ಕೊರಟಗೆರೆ:-ನಾವು ಹಿಂದಿನಿಂದಲೂ ಜಮೀನುಗಳಿಗೆ,ಕೆರೆಗೆ ಓಡಾಡಲು ಬಳಸುತ್ತಿದ್ದ ನಕಾಶೆಯಲ್ಲಿ ನಮೂದಾಗಿರುವ ರಸ್ತೆಯನ್ನು ಬೆಂಗಳೂರಿನ ಸಂಪಂಗಿ ಎಂಬ ವ್ಯಕ್ತಿಯೊಬ್ಬ ಅತೀಕ್ರಮಿಸಿ ಬೇಲಿ ಹಾಕಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾನೆ.ಕೇಳಲು ಹೋದರೆ ಧಮ್ಕಿ ಹಾಕಿ ಬೆದರಿಸುತ್ತಾನೆ ಎಂದು ವೆಂಕಟಾಪುರ ಗ್ರಾಮದ ರೈತರು ಅಳಲು ತೋಡಿಕೊಂಡರು.
ಇಂದು ಪತ್ರಕರ್ತರನ್ನು ಗ್ರಾಮಕ್ಕೆ ಆಹ್ವಾನಿಸಿ ತಮ್ಮ ಕಷ್ಟ ಹೇಳಿಕೊಂಡ ರೈತರು,ನಮ್ಮ ಅಜ್ಜ ಮುತ್ತಾತರ ಕಾಲದಿಂದಲೂ ಅದೇ ರಸ್ತೆಯನ್ನು ನಾವುಗಳು ನಮ್ಮ ಜಮೀನುಗಳಿಗೆ ಓಡಾಡಲು ಹಾಗು ಜಾನುವಾರುಗಳಿಗೆ ನೀರುಣಿಸಲು ಕೆರೆಗೆ ಹೋಗುವ ಸಲುವಾಗಿ ಬಳಸುತ್ತಿದ್ದೆವು.
ಬೆಂಗಳೂರಿನ ವ್ಯಕ್ತಿ ಸಂಪಂಗಿ ಎಂಬುವವರು ಆ ರಸ್ತೆ ಹಾದುಹೋಗುವ ಜಮೀನುಗಳನ್ನು ಕ್ರಯಕ್ಕೆ ಕೊಂಡಿದ್ದು,ಅದಕ್ಕೆ ಬೇಲಿ ಹಾಕಲು ಮುಂದಾದಾಗ ಗ್ರಾಮಸ್ಥರೆಲ್ಲ ಒಟ್ಟಿಗೆ ಹೋಗಿ ಆತನಿಗೆ ರಸ್ತೆ ವಿಷಯವನ್ನು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದೆವು.
ನಮ್ಮ ಮಾತಿಗೆ ಕಿವಿಗೊಡದ ಆತ ರಸ್ತೆಯನ್ನು ಸೇರಿಸಿಕೊಂಡು ಬೇಲಿ ಮಾಡಿಕೊಂಡ.ಪ್ರಶ್ನೆ ಮಾಡಲು ಹೋದ ನಮಗೆ ಧಮಕಿ ಹಾಕಿ ಅದೇನು ಮಾಡುತ್ತೀರಿ ಮಾಡಿ ಎಂದು ಬೆದರಿಸಿದ.
