, ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಗುರುತರವಾದ ಜವಾಬ್ದಾರಿಯಾಗಿದೆ,ಅದಕ್ಕಾಗಿ ಗುರೂಜಿ ಹಾಗೂ ಶ್ರೀ ಮಠಕ್ಕೆ ಅಭಿನಂದನೆಗಳು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅಭಿಮಾನ ವ್ಯಕ್ತಪಡಿಸಿದರು.
ಇಂದು ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾ ಮಂಟಪದಲ್ಲಿ ನಡೆದ ರಾಜ್ಯಮಟ್ಟದ 45 ನೇ “ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳ” ಹಾಗೂ “ಚುಂಚಶ್ರೀ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜಾನಪದ ಕಲಾವಿದರನ್ನು ನೋಡಿದರೆ ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿಯ ಹಿರಿಮೆ ಹೆಮ್ಮರವಾಗಿ ಅನಾವರಣಗೊಂಡಿದೆ ಎಂದು ಭಾವಿಸುತ್ತೇನೆ.ಶ್ರೀಕ್ಷೇತ್ರದ ವತಿಯಿಂದ ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಾಡಿನ ಮಕ್ಕಳಿಗೆ ಜ್ಞಾನ ದೀಕ್ಷೆ ನೀಡಿ,ಸಾಮಾನ್ಯ ಮಕ್ಕಳೂ ಜಾಗತಿಕ ಮಟ್ಟದಲ್ಲಿ ವಿಜ್ಞಾನ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆಯುವಲ್ಲಿ ಸಫಲರಾಗುತ್ತಿದ್ದಾರೆ.ನಾಲ್ವರು ಮಹನೀಯರು ಬದುಕಿನ ಯಶಸ್ಸಿಗೆ ಕಾರಣವಾದ ಸಾಧನೆಯ ದ್ಯೋತಕವಾಗಿ ಇಂದು ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ ಜಾನಪದ ಕಲಾವಿದರು ಹಾಗೂ ಚುಂಚಶ್ರೀ ಪ್ರಶಸ್ತಿ ಪಡೆದಿರುವ ಸಾಧಕರಂತೆ ಯುವಕರೂ ಕೂಡಾ ಮಹತ್ವವನ್ನು ಸಾಧಿಸಿ ನಾಡಿನ ಹಿರಿಮೆಯನ್ನು ಬೆಳಗಿಸುವ ಬೆಳಕಾಗಲಿ ಎಂದು ಹರಸಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸುದ್ದಿ ವಿಶ್ಲೇಷಕ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್ ಆರ್ ರಂಗನಾಥ್ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಯವರೊಂದಿಗಿನ ತಮ್ಮ ಒಡನಾಟ ಬಾಂಧವ್ಯಗಳು ವಯಸ್ಸನ್ನು ಮೀರಿದ್ದು, ಭಾವನೆ ಮತ್ತು ಮಾತೃತ್ವಕ್ಕೆ ಸಂಬಂಧಿಸಿದ್ದು ಎಂದು ಸ್ಮರಿಸಿಕೊಳ್ಳುತ್ತಾ ಈ ವೇದಿಕೆಯಲ್ಲಿ ಮಹನೀಯ ಸಾಧಕರಿಗೆ ನೀಡಿದ ಚುಂಚಶ್ರೀ ಪ್ರಶಸ್ತಿಯು ಈ ನಾಲ್ವರಿಗೆ ಮಾತ್ರ ನೀಡಿದ ಪುರಸ್ಕಾರವಲ್ಲ, ನಮ್ಮ ಸಮಾಜಕ್ಕೇ ಹೆಗ್ಗಳಿಕೆಯಾಗಿ ನಮ್ಮನ್ನು ನಾವು ಗೌರವಿಸಿಕೊಂಡಂತಿದೆ.ಈ ಸಾಧಕರ ಅನೌಪಚಾರಿಕ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ, ಶ್ರೀ ಮಠದಿಂದ ಇಂತಹ ನೂರಾರು ಸಾರ್ಥಕ ಕಾರ್ಯಗಳು ಸದಾ ಸಾಧ್ಯವಾಗುತ್ತಿರಲಿ ಎಂದು ಹಾರೈಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಆಶೀರ್ವಚನ ನೀಡಿ ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಸ್ಮರಿಸುತ್ತಾ ಜಾನಪದವು ದೀರ್ಘಕಾಲದ ಬೇರು,ಈ ಬೇರನ್ನು ಮರೆತರೆ ಭವಿತವ್ಯವಿಲ್ಲ.ಮೂಲವನ್ನು ಕಾಪಾಡುವ ಜವಾಬ್ದಾರಿ ನಮ್ಮದು ಜಾನಪದದ ಬೇರನ್ನು ಉಳಿಸಿ ಬೆಳೆಸಿ ಎಂದರು.ಪಂಚಭೂತಗಳು ಹಾಗೂ ಜಗತ್ತಿನ ಸೃಷ್ಟಿಗೆ ಸಂಬಂಧಪಟ್ಟ ಜಾನಪದ ಕಥೆಯನ್ನು ಸಮೀಚೀನ ಗೊಳಿಸುತ್ತಾ, ವಿಜ್ಞಾನ ತಂತ್ರಜ್ಞಾನದ ಫಲದಿಂದ ಜಗತ್ತು ಬೆಳೆದಿದೆ ಆದರೆ ಹೆಚ್ಚಾಗಿ ನೆಚ್ಚಿಕೊಂಡರೆ ವಿನಾಶ ಸಂಭವಿಸಲಿದೆ.ನಾಗಾಲೋಟದಲ್ಲಿ ಓಡುವ ವಿಶ್ವದ ಪ್ರಗತಿಯ ಜೊತೆಗೆ ಜ್ಞಾನವು ಬದುಕಿನ ಭಾಗವಾಗಲಿ ಎಂದರು.
