ಚಿಕ್ಕಮಗಳೂರು;ಬಿಜೆಪಿ ಅಧಿಕಾರ ಅಥವಾ ಚುನಾವಣೆಗಾಗಿ ದುಡಿಯುವ ಪಕ್ಷವಲ್ಲ,ಜನಸಾಮಾನ್ಯರ ಏಳಿಗೆಗೆ ಹಾಗೂ ದೇಶದ ಹಿತಕ್ಕಾಗಿ ದುಡಿಯುತ್ತಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಧಾನಮಂತ್ರಿಗಳ ಹುಟ್ಟುಹಬ್ಬದ ಸೇವಾ ಪಾಕ್ಷಿಕ ಹಿನ್ನೆಲೆ ಜಿಲ್ಲಾ ಬಿಜೆಪಿ ಯುವಮೋರ್ಚಾ ಏರ್ಪಡಿಸಿದ್ಧ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿಗಳ ಹುಟ್ಟುಹಬ್ಬದ ದಿನದಿಂದ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಅದರಂತೆ ಬಿಜೆಪಿ ಯುವಮೋರ್ಚಾಕ್ಕೆ ರಕ್ತದಾನ ಶಿಬಿರದ ಆಯೋಜಿಸಲು ಸೂಚಿಸಿದ್ದು ಇಂದು ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಂಡು ಮೋದಿಯವರ ಸೇವೆಗೆ ಕೈಜೋಡಿಸಿದ್ದಾರೆ ಎಂದರು.
ಕಚೇರಿಯಲ್ಲಿ ಸಂಗ್ರಹಗೊoಡ ರಕ್ತವನ್ನು ಜಿಲ್ಲಾಸ್ಪತ್ರೆಯ ಬಡರೋಗಿಗಳಿಗೆ ತುರ್ತು ಸಂದರ್ಭದಲ್ಲಿ ವಿತರಿಸಲಾಗುವುದು.ಈ ಮೂಲಕ ರೋಗಿಗಳ ಜೀವ ಉಳಿಸಲು ಬಿಜೆಪಿ ಯುವಮೋರ್ಚಾ ಮುಂದಾಗಿರುವುದು ಹೆಮ್ಮೆಯ ಸಂಗತಿ.ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ ರಕ್ತದಾನ ಮಾಡುವಂತೆ ಅವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ದೇಶಾದ್ಯಂತ ಪ್ರಧಾನಿಗಳ ಜನ್ಮದಿನದಿಂದ ಗಾಂಧಿಜಯoತಿವರೆಗೆ ಬಿಜೆಪಿ ಹಲವಾರು ಸೇವಾ ಸಪ್ತಾಹ ಹಮ್ಮಿಕೊಂಡಿದೆ.ಅದರಂತೆ ಇಂದು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಾಷ್ಟ್ರ ನಾಯಕರ ಸೂಚನೆಯನ್ವಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಅನೇಕ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸೇವಾ ಪಾಕ್ಷಿಕ ನಡೆಯುತ್ತಿದೆ.ಯುವಸಮೂಹ ಭಯಗೊಳ್ಳದೇ ಮುಕ್ತವಾಗಿ ರಕ್ತದಾನಕ್ಕೆ ಮುಂದಾಗಬೇಕು.ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ.ಆರೋಗ್ಯಯುತ ಶಾರೀರ ಹೊಂದಲು ಸಹಾಯವಾಗಲಿದೆ ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ ರಕ್ತದಾನ ಮತ್ತೊಂದು ಜೀವ ಉಳಿಸುವ ಮಹತ್ತರ ಕಾರ್ಯ. ಹೀಗಾಗಿ ಧೈರ್ಯವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.ಜೊತೆಗೆ ಪ್ರಧಾನಿಗಳ ಆಶಯವನ್ನು ಪೂರೈಸಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರುಗಳಾದ ಜೀವನ್ ರಂಗನಾಥ್, ಪುನೀತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
——————ಸುರೇಶ್