ನಾವು ವಿಧಿ ಇಲ್ಲದೆ ತಹಶೀಲ್ದಾರ್ ಮಂಜುನಾಥ್ ಕೆ ರವರಿಗೆ ಅವನು ಅತಿಕ್ರಮಿಸಿಕೊಂಡಿರುವ ರಸ್ತೆಯನ್ನು ಬಿಡಿಸಿಕೊಡುವಂತೆ ಮನವಿ ಮಾಡಿಕೊಂಡೆವು.ಅವರು ತಾಲೂಕು ಸರ್ವೇ ಅಧಿಕಾರಿಗೆ ಹಾಗು ರೆವೆನ್ಯೂ ಇನ್ಸ್ಪೆಕ್ಟರ್ ಗೆ ತಿಳಿಸಿ ಸರ್ವೇ ನಡೆಸಿ ರಸ್ತೆ ಬಿಡಿಸಿಕೊಡುವಂತೆ ಹೇಳಿದ್ದರು.ಆದರೆ ಆ ಅಧಿಕಾರಿಗಳು ಕಾಟಾಚಾರಕ್ಕೆ ಸರ್ವೇ ನಡೆಸಿ ಮತ್ತೆ ಮಗುಮ್ಮಾಗಿದ್ದಾರೆ.ನಾವು ಕೇಳಲು ಹೋದರೆ ದಿನ ದೂಡುತ್ತಾರೆಯೇ ಹೊರತು ನ್ಯಾಯ ಒದಗಿಸುತ್ತಿಲ್ಲ ಎಂದು ದೂರಿದರು.
ಇಷ್ಟೇ ಅಲ್ಲದೆ ಬೆಂಗಳೂರಿನ ಭೂಪ ಸಂಪಂಗಿ ರಾಜಕಾಲುವೆಯನ್ನು ಮುಚ್ಚಿ ಅದರ ಮೇಲೆ ಮನೆ ನಿರ್ಮಿಸಿಕೊಂಡಿರುವ ಮಾಹಿತಿಯನ್ನು ರೈತರು ಬಹಿರಂಗಗೊಳಿಸಿದರು.
ಸದ್ಯ ನಮ್ಮ ಜಮೀನುಗಳಿಗೆ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ.ಜೊತೆಗೆ ಜಾನುವಾರುಗಳಿಗೆ ನೀರುಣಿಸಲು ಕೆರೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳಲೆಲ್ಲ ಸಂಪಂಗಿಯ ಸಂಪತ್ತಿಗೆ ಮಾರುಹೋಗಿ ನಮಗೆ ನ್ಯಾಯ ನೀಡುತ್ತಿಲ್ಲ.ಒಂದು ವೇಳೆ ಕೆಲವೇ ದಿನಗಳಲ್ಲಿ ಸಂಪಂಗಿಯ ಹಿಡಿತದಲ್ಲಿರುವ ನಕಾಶೆ ಗುರುತಿನ ರಸ್ತೆಯನ್ನು ನಮಗೆ ಬಿಡಿಸಿಕೊಡದೆ ಹೋದಲ್ಲಿ ರಾಷ್ಟ್ರಪತಿಗಳಿಗೆ ಹಾಗು ಉಚ್ಚನ್ಯಾಯಾಲಯದ ಮಾನ್ಯ ಮುಖ್ಯ ನ್ಯಾಯಾಧೀಶರಿಗೆ ಇಚ್ಛಾಮರಣ ಕಲ್ಪಿಸುವಂತೆ ಮನವಿ ಮಾಡಿ ಪತ್ರ ಬರೆಯಲಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇನ್ನಾದರೂ ತಾಲೂಕು ಆಡಳಿತ ಎಚ್ಚರಗೊಂಡು ರೈತರಿಗೆ ನ್ಯಾಯ ಕೊಡಿಸಲು ಮುಂದಾಗುತ್ತದೆಯಾ?ಕಾದು ನೋಡಬೇಕಾಗಿದೆ.
ಈ ಸಂದರ್ಭದಲ್ಲಿ ರೈತರುಗಳಾದ ವೆಂಕರಾಮಣಪ್ಪ, ದೊಡ್ಡರಂಗಯ್ಯ, ದೊಡ್ಡಯ್ಯ,ರಂಗಶಾಮಯ್ಯ, ಹನುಮಂತ ರಾಯಪ್ಪ,ರಾಕೇಶ್,ನಾರಾಯಣಪ್ಪ,ಕುಮಾರ ಸೇರಿದಂತೆ ಇತರರು ಇದ್ದರು.
————————————ಶ್ರೀನಿವಾಸ್ ಕೊರಟಗೆರೆ