ನಾಗಮಂಗಲವು ಜಾನಪದದ ಗಂಗೋತ್ರಿ. ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಈ ಜಾನಪದ ಜಾತ್ರೆಯೊಂದಿಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ನೀಡುತ್ತಿರುವುದು ಶ್ರೀ ಮಠದ ಸಂಕಲ್ಪ ವಾಗಿದೆ. ನಿಜದ ಬದುಕು ಹಳ್ಳಿಯಲ್ಲಿದೆ ಅಲ್ಲಿಂದಲೇ ಜನಪದ ಆರಂಭವಾಗುವುದು ಎಂದು ಆಶೀರ್ವದಿಸಿದರು.
ಚುಂಚಶ್ರೀ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದ ಮಾಜಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಹಾಗೂ ಮಾಜಿ ಸಚಿವ ಪಾಂಡವಪುರ ಪುಟ್ಟರಾಜು ಮಾತನಾಡಿದರು.
ಕನ್ನಡ ಸಾಹಿತ್ಯ ಹಾಗೂ ಜಾನಪದ ವಿದ್ವಾಂಸರು 'ಡಾ.ರಾಗೌ' ಎಂದೇ ಖ್ಯಾತರಾದ ಮದ್ದೂರಿನ ಡಾ. ರಾಮೇಗೌಡ, ಸಾರ್ಥಕ ಸಮಾಜ ಸೇವೆಯ ಹರಿಕಾರ ತೀರ್ಥಹಳ್ಳಿಯ ಹಿರಿಯಣ್ಣ ಹೆಗಡೆ, ಶಿಕ್ಷಣ ಕ್ಷೇತ್ರದ ಅನನ್ಯ ಸಾಧಕರಾದ ಹೆಚ್ ಡಿ ಕೋಟೆಯ ಕೆ ಪಿ ಬಸವೇಗೌಡ ಮತ್ತು ಶ್ರೀಕೃಷ್ಣ ಪಾರಿಜಾತ, ದೊಡ್ಡಾಟದ ಜಾನಪದ ಕಲಾವಿದೆ ಮಲ್ಲವ್ವ ಬಸಪ್ಪ ಮೇಗೇರಿ ಇವರನ್ನು ಜೋಡಿ ರಥದಲ್ಲಿ, ಸಾವಿರಾರು ಸಂಖ್ಯೆಯ ಜಾನಪದ ಕಲಾವಿದರ ಕಲಾಪ್ರಕಾರಗಳು, ಜನಸ್ತೋಮದ ಹರ್ಷೋದ್ಗಾರದ ನಡುವೆ ಮೆರವಣಿಗೆ ಮೂಲಕ ಕರೆತಂದು, ಬಿಜಿಎಸ್ ಸಭಾ ಮಂಟಪದ ವೇದಿಕೆಯಲ್ಲಿ ವಿದ್ವಜ್ಜನರ ಸಮ್ಮುಖದಲ್ಲಿ ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಪ್ರಶಸ್ತಿ ಪಡೆದ ಕಂಚನಹಳ್ಳಿ ಕೆ ಎನ್ ಪುಟ್ಟೇಗೌಡರು ಅನಾರೋಗ್ಯದ ನಿಮಿತ್ತ ಗೈರುಹಾಜರಿದ್ದರು.
ಪ್ರಶಸ್ತಿಯು ವಿಶೇಷ ಸ್ಮರಣಕೆ, ಐವತ್ತು ಸಾವಿರ ನಗದು, ಪ್ರಶಸ್ತಿ ಪತ್ರ, ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ತಳಿ, ಏಲಕ್ಕಿ ಹಾರ, ಕ್ಷೇತ್ರದ ಗ್ರಂಥಗಳು, ಫಲತಾಂಬೂಲ ಇತ್ಯಾದಿ ಒಳಗೊಂಡಿರುತ್ತದೆ.
ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿದ ಮಹನೀಯರ ಪರವಾಗಿ ಸಾಹಿತಿ, ಜಾನಪದ ವಿದ್ವಾಂಸರಾದ ಡಾ. ರಾಮೇಗೌಡ ಮಾತನಾಡಿದರು.
ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ಸುರೇಶ್ ಗೌಡ, ಶಾಖಾ ಮಠಗಳ ಪೂಜ್ಯರುಗಳಾದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ ಎ ಶೇಖರ್, ಗಣ್ಯರು ಹಾಗೂ ಇತರರಿದ್ದರು.
ನಂತರ ಗೋಧೂಳಿ ಸಮಯದಲ್ಲಿ ಕ್ಷೇತ್ರದ ಜೋಡಿ ರಸ್ತೆಯಲ್ಲಿ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ, ಜಾನಪದ ಕಲಾ ತಂಡಗಳ ಮೆರವಣಿಗೆ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮಗಳು ಜರುಗಿದವು.
————ಬಿ.ಹೆಚ್. ರವಿ, ನಾಗಮಂಗಲ